ಖ್ಯಾತ ಮಲಯಾಳಂ ನಟ ರಿಜಬಾವ ನಿಧನ; ಸ್ಟೈಲಿಶ್​ ವಿಲನ್​ ಅಗಲಿಕೆಗೆ ಮಾಲಿವುಡ್​ ಸಂತಾಪ

| Updated By: ಮದನ್​ ಕುಮಾರ್​

Updated on: Sep 14, 2021 | 7:58 AM

ಮಲಯಾಳಂ ಕಿರುತೆರೆಯ ನಟ ರಮೇಶ್​ ವಲಿಯಶಾಲ ಅವರ ಆತ್ಮಹತ್ಯೆ ಸುದ್ದಿಯ ಬೆನ್ನಲ್ಲೇ ಮಾಲಿವುಡ್​ಗೆ ಮತ್ತೊಂದು ಬ್ಯಾಡ್​ ನ್ಯೂಸ್​ ಕೇಳಿಬಂದಿದೆ. ಖ್ಯಾತ ನಟ ರಿಜಬಾವ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಖ್ಯಾತ ಮಲಯಾಳಂ ನಟ ರಿಜಬಾವ ನಿಧನ; ಸ್ಟೈಲಿಶ್​ ವಿಲನ್​ ಅಗಲಿಕೆಗೆ ಮಾಲಿವುಡ್​ ಸಂತಾಪ
ಮಲಯಾಳಂ ನಟ ರಿಜಬಾವ
Follow us on

ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ರಿಜಬಾವ ಅವರು ಸೋಮವಾರ (ಸೆ.13) ನಿಧನರಾದರು. ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ರಿಜಬಾವ ಅವರಿಗೆ 55 ವರ್ಷ ವಯಸ್ಸಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರು ಎಳೆದರು. ಮಾಲಿವುಡ್​ ಸಿನಿಮಾಗಳಲ್ಲಿ ವಿಲನ್​ ಪಾತ್ರ ಮಾಡುವ ಮೂಲಕ ರಿಜಬಾವ ಫೇಮಸ್​ ಆಗಿದ್ದರು ಸ್ಟೈಲಿಶ್​ ವಿಲನ್​ ಎಂದು ಅವರು ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ಇಡೀ ಮಲಯಾಳಂ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಪೃಥ್ವಿರಾಜ್​ ಸುಕುಮಾರನ್​, ದುಲ್ಖರ್​ ಸಲ್ಮಾನ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ರಿಜಬಾವ ಅವರು ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಈಗ ಅವರ ಅಗಲಿಕೆಯ ಸುದ್ದಿ ಕೇಳಿ ಎಲ್ಲರಿಗೂ ತೀವ್ರ ನೋವು ಉಂಟಾಗಿದೆ. 90ರ ದಶಕದಲ್ಲಿ ರಿಜಬಾವ ಬಹುಬೇಡಿಕೆಯ ಖಳನಟ ಆಗಿದ್ದರು. ವಿಲನ್​ ಆಗಿದ್ದರೂ ಕೂಡ ಒಬ್ಬ ಹೀರೋಗೆ ಇರಬಹುದಾದಷ್ಟು ಫ್ಯಾನ್​ ಫಾಲೋಯಿಂಗ್​ ಅವರಿಗೆ ಇತ್ತು. ಅಷ್ಟರಮಟ್ಟಿಗೆ ಅವರು ತಮ್ಮ ಪಾತ್ರಗಳ ಮೂಲಕ ಜನರಿಗೆ ಇಷ್ಟ ಆಗುತ್ತಿದ್ದರು.

‘ಯಾವುದೇ ಪಾತ್ರವನ್ನು ಆಯ್ಕೆ ಮಾಡಿಕೊಂಡರೂ ಕೂಡ ಅದಕ್ಕೆ ರಿಜಬಾವ ಅವರು ಜೀವ ತುಂಬುತ್ತಿದ್ದರು. ಅವರ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು’ ಎಂದು ದುಲ್ಖರ್​ ಸಲ್ಮಾನ್​ ಬರೆದುಕೊಂಡಿದ್ದಾರೆ. ‘ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪೃಥ್ವಿರಾಜ್​ ಸುಕುಮಾರ್​, ಅಕ್ಷಯಾ ಪ್ರೇಮನಾಥ್​ ಮುಂತಾದವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಯುವಕನಾಗಿದ್ದಾಗಲೇ ರಿಜಬಾವ ಅವರು ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದರು. ನಾಟಕಗಳಲ್ಲಿ ಅವರು ಅಭಿನಯಿಸುತ್ತಿದ್ದರು. ಅವರು ನಟಿಸಿದ ಮೊದಲ ಸಿನಿಮಾ ‘ವಿಶುಪಾಕ್ಷಿ’ ತೆರೆಕಾಣಲೇ ಇಲ್ಲ. ನಂತರ ಆರು ವರ್ಷಗಳ ಬಳಿಕ ನಟಿ ಪಾರ್ವತಿ ಜೊತೆ ಮುಖ್ಯಪಾತ್ರದಲ್ಲಿ ನಟಿಸಿದ ‘ಡಾ. ಪಶುಪತಿ’ ಸಿನಿಮಾದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು. ಅದೇ ವರ್ಷ ತೆರೆಕಂಡ ‘ಇನ್​ ಹರಿಹರ್​ ನಗರ್​’ ಸಿನಿಮಾದಿಂದ ರಿಜಬಾವ ಅವರಿಗೆ ದೊಡ್ಡ ಬ್ರೇಕ್​ ಸಿಕ್ಕಿತು. ಆ ಚಿತ್ರದಲ್ಲಿ ಅವರು ಮಾಡಿದ ವಿಲನ್​ ಪಾತ್ರವನ್ನು ಮಲಯಾಳಂ ಸಿನಿಪ್ರಿಯರು ಇಂದಿಗೂ ಮರೆತಿಲ್ಲ.

ನಂತರ ಒಂದೂವರೆ ದಶಕಗಳ ಕಾಲ ಅವರು ಬಹುಬೇಡಿಕೆಯ ನಟನಾಗಿ ಮುಂದುವರಿದರು. ಡಬ್ಬಿಂಗ್​ ಕಲಾವಿದನಾಗಿಯೂ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದರು. ‘ಕರ್ಮಯೋಗಿ’ ಚಿತ್ರಕ್ಕಾಗಿ 2010ರಲ್ಲಿ ಅವರಿಗೆ ಕೇರಳ ರಾಜ್ಯ ಸರ್ಕಾರದ ಪ್ರಶಸ್ತಿ ಸಿಕ್ಕಿತ್ತು.

ಇದನ್ನೂ ಓದಿ:

ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟದ ಶಂಕೆ; ಕಿರುತೆರೆ ನಟ ಆತ್ಮಹತ್ಯೆ: ಅನುಮಾನ ಮೂಡಿಸಿದ ಸಾವು

‘ನೀನೂ ಸತ್ತು ಹೋಗು’: ಸಿದ್ದಾರ್ಥ್​ ಶುಕ್ಲಾ ನಿಧನದ ಬಳಿಕ ಕಿಡಿಗೇಡಿಗಳಿಂದ ನಟಿಗೆ ಮೆಸೇಜ್​; ಆಸ್ಪತ್ರೆಗೆ ದಾಖಲು