‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ನಟಿಸಿದ್ದ ಆ ಬಾಲಕಿ ಈಗ ಸ್ಟಾರ್ ನಟಿ
ರವಿಚಂದ್ರನ್ ಅವರ 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ ಬಾಲಕಲಾವಿದೆಯಾಗಿ ನಟಿಸಿದ್ದ ಬಾಲಕಿ ಇಂದು ದಕ್ಷಿಣ ಭಾರತದ ಖ್ಯಾತ ನಟಿಯಾಗಿದ್ದಾರೆ. ಅಂದು 'ನನ್ನನ್ನು ಹೀರೊಯಿನ್ ಮಾಡಲ್ವಾ' ಎಂದಿದ್ದ ಕಮಲಿ (ಸಂಗೀತಾ) ಅವರನ್ನು 8 ವರ್ಷಗಳ ನಂತರ 'ಯಾರೇ ನೀನು ಚೆಲುವೆ' ಮೂಲಕ ರವಿಚಂದ್ರನ್ ಕನ್ನಡಿಗರಿಗೆ ನಾಯಕಿಯನ್ನಾಗಿ ಪರಿಚಯಿಸಿದ್ದು ಈಗ ರೋಚಕ ಇತಿಹಾಸ.

ಮುಖ್ಯಾಂಶಗಳು
- ಶಾಂತಿ ಕ್ರಾಂತಿಯ ಬಾಲಕಿ ಟು ಸ್ಟಾರ್ ಹೀರೊಯಿನ್
- ಅಂದು ಬಾಲಕಲಾವಿದೆ, ಇಂದು ಬಹುಭಾಷಾ ತಾರೆ
- ರವಿಚಂದ್ರನ್ ಮಾತು ನಿಜವಾಯ್ತು
ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರುಬಿಡುಗಡೆ ಮಾಡಬೇಕೆಂಬ ಸೋಷಿಯಲ್ ಮೀಡಿಯಾ ಟ್ರೆಂಡ್‌ಗೆ ನಟ ಮಾಸ್ಟರ್ ಆನಂದ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ವೀಡಿಯೋ ಹಂಚಿಕೊಂಡಿರುವ ಅವರು, ಚಿತ್ರದಲ್ಲಿ ಅಭಿನಯಿಸಿದ್ದ ಬಾಲ್ಯದ ಸಿಹಿ ನೆನಪುಗಳನ್ನು ಹಾಗೂ ನಟಿ ಸಂಗೀತಾ ಕುರಿತಾದ ಸ್ವಾರಸ್ಯಕರ ಸತ್ಯವನ್ನು ಹಂಚಿಕೊಂಡಿದ್ದಾರೆ.
ಬಾಲ್ಯದ ನೆನಪು ಹಾಗೂ ಬೆಂಬಲದ ಕರ್ತವ್ಯ
‘ಕಳೆದ 2-3 ದಿನಗಳಿಂದ ಶಾಂತಿ ಕ್ರಾಂತಿ ಸಿನಿಮಾವನ್ನು ರೀ-ರಿಲೀಸ್ ಮಾಡಬೇಕು ಎಂಬ ವಿಷಯದಲ್ಲಿ ನನಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಟ್ಯಾಗ್ ಮಾಡುತ್ತಿದ್ದಾರೆ. ಈ ಚಿತ್ರದ ರೀ-ರಿಲೀಸ್‌ಗೆ ಸಪೋರ್ಟ್ ಮಾಡುವುದು ನಮ್ಮ ಕರ್ತವ್ಯ. ಬಾಲ್ಯದಲ್ಲಿ ನಾವು ಬೆಳೆಯುವ ವಯಸ್ಸಿನಲ್ಲಿ ಮಾಡಿದ ಸಿನಿಮಾ ಇದು. ನಮಗೆ ಸಿಹಿ ನೆನಪುಗಳನ್ನು ತಂದುಕೊಡುವ ಇಂತಹ ಪ್ರಯತ್ನಕ್ಕೆ ನಾವು 100% ಬೆಂಬಲ ನೀಡುತ್ತೇವೆ’ ಎಂದು ಆನಂದ್ ಹೇಳಿದ್ದಾರೆ. ಆದರೆ, ಈ ಬಗ್ಗೆ ರವಿಚಂದ್ರನ್ ಅವರ ಕಡೆಯಿಂದ ಅಧಿಕೃತ ಮಾಹಿತಿ ಬರಬೇಕಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಮಗನಿಂದ ಸಿಕ್ತು ಅಪ್ಡೇಟ್
ರವಿಚಂದ್ರನ್ ನುಡಿದಿದ್ದ ಆ ದಿನದ ಭವಿಷ್ಯ
ಇದೇ ವೇಳೆ ಮಾತನಾಡಿದ ಆನಂದ್, ‘ಶಾಂತಿ ಕ್ರಾಂತಿ’ ಚಿತ್ರೀಕರಣದ ಸಮಯದ ಒಂದು ರೋಚಕ ವಿಚಾರವನ್ನು ಹಂಚಿಕೊಂಡರು. ‘ಚಿತ್ರದಲ್ಲಿ ನನ್ನಂತೆಯೇ ಬಾಲಕಲಾವಿದೆಯಾಗಿ ನಟಿಸಿದ್ದ ಕಮಲಿ (ಸಂಗೀತಾ) ಅವರು, ‘ನನ್ನನ್ನು ನಿಮ್ಮ ಸಿನಿಮಾಗೆ ನಾಯಕಿ ಮಾಡಲ್ವಾ?’ ಎಂದು ರವಿಚಂದ್ರನ್ ಸರ್ ಅವರನ್ನು ಕೇಳಿದ್ದರು. ಅದಕ್ಕೆ ರವಿ ಸರ್, ‘ನಿನಗೆ ಈಗ ಎಷ್ಟು ವಯಸ್ಸು? 8 ವರ್ಷ ಅಲ್ವಾ? ಇನ್ನೊಂದು 8 ವರ್ಷ ಬಿಟ್ಟು ಬಾ, ನಿನ್ನನ್ನ ನಾಯಕಿ ಮಾಡ್ತೀನಿ’ ಎಂದಿದ್ದರು. ಆಶ್ಚರ್ಯವೆಂದರೆ 1991ರಲ್ಲಿ ‘ಶಾಂತಿ ಕ್ರಾಂತಿ’ ಬಂದ ನಂತರ, ಸರಿಯಾಗಿ 8 ವರ್ಷಗಳ ಬಳಿಕ (1998ರಲ್ಲಿ) ‘ಯಾರೇ ನೀನು ಚೆಲುವೆ’ ಚಿತ್ರದ ಮೂಲಕ ಸಂಗೀತಾ ಅವರನ್ನು ರವಿ ಸರ್ ನಾಯಕಿಯನ್ನಾಗಿ ಮಾಡಿದರು’ ಎಂದು ನೆನಪಿಸಿಕೊಂಡರು.
View this post on Instagram
View this post on Instagram
ನಟಿ ಸಂಗೀತಾ ಅವರಿಗೂ ಟ್ಯಾಗ್ ಮಾಡಿ ಎಂದ ಆನಂದ್
‘ಪ್ರಸ್ತುತ ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ದೊಡ್ಡ ನಟಿಯಾಗಿ ಗುರುತಿಸಿಕೊಂಡಿರುವ ಸಂಗೀತಾ (ಕಮಲಿ) ಅವರು ‘ಬರಿ ಬೆತ್ತಲೆ ಜನರ ನಡುವೆ’ ಹಾಡಿನ ಮೊದಲ ಸಾಲಿನಲ್ಲೇ ಬರುವ ಬಾಲಕಲಾವಿದೆ. ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಕೇವಲ ನನಗೆ ಮಾತ್ರವಲ್ಲದೆ, ‘ಶಾಂತಿ ಕ್ರಾಂತಿ’ ರೀ-ರಿಲೀಸ್‌ಗೆ ಬೆಂಬಲ ನೀಡಲು ನಟಿ ಸಂಗೀತಾ ಅವರಿಗೂ ಟ್ಯಾಗ್ ಮಾಡಿ’ ಎಂದು ಆನಂದ್ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




