ಬಹುಭಾಷಾ ನಟಿ ರೋಜಾ (Actress Roja) ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೂ ಅಲ್ಲದೇ ಕಿರುತೆರೆಯಲ್ಲೂ ರೋಜಾ ಕೆಲಸ ಮಾಡಿದ್ದಾರೆ. ರಾಜಕಾರಣಿಯಾಗಿಯೂ ಅವರು ಯಶಸ್ಸು ಕಂಡಿದ್ದಾರೆ. ಈಗ ಅವರ ಪುತ್ರಿ ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಬಗ್ಗೆ ಸುದ್ದಿ ಹರಡಿದೆ. ರೋಜಾ ಮಗಳ (Roja Daughter) ಹೆಸರು ಅನ್ಷು ಮಾಲಿಕಾ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಅವರು ಫೇಮಸ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅನ್ಷು ಮಾಲಿಕಾ (Anshu Malika) ಅವರನ್ನು 1 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದಾರೆ. ಶೀಘ್ರದಲ್ಲೇ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಪಡೆಯಲಿದ್ದು, ಸ್ಟಾರ್ ನಟರೊಬ್ಬರ ಪುತ್ರನ ಸಿನಿಮಾಗೆ ಹೀರೋಯಿನ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ.
ತಮಿಳು ಚಿತ್ರರಂಗದಲ್ಲಿ ನಟ ಚಿಯಾನ್ ವಿಕ್ರಮ್ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರ ಪುತ್ರ ಧ್ರುವ್ ವಿಕ್ರಮ್ ಕೂಡ ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮಗನನ್ನು ತೆಲುಗು ಫಿಲ್ಮ್ ಇಂಡಸ್ಟ್ರಿಗೆ ಪರಿಚಯಿಸಬೇಕು ಎಂದು ವಿಕ್ರಮ್ ಪ್ಲ್ಯಾನ್ ಮಾಡುತ್ತಿದ್ದಾರೆ. ಧ್ರುವ್ ನಟಿಸಲಿರುವ ಚೊಚ್ಚಲ ಟಾಲಿವುಡ್ ಸಿನಿಮಾಗೆ ರೋಜಾ ಮಗಳು ಅನ್ಷು ಮಾಲಿಕಾ ಹೀರೋಯಿನ್ ಆಗುತ್ತಾರೆ ಎಂದು ಸುದ್ದಿ ಹರಡಿದೆ.
ತೆಲುಗಿನಲ್ಲಿ ಮಗನನ್ನು ಲಾಂಚ್ ಮಾಡಿಸುವ ಸಲುವಾಗಿ ಚಿಯಾನ್ ವಿಕ್ರಮ್ ಅವರು ದೊಡ್ಡ ದೊಡ್ಡ ನಿರ್ಮಾಪಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಧ್ರುವ್ಗೆ ಹೊಸ ನಟಿಯೇ ಜೋಡಿ ಆಗಬೇಕು ಎಂಬ ಅಭಿಪ್ರಾಯ ಎಲ್ಲರಿಂದ ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ಅನ್ಷು ಮಾಲಿಕಾ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಈ ಕುರಿತಾಗಿ ಯಾರಿಂದಲೂ ಅಧಿಕೃತ ಹೇಳಿಕೆ ಇನ್ನೂ ಹೊರಬಿದ್ದಿಲ್ಲವಾದರೂ ಅವರಿಬ್ಬರ ಜೋಡಿ ಸೂಪರ್ ಆಗಲಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನವೇ ಅನ್ಷು ಮಾಲಿಕಾ ಫೇಮಸ್ ಆಗಿದ್ದಾರೆ. ಇಂಗ್ಲೆಂಡ್ ಮೂಲದ ಪ್ರತಿಷ್ಠಿತ ‘ಇನ್ಫ್ಲುಯನ್ಸರ್’ ಮ್ಯಾಗಜಿನ್ ಮುಖಪಟದಲ್ಲಿ ಅವರ ಫೋಟೋ ಬಿತ್ತರ ಆಗಿದೆ. ಒಂದು ವೇಳೆ ಅವರು ಸಿನಿಮಾರಂಗಕ್ಕೆ ಕಾಲಿಟ್ಟರೆ ಖಂಡಿತವಾಗಿಯೂ ಅಭಿಮಾನಿಗಳಿಂದ ಭರ್ಜರಿಯಾಗಿ ಸ್ವಾಗತ ಸಿಗಲಿದೆ ಎಂಬ ಅಭಿಪ್ರಾಯ ಎಲ್ಲರಲ್ಲೂ ಇದೆ. ಸದ್ಯಕ್ಕಂತೂ ರೋಜಾ ಅವರು ರಾಜಕೀಯದಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಸಿನಿಮಾದಲ್ಲಿ ಅವರು ಮೊದಲಿನಂತೆ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ಅವರು ಬಹುಬೇಡಿಕೆಯ ಹೀರೋಯಿನ್ ಆಗಿದ್ದರು. ಅವರಂತೆಯೇ ಅನ್ಷು ಮಾಲಿಕಾ ಕೂಡ ಯಶಸ್ಸು ಕಾಣಲಿ ಎಂಬುದು ಫ್ಯಾನ್ಸ್ ಬಯಕೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.