4000 ಕೋಟಿ ಬಜೆಟ್ ಹಾಕಿ ‘ರಾಮಾಯಣ’ ನಿರ್ಮಿಸುತ್ತಿರುವುದೇಕೆ? ಉತ್ತರ ಕೊಟ್ಟ ನಿರ್ಮಾಪಕ

Ramayana movie: ರಣ್​​ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ವಿಶ್ವದ ಅತ್ಯಂತ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದು. ಭಾರತದ ಪಾಲಿಗಂತೂ ಇದು ಅಸಾಧಾರಣ ಬಜೆಟ್. ಸಿನಿಮಾದ ಎರಡೂ ಭಾಗಗಳಿಗೆ ಸುಮಾರು 4000 ಕೋಟಿ ಬಜೆಟ್ ಹಾಕಲಾಗಿದೆ. ಆದರೆ ಇಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಕಾರಣವೇನು? ನಿರ್ಮಾಪಕ ನಮಿತ್ ಮಲ್ಹೋತ್ರಾ ವಿವರಿಸಿದ್ದಾರೆ.

4000 ಕೋಟಿ ಬಜೆಟ್ ಹಾಕಿ ‘ರಾಮಾಯಣ’ ನಿರ್ಮಿಸುತ್ತಿರುವುದೇಕೆ? ಉತ್ತರ ಕೊಟ್ಟ ನಿರ್ಮಾಪಕ
Ramayana

Updated on: Feb 15, 2026 | 3:25 PM

ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ದ (Ramayana) ಹಾಲಿವುಡ್​ನಲ್ಲಿ ಈಗಾಗಲೇ ದೊಡ್ಡ ಹೆಸರು ಮಾಡಿರುವ ಸ್ಟುಡಿಯೋ ಹೊಂದಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಹಾಲಿವುಡ್​​ನಲ್ಲಿ ಭಾರತದ ಸಿನಿಮಾಕ್ಕೆ ಮೌಲ್ಯ ತಂದುಕೊಡಬೇಕೆಂಬ ಘನ ಉದ್ದೇಶದಿಂದಲೇ ಈ ಸಿನಿಮಾಕ್ಕೆ ಕೈ ಹಾಕಿರುವುದಾಗಿ ಈ ಹಿಂದೆ ಅವರು ಹೇಳಿಕೊಂಡಿದ್ದರು. ಇದೀಗ ಮತ್ತೊಂದು ಸಂದರ್ಶನದಲ್ಲಿ ಮಾತನಾಡಿರುವ ನಮಿತ್ ಮಲ್ಹೋತ್ರಾ ಹಾಲಿವುಡ್‌ನಲ್ಲಿ ಭಾರತವನ್ನು, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ರೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಮಿತ್, ‘ನಾನು ಹಾಲಿವುಡ್‌ಗೆ ಹೋದಾಗ ಅಲ್ಲಿ ನಮ್ಮ ಇತಿಹಾಸ ಅಥವಾ ಸಂಸ್ಕೃತಿಗೆ ಯಾವುದೇ ಸರಿಯಾದ ಪ್ರಾತಿನಿಧ್ಯ ಇರದೇ ಇರುವುದು ಗಮನಿಸಿದೆ. ಇದು ನನ್ನನ್ನು ಕಾಡುತ್ತಲೇ ಇತ್ತು. ಹಣಕಾಸು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯರು ಜಾಗತಿಕವಾಗಿ ಗುರುತಿಸಿಕೊಂಡಿದ್ದರೂ, ಸಿನಿಮಾ ರಂಗದಲ್ಲಿ ನಮ್ಮ ಸಂಸ್ಕೃತಿಯನ್ನು ಅವರು ಸರಿಯಾಗಿ ಗೌರವಿಸುತ್ತಿಲ್ಲ ಅಥವಾ ಅರ್ಥಮಾಡಿಕೊಳ್ಳುತ್ತಿಲ್ಲ’ ಎಂದಿದ್ದಾರೆ.

‘ಬಹಳ ವರ್ಷಗಳಿಂದಲೂ ಹಾಲಿವುಡ್ ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ‘ಸ್ಲಂಡಾಗ್ ಮಿಲಿಯನೇರ್’ ನಂತಹ ಚಿತ್ರಗಳಲ್ಲಾಗಲಿ ಅಥವಾ ಇತರ ಚಿತ್ರಗಳಲ್ಲಾಗಲಿ ಭಾರತೀಯರನ್ನು ಕೇವಲ ಸಂತ್ರಸ್ತರನ್ನಾಗಿ ಅಥವಾ ಬಡವರನ್ನಾಗಿ ತೋರಿಸಲಾಗಿದೆ. ಇದು ನನಗೆ ಬಹಳ ನೋವುಂಟು ಮಾಡಿತ್ತು. ನಮ್ಮ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಇಡೀ ಜಗತ್ತು ಹೆಮ್ಮೆಪಡುವಂತೆ ತೋರಿಸಬೇಕು ಎಂಬ ಹಠದಿಂದಲೇ ‘ರಾಮಾಯಣ’ ಸಿನಿಮಾ ಹುಟ್ಟಿಕೊಂಡಿತು’ ಎಂದಿದ್ದಾರೆ. ಆ ಮೂಲಕ ಹಾಲಿವುಡ್​​ಗೆ ಪ್ರತ್ಯುತ್ತರ ನೀಡಲೆಂದೇ ತಾವು ‘ರಾಮಾಯಣ’ ಸಿನಿಮಾ ನಿರ್ಮಿಸುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಯಶ್, ರಣ್​​ಬೀರ್ ಕಪೂರ್ ‘ರಾಮಾಯಣ’ ಸಿನಿಮಾಕ್ಕೆ ಕೊರಿಯೋಗ್ರಾಫರ್ ಯಾರು ಗೊತ್ತೆ?

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಸಿನಿಮಾ ಮೇಲೆ ಸುಮಾರು 4000 ಕೋಟಿ ಬಂಡವಾಳವನ್ನು (ಎರಡೂ ಭಾಗಗಳಿಗೆ ಸೇರಿ) ನಮಿತ್ ಹೂಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಇದು ವಿಶ್ವದ ಅತಿ ದೊಡ್ಡ ಸ್ವತಂತ್ರ್ಯ ಬಜೆಟ್ ಸಿನಿಮಾ. ಅಂದರೆ ಬೇರೆ ಬೇರೆ ಸಂಸ್ಥೆಗಳ ಬದಲಿಗೆ ಕೇವಲ ಒಂದು ಸಂಸ್ಥೆಯೇ ಸಿನಿಮಾದ ಮೇಲೆ ದೊಡ್ಡ ಬಜೆಟ್ ಹೂಡಿಕೆ ಮಾಡಿದೆ. ಹಾಗಾಗಿ ಇದನ್ನು ಸ್ವತಂತ್ರ್ಯ ಫೈನ್ಯಾನ್ಸ್ಡ್ ಎಂದು ನಮಿತ್ ಕರೆದಿದ್ದಾರೆ.

ಈ ಸಿನಿಮಾನಲ್ಲಿ ಹಲವು ಖ್ಯಾತ ನಾಮ ನಟ-ನಟಿಯರು ಕೆಲಸ ಮಾಡಿದ್ದಾರೆ. ರಣ್​​ಬೀರ್ ಕಪೂರ್ ಈ ಸಿನಿಮಾನಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರ, ನಟ ಯಶ್ ರಾವಣನ ಪಾತ್ರದಲ್ಲಿ ನಟಿಸಿರುವ ಜೊತೆಗೆ ಸಹ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸನ್ನಿ ಡಿಯೋಲ್, ವಿಜಯ್ ಸೇತುಪತಿ, ಕಾಜಲ್ ಅಗರ್ವಾಲ್ ಇನ್ನೂ ಹಲವಾರು ಕಲಾವಿದರು ಸಿನಿಮಾನಲ್ಲಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರುಗಳಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೈಮರ್. ಸಿನಿಮಾ ನಿರ್ದೇಶನ ಮಾಡಿರುವುದು ನಿತೇಶ್ ತಿವಾರಿ. ಚಿತ್ರದ ಮೊದಲ ಭಾಗವು ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಎರಡನೇ ಭಾಗವು 2027ರ ದೀಪಾವಳಿಗೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ