ನಟ ಸಾಯಿ ಧರಮ್ ತೇಜ್ ಅವರು ಬೈಕ್ ಅಪಘಾತಕ್ಕೆ ಒಳಗಾಗಿದ್ದು ಇಡೀ ಟಾಲಿವುಡ್ಗೆ ಆಘಾತ ಉಂಟು ಮಾಡಿತ್ತು. ಹೈದರಾಬಾದ್ನಲ್ಲಿ ಸೆ.10ರಂದು ಸ್ಪೋರ್ಟ್ಸ್ ಬೈಕ್ನಲ್ಲಿ ಚಲಿಸುತ್ತಿದ್ದ ಅವರು ಅಪಘಾತಕ್ಕೆ ಒಳಗಾದ ಬಳಿಕ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಅಭಿಮಾನಿಗಳು ಅಪ್ಡೇಟ್ ಕೇಳುತ್ತಿದ್ದರು. ಆ ಕುರಿತು ಈಗ ಅಧಿಕೃತ ಮಾಹಿತಿ ಹೊರಬಿದ್ದಿದೆ. ಸಾಯಿ ಧರಮ್ ತೇಜ್ ಇನ್ನೂ ಕೋಮಾ ಸ್ಥಿತಿಯಲ್ಲೇ ಇದ್ದಾರೆ ಎಂಬುದು ಶಾಕಿಂಗ್ ವಿಚಾರ. ಅಪಘಾತ ನಡೆದು ಇಷ್ಟು ದಿನಗಳು ಕಳೆದರೂ ಅವರಿಗೆ ಪ್ರಜ್ಞೆ ಬಂದಿಲ್ಲ!
ಸಾಯಿ ಧರಮ್ ತೇಜ್ ಅವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಆ ಬಗ್ಗೆ ‘ರಿಪಬ್ಲಿಕ್’ ಚಿತ್ರದ ಪ್ರೀ ರಿಲೀಸ್ ಇವೆಂಟ್ನಲ್ಲಿ ಅವರ ಮಾವ ಪವನ್ ಕಲ್ಯಾಣ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅ.1ರಂದು ರಿಪಬ್ಲಿಕ್ ಸಿನಿಮಾ ಬಿಡುಗಡೆ ಆಗಲಿದೆ. ಅದರ ಪ್ರಚಾರದ ಸಲುವಾಗಿ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮ ಮಾಡಲಾಯಿತು. ಅದರಲ್ಲಿ ಭಾಗವಹಿಸಿದ್ದ ಪವನ್ ಕಲ್ಯಾಣ್ ಅವರು ಶಾಕಿಂಗ್ ವಿಚಾರ ತೆರೆದಿಟ್ಟಿದ್ದಾರೆ.
‘ಸಾಯಿ ಧರಮ್ ತೇಜ್ ಇನ್ನೂ ಕಣ್ಣು ಬಿಟ್ಟಿಲ್ಲ. ಆತ ಇನ್ನೂ ಕೋಮಾ ಸ್ಥಿತಿಯಲ್ಲೇ ಇದ್ದಾನೆ. ಅವನಿಗೆ ಆದ ಆ್ಯಕ್ಸಿಡೆಂಟ್ ನಿಜಕ್ಕೂ ದುರದೃಷ್ಟಕರ. ಅವನು ಅತಿ ವೇಗದಲ್ಲಿ ಬೈಕ್ ಓಡಿಸುತ್ತಿದ್ದ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ನೋಡಿದೆ. ಆದರೆ ಅದು ನಿಜವಲ್ಲ. ಸಾಯಿ ಧರಮ್ ತೇಜ್ ಕೇವಲ 45 ಕಿ.ಮೀ. ವೇಗದಲ್ಲಿ ಬೈಕ್ ಓಡಿಸುತ್ತಿದ್ದ. ಸಿಸಿಟಿವಿ ದೃಶ್ಯದಲ್ಲೂ ಅದು ಗೊತ್ತಾಗುತ್ತದೆ. ಸಾಯಿ ಧರಮ್ ತೇಜ್ ಬಗ್ಗೆ ಮಾಧ್ಯಮಗಳು ಮಾತನಾಡಬೇಕಿಲ್ಲ. ರಾಜಕೀಯದಲ್ಲಿನ ಅಪರಾಧಗಳ ಬಗ್ಗೆ ಮಾತನಾಡಬೇಕಿದೆ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
‘ರಿಪಬ್ಲಿಕ್’ ಸಿನಿಮಾದಲ್ಲಿ ಸಾಯಿ ಧರಮ್ ತೇಜ್ ಅವರು ಐಎಎಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಅವರು ಕೋಮಾದಲ್ಲಿ ಇರುವಾಗಲೇ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ಸಿನಿಪ್ರಿಯರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಈಗ ಮನೆ ಮಾಡಿದೆ. ಸಾಯಿ ಧರಮ್ ತೇಜ್ಗೆ ಅಪಘಾತ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ಚಿತ್ರದ ಪ್ರಚಾರದ ಸಲುವಾಗಿ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಕುರಿತು ಚಿಕ್ಕ ವಿಡಿಯೋ ತುಣುಕು ಬಿಡುಗಡೆ ಮಾಡಲಾಗಿತ್ತು. ಅದನ್ನು ಸಾಯಿ ಧರಮ್ ತೇಜ್ ಹಂಚಿಕೊಂಡು ಡಿ.ಕೆ. ರವಿಗೆ ಹ್ಯಾಟ್ಸ್ಆಫ್ ಹೇಳಿದ್ದರು.
ಇದನ್ನೂ ಓದಿ:
‘ಪವರ್ ಇಲ್ಲದವರಿಗೆ ಪವರ್ ಸ್ಟಾರ್ ಅಂತ ಯಾಕೆ ಕರೆಯುತ್ತೀರಿ’? ಪವನ್ ಕಲ್ಯಾಣ್ ಟಾಂಗ್ ಕೊಟ್ಟಿದ್ದು ಯಾರಿಗೆ?
ಸಾಯಿ ಧರಮ್ ತೇಜ್ ಬೈಕ್ ಅಪಘಾತ: ಅಪಶಕುನ ನುಡಿದ ಹಿರಿಯ ನಟನ ವಿರುದ್ಧ ಭಾರಿ ಆಕ್ರೋಶ