AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್‌ ಒಡೆತನದ ಮನ್ನತ್ ಬಂಗಲೆಯ ನವೀಕರಣ ಪ್ರಶ್ನಿಸಿದ್ದ ಅರ್ಜಿ ವಜಾ

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರು ಮನ್ನತ್ ಬಂಗಲೆಯ ಆವರಣದಲ್ಲಿರುವ ಆರು ಅಂತಸ್ತಿನ ಕಟ್ಟಡಕ್ಕೆ ಹೆಚ್ಚುವರಿಯಾಗಿ ಇನ್ನೂ ಎರಡು ಮಹಡಿಗಳನ್ನು ನಿರ್ಮಿಸಲು ಪ್ರಸ್ತಾಪಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದರಿಂದ ಮನ್ನತ್ ಬಂಗಲೆಯ ವಿಸ್ತರಣಾ ಕಾರ್ಯ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದೆ.

ಶಾರುಖ್ ಖಾನ್‌ ಒಡೆತನದ ಮನ್ನತ್ ಬಂಗಲೆಯ ನವೀಕರಣ ಪ್ರಶ್ನಿಸಿದ್ದ ಅರ್ಜಿ ವಜಾ
Shah Rukh Khan, Gauri Khan, MannatImage Credit source: PTI
ಮದನ್​ ಕುಮಾರ್​
|

Updated on:Jul 14, 2026 | 9:38 PM

Share

ಮುಖ್ಯಾಂಶಗಳು

  • ಸುಪ್ರೀಂ ಕೋರ್ಟ್ ತೀರ್ಪು: ಶಾರುಖ್ ಖಾನ್ ಅವರ ‘ಮನ್ನತ್’ ಬಂಗಲೆ ನವೀಕರಣ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
  • ನ್ಯಾಯಾಲಯದ ಸ್ಪಷ್ಟನೆ: ಕಾನೂನಿನ ಮಿತಿಯಲ್ಲಿದ್ದುಕೊಂಡು ತಮ್ಮ ಖಾಸಗಿ ಮನೆಯನ್ನು ನವೀಕರಿಸುವ ಹಕ್ಕು ಪ್ರತಿಯೊಬ್ಬ ಮಾಲೀಕರಿಗೂ ಇರುತ್ತದೆ ಎಂದು ಕೋರ್ಟ್ ಹೇಳಿದೆ.
  • ಗ್ರೀನ್ ಸಿಗ್ನಲ್: ಪರಿಸರ ನಿಯಮಗಳ ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ಬಂಗಲೆಯ ವಿಸ್ತರಣಾ ಕಾರ್ಯಕ್ಕೆ ಇದ್ದ ಅಡೆತಡೆ ನಿವಾರಣೆಯಾಗಿದೆ.

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಹಾಗೂ ಪತ್ನಿ ಗೌರಿ ಖಾನ್ ಅವರಿಗೆ ಸೇರಿದ ಮುಂಬೈನ ಬಾಂದ್ರಾದಲ್ಲಿರುವ ಪ್ರಸಿದ್ಧ ‘ಮನ್ನತ್’ (Mannat) ಬಂಗಲೆಯ ನವೀಕರಣಕ್ಕೆ ಎದುರಾಗಿದ್ದ ಕಾನೂನು ಸಂಕಷ್ಟ ದೂರಾಗಿದೆ. ಬಂಗಲೆಯ ನವೀಕರಣ ಮತ್ತು ವಿಸ್ತರಣೆಗೆ ನೀಡಲಾದ ಅನುಮತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಾನೂನಿನ ಚೌಕಟ್ಟಿನಲ್ಲಿದ್ದುಕೊಂಡು ತಮ್ಮ ಮನೆಗಳನ್ನು ನವೀಕರಿಸುವ ಸಂಪೂರ್ಣ ಸ್ವಾತಂತ್ರ್ಯವು ಮನೆಯ ಮಾಲೀಕರಿಗೆ ಇರುತ್ತದೆ ಎಂದು ಕೋರ್ಟ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

ಈ ಪ್ರಕರಣವನ್ನು ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ’ಗೆ ಮರುಹಸ್ತಾಂತರಿಸಬೇಕು ಎಂಬ ಅರ್ಜಿದಾರರ ವಕೀಲರ ವಿನಂತಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಅಲ್ಲದೆ, ವ್ಯಕ್ತಿಯ ಜನಪ್ರಿಯತೆ ಅಥವಾ ಸೆಲೆಬ್ರಿಟಿ ಸ್ಟೇಟಸ್ ಈ ಪ್ರಕರಣದ ವಿಚಾರಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂಬುದನ್ನು ನ್ಯಾಯಪೀಠವು ಸ್ಪಷ್ಟಪಡಿಸಿತು.

ಅರ್ಜಿದಾರರ ವಾದವೇನಿತ್ತು?

ಮುಂಬೈ ನಿವಾಸಿಯೊಬ್ಬರು ಸಲ್ಲಿಸಿದ್ದ ಈ ಅರ್ಜಿಯಲ್ಲಿ, ಮನ್ನತ್ ಬಂಗಲೆಯ ನವೀಕರಣ ಯೋಜನೆಗೆ ಅಗತ್ಯವಿರುವ ಅನುಮತಿಗಳನ್ನು ಹಾಗೂ ಪರಿಸರ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಆರೋಪಿಸಲಾಗಿತ್ತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶೋಯೆಬ್ ಆಲಂ, ‘ಈ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯದ ಒಪ್ಪಿಗೆ ಅತ್ಯಗತ್ಯವಾಗಿತ್ತು. ನಿಯಮ ಉಲ್ಲಂಘನೆಗಳು ಇನ್ನು ಮುಂದುವರಿಯುತ್ತಲೇ ಇವೆ. 5 ಕೋಟಿ ರೂಪಾಯಿಗಿಂತ ಹೆಚ್ಚಿನ ವೆಚ್ಚದ ಯೋಜನೆಗಳಿಗೆ ಇಂತಹ ಪರಿಸರ ಇಲಾಖೆಯ ಅನುಮತಿ ಕಡ್ಡಾಯವಾಗಿದೆ’ ಎಂದು ವಾದಿಸಿದ್ದರು.

‘ಸೆಲೆಬ್ರಿಟಿ ಎಂಬ ಕಾರಣಕ್ಕೆ ನಿಯಮ ಬದಲಾಗಲ್ಲ’

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪೀಠವು ಈ ಅರ್ಜಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿತು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ‘ಈ ಬಂಗಲೆಯು ಒಂದು ಖಾಸಗಿ ನಿವಾಸವಾಗಿದೆ. ಇದರ ನಿವಾಸಿಗಳು ಕಾನೂನಿನ ಮಿತಿಯಲ್ಲಿ ಇದ್ದುಕೊಂಡು ಬದಲಾವಣೆಗಳನ್ನು ಅಥವಾ ನವೀಕರಣಗಳನ್ನು ಮಾಡಲು ಸಂಪೂರ್ಣ ಹಕ್ಕು ಹೊಂದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ‘ಕಿಂಗ್’ ಚಿತ್ರಕ್ಕೆ 450 ಕೋಟಿ ರೂ. ಬಜೆಟ್; ಶಾರುಖ್ ಖಾನ್ ವೃತ್ತಿಜೀವನದ ದುಬಾರಿ ಸಿನಿಮಾ

ಈ ಹಿಂದೆಯೇ ಅರ್ಜಿ ತಿರಸ್ಕರಿಸಿದ್ದ ಎನ್‌ಜಿಟಿ

ಬಂಗಲೆಯ ನವೀಕರಣ ಮತ್ತು ವಿಸ್ತರಣೆಗೆ ನೀಡಲಾದ ಪರಿಸರ ಹಾಗೂ ಕರಾವಳಿ ವಲಯದ ಅನುಮತಿಗಳ ವಿರುದ್ಧ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಈ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಿರಸ್ಕರಿಸಿತ್ತು. ಈ ಯೋಜನೆಯು ಪರಿಸರ ನಿಯಮಗಳಿಗೆ ಅನುಗುಣವಾಗಿಯೇ ಇದೆ ಎಂದು ಎನ್‌ಜಿಟಿ ತೀರ್ಪು ನೀಡಿತ್ತು. ಸಾಮಾಜಿಕ ಕಾರ್ಯಕರ್ತ ಸಂತೋಷ್ ದೌಂಡ್ಕರ್ ಅವರು 2025ರ ಮಾರ್ಚ್‌ನಲ್ಲಿ ಈ ಮೇಲ್ಮನವಿಯನ್ನು ಎನ್‌ಜಿಟಿ ಮುಂದೆ ಸಲ್ಲಿಸಿದ್ದರು. ಆದರೆ ನಿಯಮಗಳ ಪ್ರಕಾರವೇ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆ ಎಂದು ಶಾರುಖ್ ಖಾನ್ ಪರ ವಕೀಲರು ಸ್ಪಷ್ಟಪಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:37 pm, Tue, 14 July 26

Follow Us