ತುಲಾ ರಾಶಿಯಲ್ಲಿ ತ್ರಿಗ್ರಹಿ ಯೋಗ: ನಿಮ್ಮ ರಾಶಿಗಳ ಮೇಲೆ ಶುಕ್ರ, ಸೂರ್ಯ, ಬುಧರ ಪರಿಣಾಮ
ತುಲಾ ರಾಶಿಯಲ್ಲಿ ಶುಕ್ರ, ಸೂರ್ಯ ಮತ್ತು ಬುಧ ಗ್ರಹಗಳ ಅಪರೂಪದ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. ಇದು ಬುಧಾದಿತ್ಯ ಯೋಗ ಹಾಗೂ ಲಕ್ಷ್ಮಿ ನಾರಾಯಣ ಯೋಗಗಳನ್ನು ಸೃಷ್ಟಿಸಿ ಸಂಪತ್ತು, ಅಧಿಕಾರ, ಬುದ್ಧಿವಂತಿಕೆ ತರಲಿದೆ. ಆದರೆ ಶುಕ್ರ ಅಸ್ತಂಗತದಿಂದ ಕೆಲ ರಾಶಿಗಳಿಗೆ ಸವಾಲುಗಳೂ ಇವೆ. ನಿಮ್ಮ ರಾಶಿಯ ಮೇಲಿನ ಪ್ರಭಾವ ಮತ್ತು ಪರಿಹಾರಗಳನ್ನು ತಿಳಿಯಿರಿ.

ತುಲಾ ರಾಶಿಯಲ್ಲಿ ಶುಕ್ರ, ಸೂರ್ಯ ಮತ್ತು ಬುಧ ಗ್ರಹಗಳ ಮಿಲನವು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ಅಪರೂಪದ ತ್ರಿಗ್ರಹಿ ಯೋಗವನ್ನು ಸೃಷ್ಟಿಸುತ್ತದೆ. ೨೦೨೨ರಲ್ಲಿ ಈ ಯೋಗ ಬಂದಮೇಲೆ ನಾಲ್ಕು ವರ್ಷ ಕಳೆದು ಮತ್ತೆ ಅಂತಹ ಅಪರೂಪದ ಯೋಗವಾಗಿದೆ. ಶುಕ್ರನು ತುಲಾ ರಾಶಿಯ ಅಧಿಪತಿಯಾಗಿದ್ದು, ತನ್ನ ಸ್ವಕ್ಷೇತ್ರದಲ್ಲಿದ್ದರೆ, ಬುಧ ಮತ್ತು ಸೂರ್ಯ ಗ್ರಹಗಳ ಸೇರ್ಪಡೆಯಿಂದ ಬುಧಾದಿತ್ಯ ಯೋಗ ಹಾಗೂ ಲಕ್ಷ್ಮಿ ನಾರಾಯಣ ಯೋಗಗಳು ಒಂದೇ ಸಮಯದಲ್ಲಿ ಘಟಿಸುತ್ತವೆ. ಈ ಯೋಗವು ಕೇವಲ ಇಪ್ಪತ್ತು ದಿನಗಳು ಮಾತ್ರ ಇಲ್ಲಿದ್ದು ಬಹಳ ವಿಶೇಷತೆಗಳನ್ನು ತನ್ನದಾಗಿಸಿಕೊಂಡಿದೆ. ಅಕ್ಟೋಬರ್ ೧೭ರಿಂದ ನವೆಂಬರ್ ೦೬ರವರೆಗೆ ಈ ತ್ರಿಗ್ರಹಿ ಯೋಗ.
ಜ್ಯೋತಿಷ್ಯದ ಸೂಕ್ಷ್ಮ ಸಿದ್ಧಾಂತಗಳ ಪ್ರಕಾರ, ಈ ಯೋಗವು ಸಂಪತ್ತು, ಅಧಿಕಾರ, ಸೌಂದರ್ಯ ಮತ್ತು ಬುದ್ಧಿವಂತಿಕೆಯ ನಿಕಟ ಸಂಬಂಧವನ್ನು ಸೂಚಿಸುತ್ತದೆ. ಆದರೆ ಸೂರ್ಯ ಮತ್ತು ಶುಕ್ರ ಮುಖಾಮುಖಿಯಾದಾಗ ಉಂಟಾಗುವ ಶುಕ್ರ ಅಸ್ತಂಗತ ಕೆಲ ರಾಶಿಗಳಿಗೆ ಸವಾಲುಗಳನ್ನೂ ತರುತ್ತವೆ.
ಮೇಷ ರಾಶಿ:
ನಿಮ್ಮದೇ ರಾಶಿಯಲ್ಲಿ ಈ ಯೋಗ ಏರ್ಪಡುವುದರಿಂದ ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಾಗುತ್ತದೆ. ಬುಧ ಮತ್ತು ಶುಕ್ರರ ಮಿಲನವು ನಿಮ್ಮ ವ್ಯಕ್ತಿತ್ವಕ್ಕೆ ವಿಶೇಷ ಆಕರ್ಷಣೆ ತರುತ್ತದೆ. ವ್ಯಾಪಾರ, ವಹಿವಾಟಿನಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಆದರೆ, ಶುಕ್ರ, ಸೂರ್ಯರ ಸಾಮೀಪ್ಯದಿಂದಾಗಿ ಸಂಗಾತಿಯೊಂದಿಗೆ ಸಣ್ಣಪುಟ್ಟ ಕಟು ಮಾತಿನ ವಾಗ್ವಾದಗಳು ಬಾರದಂತೆ ಎಚ್ಚರವಹಿಸುವುದು ಅಗತ್ಯ.
ಮಿಥುನ ರಾಶಿ :
ಪಂಚಮ ಭಾವದಲ್ಲಿ ಈ ಯೋಗ ಉಂಟಾಗುವುದರಿಂದ ವಿದ್ಯಾರ್ಥಿಗಳಿಗೆ, ಕಲೆ, ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಸುವರ್ಣ ಕಾಲ. ಬುಧಾದಿತ್ಯ ಯೋಗದ ಪ್ರಭಾವದಿಂದ ಧನ ಲಾಭ ಹಾಗೂ ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಶೇರು ಮಾರುಕಟ್ಟೆ ಅಥವಾ ಹೂಡಿಕೆಗಳಿಂದ ಉತ್ತಮ ಪ್ರತಿಫಲ ಸಿಗಲಿದೆ.
ಮಕರ ರಾಶಿ:
ಕರ್ಮ ಸ್ಥಾನದಲ್ಲಿ ಗ್ರಹಗಳ ಈ ಯುತಿಯಾಗುವುದರಿಂದ ವೃತ್ತಿ ಕ್ಷೇತ್ರದಲ್ಲಿ ಭಾರಿ ಯಶಸ್ಸು ಕಾಯುತ್ತಿದೆ. ಹೊಸ ಉದ್ಯೋಗಾವಕಾಶ, ಬಡ್ತಿ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳು ಅರಸಿ ಬರಲಿವೆ. ರಾಜಕೀಯ ಹಾಗೂ ಸರ್ಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ ಯಶಸ್ಸು ಖಚಿತ.
ಮೇಷ ರಾಶಿ:
ಸಪ್ತಮ ಭಾವದಲ್ಲಿ ಈ ಯೋಗ ಸೃಷ್ಟಿಯಾಗಲಿದೆ. ಉದ್ಯೋಗ ಮತ್ತು ವ್ಯವಹಾರದ ದೃಷ್ಟಿಯಿಂದ ಅತ್ಯುತ್ತಮ ಲಾಭವಿದ್ದರೂ, ಸೂರ್ಯನ ತೀಕ್ಷ್ಣತೆಯಿಂದಾಗಿ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಎದುರಾಗಬಹುದು. ಆರೋಗ್ಯದ ವಿಷಯದಲ್ಲಿ, ವಿಶೇಷವಾಗಿ ರಕ್ತದೊತ್ತಡ ಮತ್ತು ಅಜೀರ್ಣ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕು.
ಕನ್ಯಾ ರಾಶಿ:
ದ್ವಿತೀಯ ಭಾವದಲ್ಲಿ ಗ್ರಹಗಳ ಸಂಯೋಜನೆ ನಡೆಯುವುದರಿಂದ ಮಾತಿನ ಮೇಲೆ ನಿಗ್ರಹ ಅಗತ್ಯ. ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ಆಸ್ತಿ ಅಥವಾ ಕುಟುಂಬದ ಆಂತರಿಕ ವಿಚಾರಗಳಲ್ಲಿ ತಪ್ಪು ತಿಳುವಳಿಕೆಗಳು ಬರದಂತೆ ಎಚ್ಚರವಹಿಸಿ.
ಇದನ್ನೂ ಓದಿ: ಹನುಮಾನ್ ಚಾಲೀಸಾ ಉಗಮದ ರೋಚಕ ಕಥೆ: ಬಂದೀಖಾನೆಯಲ್ಲಿ ತುಳಸಿದಾಸರು ರಚಿಸಿದ ದಿವ್ಯ ಸ್ತೋತ್ರದ ಇತಿಹಾಸ
ಮೀನ ರಾಶಿ :
ಅಷ್ಟಮ ಭಾವದಲ್ಲಿ ಈ ಯೋಗ ಏರ್ಪಡುವುದರಿಂದ ಹಠಾತ್ ಧನನಷ್ಟ ಅಥವಾ ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣಗಳಿವೆ. ಚಾಲನೆ ಮಾಡುವಾಗ ಮತ್ತು ಹಣಕಾಸಿನ ವಹಿವಾಟು ನಡೆಸುವಾಗ ಗರಿಷ್ಠ ಜಾಗರೂಕತೆ ವಹಿಸುವುದು ಒಳಿತು. ಸಾಧಾರಣವಾಗಿ ಸೂರ್ಯ ಮತ್ತು ಶುಕ್ರ ಶತ್ರು ಗ್ರಹಗಳು. ಆದರೆ ಶುಕ್ರನು ತನ್ನದೇ ರಾಶಿಯಾದ ತುಲಾದಲ್ಲಿ ಬಲವಾಗಿದ್ದಾಗ, ಸೂರ್ಯನ ಉಗ್ರತೆಯನ್ನು ಸೌಮ್ಯಗೊಳಿಸುತ್ತಾನೆ. ಇದರಿಂದಾಗಿ ಸೌಂದರ್ಯ ಉದ್ಯಮ, ಫ್ಯಾಷನ್, ಮಾಧ್ಯಮ ಮತ್ತು ಕಲಾ ಕ್ಷೇತ್ರದಲ್ಲಿದ್ದವರಿಗೆ ಅನಿರೀಕ್ಷಿತ ಯಶಸ್ಸು ಲಭಿಸುತ್ತದೆ.
ಬುಧನು ವ್ಯಾಪಾರಕ್ಕೆ ಕಾರಕನಾದರೆ, ಶುಕ್ರನು ಸಂಪತ್ತಿಗೆ, ಸೂರ್ಯನು ಅಧಿಕಾರಕ್ಕೆ ಕಾರಕ. ಈ ಮೂರರ ಮಿಲನವು ಬುದ್ಧಿವಂತಿಕೆಯಿಂದ ಅಧಿಕಾರ ಹಾಗೂ ಸಂಪತ್ತನ್ನು ಗಳಿಸುವ ವಿರಳ ಅವಕಾಶವನ್ನು ತಂದುಕೊಡುತ್ತದೆ.
ಈ ಯೋಗದ ಸಂಪೂರ್ಣ ಶುಭ ಫಲಗಳನ್ನು ಪಡೆಯಲು ದಿನನಿತ್ಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ಅಥವಾ ಮಹಾಲಕ್ಷ್ಮಿಯ ಆರಾಧನೆ ಮಾಡಿ.ಸೂರ್ಯನಿಗೆ ಅರ್ಘ್ಯವನ್ನು ನೀಡಿ ಮತ್ತು ಆದಿತ್ಯ ಹೃದಯ ಸ್ತೋತ್ರ ಪಠಿಸಿ. ಬುಧವಾರಗಳಂದು ಹಸಿರು ಬೇಳೆ ಅಥವಾ ಭಾರತೀಯ ಗೋವುಗಳಿಗೆ ಹಸಿರು ಹುಲ್ಲನ್ನು ನೀಡುವುದು ಶ್ರೇಯಸ್ಕರ.
ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 am, Wed, 7 October 26




