ವಿಜಯ್ ದೇವರಕೊಂಡ (Vijay Deverakonda) ರಶ್ಮಿಕಾ ಮಂದಣ್ಣ (Rashmika Mandanna) ತೆಲುಗು ಚಿತ್ರರಂಗದ ಜನಪ್ರಿಯ ಜೋಡಿಗಳಲ್ಲಿ ಒಂದು. ಇಬ್ಬರ ತೆರೆಯ ಮೇಲಿನ ಕೆಮಿಸ್ಟ್ರಿ ತೆಲುಗು ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ. ಆದರೆ 2019 ರಲ್ಲಿ ಬಿಡುಗಡೆ ಆದ ‘ಡಿಯರ್ ಕಾಮ್ರೇಡ್’ ಸಿನಿಮಾದ ಬಳಿಕ ಈ ಜೋಡಿ ಈವರೆಗೆ ಒಟ್ಟಿಗೆ ನಟಿಸಿಲ್ಲ. ಆದರೆ ಇದೀಗ ವಿಜಯ್ ದೇವರಕೊಂಡರ ಹೊಸ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಹ ಇರಲಿದ್ದಾರೆ ಆದರೆ ನಾಯಕಿಯಾಗಿ ಅಲ್ಲ.
ವಿಜಯ್ ದೇವರಕೊಂಡ ‘ಫ್ಯಾಮಿಲಿ ಸ್ಟಾರ್’ ಹೆಸರಿನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿ, ಜೊತೆಗೆ ದಿವ್ಯಾಂಶಾ ಕೌಶಿಕ್ ಸಹ ಸಿನಿಮಾದಲ್ಲಿದ್ದಾರೆ. ಆದರೆ ಇದೇ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆ ಹಾಡು ಐಟಂ ಹಾಡಾಗಿರುವುದಿಲ್ಲ ಎನ್ನಲಾಗುತ್ತಿದೆ. ಈ ಹಾಡು ರಶ್ಮಿಕಾಗೆ ಮೊತ್ತ ಮೊದಲ ‘ಸ್ಪೆಷಲ್ ಸಾಂಗ್’ ಆಗಲಿದೆ.
ರಶ್ಮಿಕಾ ಮಂದಣ್ಣ ಯಾವುದೇ ಸಿನಿಮಾದಲ್ಲಿ ಈವರೆಗೆ ‘ಸ್ಪೆಷಲ್ ಸಾಂಗ್’ ಅಥವಾ ‘ಐಟಂ ಹಾಡು’ಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ನಟಿಸಿದ ಸಿನಿಮಾದಲ್ಲಿಯೇ ತುಸು ಬೋಲ್ಡ್ ಆದ ಹಾಡುಗಳಲ್ಲಿ ನರ್ತಿಸಿದ್ದರು. ಆದರೆ ಫ್ಯಾಮಿಲಿ ಸ್ಟಾರ್ ಸಿನಿಮಾ ಮೂಲಕ ಮೊದಲ ಬಾರಿಗೆ ತಾವು ನಟಿಸಿರದ ಸಿನಿಮಾದಲ್ಲಿ ಹಾಡೊಂದಕ್ಕೆ ಸೊಂಟ ಬಳುಕಿಸಲಿದ್ದಾರೆ.
ರಶ್ಮಿಕಾ ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯ ಎರಡು ಹಾಗೂ ತೆಲುಗಿನಲ್ಲಿ ಮೂರು ಸಿನಿಮಾಗಳನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಇದರ ನಡುವೆಯೂ ವಿಜಯ್ ದೇವರಕೊಂಡ ಸಿನಿಮಾದಲ್ಲಿ ಹೆಜ್ಜೆ ಹಾಕಲು ಸಮಯ ಹೊಂದಿಸಿಕೊಂಡಿದ್ದಾರೆ. ರಶ್ಮಿಕಾ ಪ್ರಸ್ತುತ ಹಿಂದಿಯ ‘ಚಾವಾ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಾಯಕ. ತೆಲುಗಿನಲ್ಲಿ ‘ಪುಷ್ಪ 2’, ‘ಗರ್ಲ್ಫ್ರೆಂಡ್’ ಹಾಗೂ ವಿಜಯ್ ದೇವರಕೊಂಡ ಜೊತೆಗೆ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ನಟಿಸಲಿದ್ದಾರೆ.
‘ಫ್ಯಾಮಿಲಿ ಸ್ಟಾರ್’ ಸಿನಿಮಾವು ಕೌಟುಂಬಿಕ ಕತೆಯ ಜೊತೆಗೆ ಆಕ್ಷನ್ ಅಂಶಗಳನ್ನು ಸಹ ಒಳಗೊಂಡಿರುವ ಸಿನಿಮಾ ಆಗಿರಲಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ವಿಜಯ್ ದೇವರಕೊಂಡ ಕೌಟುಂಬಿಕ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ ಜೊತೆಗೆ ಭರ್ಜರಿ ಆಕ್ಷನ್ ಸಹ ಮಾಡಿದ್ದಾರೆ. ವಿಜಯ್ ದೇವರಕೊಂಡ ಪತ್ನಿಯ ಪಾತ್ರದಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಸಿನಿಮಾವನ್ನು ‘ಗೀತಾ ಗೋವಿಂದ್’ ನಿರ್ದೇಶನ ಮಾಡಿರುವ ಪರಶುರಾಮ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಶ್ರೀ ವೆಂಕಟೇಶ್ವರ ಕ್ರಿಯೇಟರ್ಸ್ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ