
ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಇಂದು (ನವೆಂಬರ್ 07) ಬಿಡುಗಡೆ ಆಗಿದೆ. ರಶ್ಮಿಕಾ ಮಂದಣ್ಣ ನಟಿಸಿರುವ ಮೊದಲ ಮಹಿಳಾ ಪ್ರಧಾನ ಸಿನಿಮಾ ಇದಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಇದೀಗ ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ರಶ್ಮಿಕಾಗೆ ಭಾರಿ ಭರವಸೆ ಇದೆ. ಸಿನಿಮಾಕ್ಕೆ ಸಾಕಷ್ಟು ಪ್ರಚಾರವನ್ನು ಸಹ ಮಾಡಿದ್ದಾರೆ. ಸಿನಿಮಾ ಬಿಡುಗಡೆ ದಿನವಾದ ಇಂದು ಸಿನಿಮಾದ ಚಿತ್ರೀಕರಣದ ಸಮಯದಲ್ಲಾದ ಅನುಭವಗಳನ್ನು ಅವರು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ತಮ್ಮ ಸಹನಟ ಕನ್ನಡಿಗ ದೀಕ್ಷಿತ್ ಶೆಟ್ಟಿ ಬಗ್ಗೆ ರಶ್ಮಿಕಾ ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ದಿ ಗರ್ಲ್ಫ್ರೆಂಡ್’ ಸಿನಿಮಾ ನಿರ್ದೇಶಕ ಸೇರಿದಂತೆ ಹಲವು ತಂತ್ರಜ್ಞರು, ಸಹನಟರುಗಳ ಬಗ್ಗೆ ರಶ್ಮಿಕಾ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಆದರೆ ಹೆಚ್ಚು ಬರೆದಿರುವುದು ಸಹನಟ ದೀಕ್ಷಿತ್ ಶೆಟ್ಟಿ ಬಗ್ಗೆಯೇ. ದೀಕ್ಷಿತ್ ಶೆಟ್ಟಿ, ‘ದಿ ಗರ್ಲ್ಫ್ರೆಂಡ್’ ಸಿನಿಮಾನಲ್ಲಿ ರಶ್ಮಿಕಾರ ಬಾಯ್ಫ್ರೆಂಡ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ದೀಕ್ಷಿತ್ ಅವರಿಗೆ ಮೂರನೇ ತೆಲುಗು ಸಿನಿಮಾ ಆಗಿದ್ದು, ದೀಕ್ಷಿತ್ ನಟನೆ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.
‘ಇದು ನಿನಗೆ ಕೇವಲ ಆರಂಭ ಮಾತ್ರ, ಆರಂಭದಲ್ಲಿಯೇ ‘ವಿಕ್ರಮ್’ ಅಂತಹ ಸವಾಲಿನ ಪಾತ್ರವನ್ನು ಕೈಗೆತ್ತಿಕೊಂಡಿದ್ದಕ್ಕಾಗಿ ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ. ನಾಳೆ ಏನೇ ಆದರೂ, ನಾವಿಬ್ಬರೂ ಖುಷಿಯಾಗಿರುತ್ತೇವೆ ಎಂದು ನನಗೆ ತಿಳಿದಿದೆ. ಏಕೆಂದರೆ ನಾವು ಒಂದು ಅರ್ಥಪೂರ್ಣವಾದ ಸಿನಿಮಾನಲ್ಲಿ ಕೆಲಸ ಮಾಡಿದ್ದೇವೆ. ನಾವು ಮಾಡಿದ ಕೆಲಸ, ನಾವು ನೀಡಿದ ಸಂದೇಶ ಒಬ್ಬ ವ್ಯಕ್ತಿಯ ಹೃದಯವನ್ನು ಮುಟ್ಟಿದರೂ ಸಹ ನಾವು ಗೆದ್ದಂತೆಯೇ ಅರ್ಥ’ ಎಂದಿದ್ದಾರೆ ರಶ್ಮಿಕಾ.
ಇದನ್ನೂ ಓದಿ:ಈ ಸಿನಿಮಾ ಮಾಡದಿದ್ದರೆ ಪಾಪ ಮಾಡಿದಂತೆ: ರಶ್ಮಿಕಾ ಮಂದಣ್ಣ
ಇನ್ನು ನಿರ್ದೇಶಕ ರಾಹುಲ್ ರವೀಂದ್ರನ್ ಬಗ್ಗೆ ಬರೆದಿರುವ ನಟಿ ರಶ್ಮಿಕಾ ಮಂದಣ್ಣ, ‘ನೀವು ಪ್ರಪಂಚವನ್ನು ನೋಡುವ ರೀತಿ ಬಹಳ ಭಿನ್ನ. ನಿಮ್ಮನ್ನು ಭೇಟಿಯಾಗಿದ್ದಕ್ಕೆ ನಾನು ಬಹಳ ಖುಷಿಯಾಗಿದ್ದೇನೆ. ನಿಮ್ಮಂಥ ಜನರು ನನ್ನ ಜೀವನದಲ್ಲಿ ಹೆಚ್ಚು-ಹೆಚ್ಚು ಸಿಗಬೇಕೆಂಬುದು ನನ್ನ ಬಯಕೆ’ ಎಂದಿದ್ದಾರೆ. ‘ದಿ ಗರ್ಲ್ಫ್ರೆಂಡ್’ ಸಿನಿಮಾನಲ್ಲಿಯೇ ನಟಿಸಿರುವ ಮತ್ತೊಬ್ಬ ನಟಿ ಅನು ಇಮಾನ್ಯುಯೆಲ್ ಬಗ್ಗೆ ಬರೆದಿರುವ ರಶ್ಮಿಕಾ, ‘ನಮ್ಮ ಎಲ್ಲರ ಜೀವನದಲ್ಲಿಯೂ ದುರ್ಗೆಯರು ಬೇಕು, ನೀವು ನನ್ನ ಪಾಲಿಗೆ ಬಹಳ ವಿಶೇಷ’ ಎಂದಿದ್ದಾರೆ ರಶ್ಮಿಕಾ.
ಸಿನಿಮಾದ ಸಹ ನಿರ್ಮಾಪಕರಾದ ದೀಪಾ ಕಪೋನಿಧಿ, ಧೀರಜ್ ಮೋಗಿಲಿನೇನಿ ಹಾಗೂ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ ಮತ್ತು ಅಲ್ಲು ಅರವಿಂದ್ ಅವರುಗಳ ಬಗ್ಗೆಯೂ ಸಹ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಅವಕಾಶಕ್ಕೆ ಧನ್ಯವಾದಗಳನ್ನು ಸಹ ರಶ್ಮಿಕಾ ಹೇಳಿದ್ದಾರೆ.
ಸಿನಿಮಾನಲ್ಲಿ ಭೂಮ ಹೆಸರಿನ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದು, ‘ಆ ಪಾತ್ರ ನನಗೆ ಬಹಳ ವಿಶೇಷವಾದುದು ಏಕೆಂದರೆ ಆ ಪಾತ್ರಕ್ಕೂ ನನಗೂ ಸಾಕಷ್ಟು ಸಾಮ್ಯತೆ ಇದೆ. ಭೂಮ ಪಾತ್ರದಲ್ಲಿ ನಟಿಸುವಾಗ ನನ್ನ ಬಗ್ಗೆ ನಾನು ತುಸು ಹೆಚ್ಚು ಅರ್ಥ ಮಾಡಿಕೊಂಡೆ. ನಿರ್ದೇಶಕರು ನನಗೆ ಪಾತ್ರ ವಿವರಿಸುತ್ತಿದ್ದರು ಅಷ್ಟೆ ಸನ್ನಿವೇಶಕ್ಕೆ ಹೇಗೆ ವರ್ತಿಸಬೇಕು ಎಂಬುದು ನನಗೆ ನನ್ನ ಅನುಭವಗಳಿಂದಲೇ ತಿಳಿದಿರುತ್ತಿತ್ತು. ಸಿನಿಮಾದಲ್ಲಿ ನಟಿಸುವಾಗ ನನಗೆ ಅನಿಸಿದ್ದು ಸಿನಿಮಾ ನೋಡಿದ ನಿಮಗೂ ಅನಿಸಲಿ ಎಂದು ಆಶಿಸುತ್ತೇನೆ. ಭೂಮಳನ್ನು ಪ್ರೀತಿಸಿ, ಆದರ ತೋರಿ, ರಕ್ಷಿಸಿ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ