ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್: ನೂರಾರು ವಿದ್ಯಾರ್ಥಿಗಳಿಗೆ ನೆರವು

Rashmika Mandanna-Vijay Deverakonda: ಇದೇ ವರ್ಷಾರಂಭದಲ್ಲಿ ಮದುವೆಯಾದ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವಕರೊಂಡ ಅವರು ದಾಂಪತ್ಯ ಆರಂಭಿಸುವ ಮುನ್ನ ದೇವರಕೊಂಡ ಚಾರಿಟೇಬಲ್ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗುವ ಭರವಸೆಯನ್ನು ನೀಡಿದ್ದರು. ಇದೀಗ ಆ ಭರವಸೆಯನ್ನು ಈಡೇರಿಸಿದ್ದಾರೆ. ಈ ಜೋಡಿ ನೂರಾರು ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ. ಮಾಹಿತಿ ಇಲ್ಲಿದೆ...

ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್: ನೂರಾರು ವಿದ್ಯಾರ್ಥಿಗಳಿಗೆ ನೆರವು
Rashmika Vijay

Updated on: Jun 14, 2026 | 10:58 PM

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರು ವಿವಾಹವಾಗುವ ಕೆಲ ದಿನಗಳ ಹಿಂದಷ್ಟೆ ವಿಜಯ್ ದೇವರಕೊಂಡ ಅವರ ತಂದೆ ಜಿಲ್ಲೆಯ ಕೆಲವು ವಿದ್ಯಾರ್ಥಿಗಳಿಗೆ ತಮ್ಮ ಕಡೆಯಿಂದ ಸ್ಕಾಲರ್ಶಿಪ್ ನೀಡಿ, ಅವರ ಶಿಕ್ಷಣಕ್ಕೆ ನೆರವಾಗಿದ್ದರು. ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ, ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಮುಂದುವರೆಸುವುದಾಗಿ ಜೊತೆಗೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೈಲಾದ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದ್ದರು, ಇದೀಗ ವಿಜಯ್ ಮತ್ತು ರಶ್ಮಿಕಾ ಅವರು ಆ ಭರವಸೆಯನ್ನು ಈಡೇರಿಸಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಜಂಟಿಯಾಗಿ ದೇವರಕೊಂಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಚ್ಚಂಪೇಟ್ ಜಿಲ್ಲೆಯ 180 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಅವರು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದವರ ಪಟ್ಟಿಯನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. ‘ನಾವು ಅಚ್ಚಂಪೇಟೆ ಮಂಡಲದ 9 ಮತ್ತು 10ನೇ ತರಗತಿಯ ಕಠಿಣ ಪರಿಶ್ರಮಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ಅಂದುಕೊಂಡಿದ್ದ ಸಣ್ಣ ಕನಸನ್ನು ಈಡೇರಿಸುತ್ತಿದ್ದೇವೆ. ತಮ್ಮ ಹೆತ್ತವರಿಗೆ ಹೆಮ್ಮೆ ತಂದ 180 ಮಕ್ಕಳ ಪಟ್ಟಿ ಇಲ್ಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

‘ಈ ವಿದ್ಯಾರ್ಥಿವೇತನ ಬಹಳ ಚಿಕ್ಕದಾಗಿರಬಹುದು, ಆದರೆ ಇದು ನಮಗೆ ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ನಿಮ್ಮ ಜೀವನದ ಭಾಗವಾಗಲು ಬಯಸುತ್ತೇನೆ. ನನ್ನ ಗ್ರಾಮದಿಂದ ಆರಂಭವಾದ ಈ ಪ್ರಯತ್ನ, ಮುಂದಿನ ದಿನಗಳಲ್ಲಿ ಇಡೀ ತೆಲಂಗಾಣದಾದ್ಯಂತ ವಿಸ್ತರಣೆಯಾಗಬೇಕು ಎಂಬುದು ನನ್ನ ಕನಸು’ ಎಂದು ಅವರು ಹೇಳಿಕೊಂಡಿದ್ದಾರೆ. ರಶ್ಮಿಕಾ ಸಹ ಈ ಬಗ್ಗೆ ಖುಷಿಯಾಗಿದ್ದು ‘ಇಂದು ನಾವು ‘ದಿ ದೇವರಕೊಂಡ ಫೌಂಡೇಶನ್’ ಮೂಲಕ ಒಳ್ಳೆಯ ಕೆಲಸವನ್ನು ಪ್ರಾರಂಭಿಸುತ್ತಿದ್ದೇವೆ. ನಮ್ಮ ಮಾವನವರ ಊರಾದ ಅಚ್ಚಂಪೇಟೆ ಮತ್ತು ತಮ್ಮೂರುಪೆಟ್‌ನಿಂದಲೇ ಇದನ್ನು ಪ್ರಾರಂಭಿಸಬೇಕೆಂದು ನಿರ್ಧರಿಸಿದ್ದೇವೆ. ಇಂದು ನಾನು ನಿಮ್ಮ ಮುಂದೆ ‘ರಶ್ಮಿಕಾ ಮಂದಣ್ಣ ದೇವರಕೊಂಡ’ ಆಗಿ ಮಾತನಾಡುತ್ತಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ಶಾಹಿದ್ ಕಪೂರ್ ಬಟ್ಟೆ ಹರಿದು, ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್; ವಿಡಿಯೋ ವೈರಲ್

ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದ ಈ ಜೋಡಿ ಫೆಬ್ರವರಿ 26, 2026 ರಂದು ಅದ್ಧೂರಿಯಾಗಿ ವಿವಾಹವಾದರು. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ವಿಜಯ್ ಮತ್ತು ರಶ್ಮಿಕಾ, ಇದೀಗ ‘ರಣಬಲಿ’ ಸಿನಿಮಾನಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಗೀತ ಗೋವಿಂದಂ 2’ ಸಿನಿಮಾನಲ್ಲಿಯೂ ಒಟ್ಟಿಗೆ ನಟಿಸಲಿದ್ದಾರೆ. ರಶ್ಮಿಕಾ ಮಂದಣ್ಣ ನಟನೆಯ ‘ಕಾಕ್​​ಟೇಲ್ 2’ ಸಿನಿಮಾ ಇದೇ ತಿಂಗಳು 19ಕ್ಕೆ ಬಿಡುಗಡೆ ಆಗಲಿದೆ. ಇನ್ನು ವಿಜಯ್, ‘ರಣಬಲಿ’ ಹೊರತಾಗಿ ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 pm, Sun, 14 June 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us