21 ವರ್ಷ ಹಳೆಯ ಕ್ಯೂಟ್ ವಿಡಿಯೋ ಹಂಚಿಕೊಂಡ ನಟಿ ರಮ್ಯಾ

Actress Ramya: ಕೆಲ ದಿನಗಳ ಹಿಂದಷ್ಟೆ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಆಗಿದ್ದು, ಪ್ರೇಕ್ಷಕರು, ಅಭಿಮಾನಿಗಳು ಬಲು ಅದ್ಧೂರಿಯಾಗಿ ‘ಆಕಾಶ್’ ಸಿನಿಮಾವನ್ನು ಮತ್ತೊಮ್ಮೆ ಸ್ವಾಗತ ಮಾಡಿದ್ದಾರೆ. ರಮ್ಯಾ ಸೇರಿದಂತೆ ದೊಡ್ಮನೆಯ ಹಲವು ಸದಸ್ಯರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದರು. ಇದೀಗ ನಟಿ ರಮ್ಯಾ, ‘ಆಕಾಶ್’ ಸಿನಿಮಾ ಚಿತ್ರೀಕರಣ ಸಂದರ್ಭದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ...

21 ವರ್ಷ ಹಳೆಯ ಕ್ಯೂಟ್ ವಿಡಿಯೋ ಹಂಚಿಕೊಂಡ ನಟಿ ರಮ್ಯಾ
Akash Movie

Updated on: Mar 18, 2026 | 5:06 PM

ಪುನೀತ್ ರಾಜ್​​ಕುಮಾರ್ (Puneeth Rajkumar) ನಟನೆಯ ‘ಆಕಾಶ್’ ಸಿನಿಮಾ 2005 ರಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗಿತ್ತು. ಕೆಲ ದಿನಗಳ ಹಿಂದಷ್ಟೆ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಆಗಿದ್ದು, ಪ್ರೇಕ್ಷಕರು, ಅಭಿಮಾನಿಗಳು ಬಲು ಅದ್ಧೂರಿಯಾಗಿ ‘ಆಕಾಶ್’ ಸಿನಿಮಾವನ್ನು ಮತ್ತೊಮ್ಮೆ ಸ್ವಾಗತ ಮಾಡಿದ್ದಾರೆ. ರಮ್ಯಾ ಸೇರಿದಂತೆ ದೊಡ್ಮನೆಯ ಹಲವು ಸದಸ್ಯರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದರು. ರಮ್ಯಾ ಅಂತೂ ಅಭಿಮಾನಿಗಳೊಟ್ಟಿಗೆ ಸೇರಿ ಚಿತ್ರಮಂದಿರದಲ್ಲಿಯೇ ‘ನೀನೆ ನೀನೆ’ ಹಾಡು ಸಹ ಹಾಡಿದರು.

ಸಿನಿಮಾ ಮರು ಬಿಡುಗಡೆ ಆದ ದಿನ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ರಮ್ಯಾ, ಪುನೀತ್ ಅವರೊಟ್ಟಿಗಿನ ಗೆಳೆತನವನ್ನು ನೆನಪು ಮಾಡಿಕೊಂಡಿದ್ದರು. ಮಾತ್ರವಲ್ಲದೆ ‘ಆಕಾಶ್’ ಸಿನಿಮಾ ಚಿತ್ರೀಕರಣ ಮಾಡುವಾಗಿನ ಘಟನೆಗಳನ್ನು ನೆನಪು ಮಾಡಿಕೊಂಡಿದ್ದರು. ಎಷ್ಟು ಖುಷಿಯಿಂದ ತಾವು ಚಿತ್ರೀಕರಣ ಮಾಡಿದ್ದಾಗಿ ಹೇಳಿಕೊಂಡಿದ್ದರು, ರಾಘವೇಂದ್ರ ರಾಜ್​​ಕುಮಾರ್ ಅವರು ‘ನೀನೇ, ನೀನೆ’ ಹಾಡನ್ನು ಮೊದಲ ಬಾರಿ ಕೇಳಿಸಿದ ಕ್ಷಣವನ್ನು ಸಹ ನೆನಪು ಮಾಡಿಕೊಂಡಿದ್ದರು. ಆದರೆ ಇದೀಗ ಬಹಳ ಅಪರೂಪವಾದ ಬಿಟಿಎಸ್ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ರಮ್ಯಾ ಅವರು ‘ಆಕಾಶ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಮಾಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 2005 ರಲ್ಲಿ ಸೋನಿಯ ಹ್ಯಾಂಡಿಕ್ಯಾಮ್​​ನಲ್ಲಿ ತೆಗೆದ ವಿಡಿಯೋ ಇದಾಗಿದ್ದು, ರಮ್ಯಾ, ಪುನೀತ್ ಅವರು ‘ನೀನೆ ನೀನೆ’ ಹಾಡಿನ ಚಿತ್ರೀಕರಣಕ್ಕೆ ಹೊರದೇಶಕ್ಕೆ ಹೋದಾಗಿನ ವಿಡಿಯೋ ಇದಾಗಿದೆ. ವಿಡಿಯೋನಲ್ಲಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಇದ್ದಾರೆ. ವಿನಯ್ ಮತ್ತು ಯುವರಾಜ್ ಕುಮಾರ್ ಅವರಿದ್ದಾರೆ. ಡಾ ರಾಜ್​ಕುಮಾರ್, ಪಾರ್ವತಮ್ಮ ರಾಜ್​​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ದೊಡ್ಮನೆಯ ಇನ್ನೂ ಹಲವರಿದ್ದಾರೆ.

ಇದನ್ನೂ ಓದಿ:ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್​​ಕುಮಾರ್

ವಿಡಿಯೋ ಹಂಚಿಕೊಂಡಿರುವ ನಟಿ ರಮ್ಯಾ, ‘2004/2005 ರಲ್ಲಿ ನಮ್ಮ ‘ಆಕಾಶ್’ ಚಿತ್ರೀಕರಣದ ಕೆಲವು ತುಣುಕುಗಳನ್ನು ರೆಕಾರ್ಡ್ ಮಾಡಿದ್ದೇನೆ, ಅವುಗಳನ್ನು ಸೋನಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದೆ, ಅದನ್ನು ಕನ್ವರ್ಟ್ ಮಾಡಿ ಇಲ್ಲಿ ನಿಮಗಾಗಿ ಹಂಚಿಕೊಳ್ಳುತ್ತಿದ್ದೇನೆ. ನಾನು ಆಡಿಯೊವನ್ನು ಹಾಗೆಯೇ ಇರಿಸಿದ್ದೇನೆ, ಆದರೆ ಅದು ಹಳೆಯ ಕ್ಯಾಮೆರಾ ಆಗಿರುವುದರಿಂದ ಕೆಲವು ಆಡಿಯೊ ಭಾಗಗಳು ಮಿಸ್ ಆಗಿವೆ. ಆದರೆ ನೀವು ಇನ್ನೂ ನಮ್ಮ ತಮಾಷೆಯನ್ನು ಕೇಳಬಹುದು. ಮಾತ್ರವಲ್ಲದೆ ನಮ್ಮ ತಂಡದಲ್ಲಿ ಇದ್ದ ಗೆಳೆತನ, ಆತ್ಮೀಯತೆಯನ್ನು ನೀವು ವಿಡಿಯೋನಲ್ಲಿ ನೋಡಬಹುದು. ಅಪ್ಪು ಜೊತೆಗೆ ಕಳೆದ ಆ ತಮಾಷೆಯ ಕ್ಷಣಗಳನ್ನು ನಾನು ಸದಾ ನೆನಪಿಡುತ್ತೇನೆ. ನಗು ಮತ್ತು ನಿಮ್ಮ ಸ್ನೇಹಕ್ಕಾಗಿ ಧನ್ಯವಾದಗಳು. ವಿಡಿಯೋನಲ್ಲಿ ನೀವು ಅಶ್ವಿನಿ ಪುನೀತ್ ರಾಜ್​ಕುಮಾರ್, ಯುವ ರಾಜ್​ಕುಮಾರ್, ವಿನಯ್ ರಾಜ್​​ಕುಮಾರ್, ರಾಜ್​​ಕುಮಾರ್, ಪಾರ್ವತಮ್ಮ ರಾಜ್​ಕುಮಾರ್, ರಾಘಣ್ಣ ಮತ್ತು ಅಪ್ಪು ಅವರ ಮಕ್ಕಳನ್ನು ನೋಡಬಹುದು’ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Wed, 18 March 26

Follow Us