ಬಹುನಿರೀಕ್ಷಿತ ‘ಆರ್ಆರ್ಆರ್’ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೊರೊನಾ ವೈರಸ್ ಕಾರಣದಿಂದಾಗಿ ಈ ಸಿನಿಮಾದ ಕೆಲಸಗಳು ತಡವಾಗಿವೆ. ಸದ್ಯ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತಂಡ ಬ್ಯುಸಿ ಆಗಿದೆ. ಸ್ಟಾರ್ ನಿರ್ದೇಶಕ ರಾಜಮೌಳಿ ಅವರು ಈ ಸಿನಿಮಾದ ಬಗ್ಗೆ ಭಾರಿ ಸೀಕ್ರೆಟ್ ಕಾಪಾಡಿಕೊಳ್ಳುತ್ತಿದ್ದಾರೆ. ಅದು ಎಷ್ಟರಮಟ್ಟಿಗೆಂದರೆ, ಈ ಚಿತ್ರದ ಹೀರೋಗಳಾದ ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಅವರಿಗೂ ಕೂಡ ಯಾವುದೇ ದೃಶ್ಯಗಳನ್ನು ರಾಜಮೌಳಿ ತೋರಿಸುತ್ತಿಲ್ಲ! ಹಾಗಂತ ಇದು ಗಾಸಿಪ್ ಅಲ್ಲ, ಸ್ವತಃ ರಾಮ್ ಚರಣ್ ಅವರೇ ಈ ಬಗ್ಗೆ ಬಹಿರಂಗವಾಗಿ ಬಾಯಿ ಬಿಟ್ಟಿದ್ದಾರೆ.
ಇತ್ತೀಚೆಗೆ ರಾಮ್ ಚರಣ್ ಅವರು ‘ಬಿಗ್ ಬಾಸ್ ತೆಲುಗು ಸೀಸನ್ 5’ ವೇದಿಕೆಗೆ ಆಗಮಿಸಿದ್ದರು. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸಂಸ್ಥೆಯ ತೆಲುಗು ವಿಭಾಗಕ್ಕೆ ರಾಯಭಾರಿ ಆಗಿರುವ ಅವರು ಅದರ ಪ್ರಚಾರದ ಸಲುವಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ನಿರೂಪಕ ನಾಗಾರ್ಜುನ ಒಂದು ಪ್ರಶ್ನೆ ಕೇಳಿದರು. ‘ಆರ್ಆರ್ಆರ್ ಚಿತ್ರ ಹೇಗೆ ಮೂಡಿಬರುತ್ತಿದೆ? ನೀವು ಈಗಾಗಲೇ ಸಿನಿಮಾವನ್ನು ನೋಡಿದ್ದೀರಾ’ ನಾಗಾರ್ಜುನ ಪ್ರಶ್ನಿಸಿದರು. ಅದಕ್ಕೆ ರಾಮ್ ಚರಣ್ ಕಡೆಯಿಂದ ನಿರಾಸೆಯ ಉತ್ತರ ಬಂತು.
‘ಇಲ್ಲ ಸರ್. ಸಿನಿಮಾದ ಯಾವುದೇ ದೃಶ್ಯವನ್ನೂ ನಾನು ನೋಡಿಲ್ಲ. ಪ್ರತಿ ದಿನ ಡಬ್ಬಿಂಗ್ ಮಾಡುವಾಗ ಕೊನೇ ಪಕ್ಷ ಒಂದು ಹಾಡನ್ನಾದರೂ ತೋರಿಸಿ ಎಂದು ರಾಜಮೌಳಿ ಬಳಿ ಮನವಿ ಮಾಡಿಕೊಳ್ಳುತ್ತೇವೆ. ನಾನು ಮತ್ತು ಜ್ಯೂ. ಎನ್ಟಿಆರ್ ಒಂದೊಂದು ಹಾಡಿಗಾಗಿ 10-15 ದಿನ ಕೆಲಸ ಮಾಡಿದ್ದೇವೆ. ಅದು ಹೇಗೆ ಮೂಡಿಬಂದಿದೆ ನೋಡೋಣ ಎಂದರೂ ನಮಗೆ ಅವಕಾಶ ಕೊಡುತ್ತಿಲ್ಲ. ಅಷ್ಟರಮಟ್ಟಿಗೆ ರಾಜಮೌಳಿ ಗುಟ್ಟು ಮಾಡುತ್ತಿದ್ದಾರೆ’ ಎಂದು ರಾಮ್ ಚರಣ್ ಹೇಳಿದ್ದಾರೆ.
ರಾಮ್ ಚರಣ್ ಹೇಳಿದ ಈ ಮಾತು ಕೇಳಿ ಪ್ರೇಕ್ಷಕರಿಗೆ ಮಾತ್ರವಲ್ಲದೇ ನಾಗಾರ್ಜುನ ಅವರಿಗೂ ಅಚ್ಚರಿ ಆಯಿತು. ‘ರಾಜಮೌಳಿ ಅವರೇ.. ಇದು ಸರಿಯೇ? ರಾಮ್ ಚರಣ್ಗೆ ಅಲ್ಲದಿದ್ದರೆ, ಕೊನೆ ಪಕ್ಷ ನನಗಾದರೂ ತೋರಿಸಿ’ ಎಂದು ನಾಗಾರ್ಜುನ ತಮಾಷೆ ಮಾಡಿದರು. ರಾಜಮೌಳಿ ಸಿನಿಮಾದಲ್ಲಿ ಗ್ರಾಫಿಕ್ಸ್ಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಸಂಪೂರ್ಣವಾಗಿ ಆ ಕೆಲಸಗಳು ಮುಗಿದ ನಂತರವೇ ಅವರು ಕಲ್ಪಿಸಿಕೊಂಡ ದೃಶ್ಯಕ್ಕೆ ಅರ್ಥ ಬರುತ್ತದೆ. ಹಾಗಾಗಿ ಅರೆಬರೆ ಕೆಲಸ ಆಗಿರುವಾಗ ಆ ದೃಶ್ಯಗಳನ್ನು ತೋರಿಸುವುದು ಬೇಡ ಎಂಬುದು ಅವರ ಕಾಳಜಿ ಆಗಿರಬಹುದು.
ಆರ್ಆರ್ಆರ್ ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಇದು ದಕ್ಷಿಣ ಭಾರತದಲ್ಲಿ ಅವರಿಗೆ ಮೊದಲ ಸಿನಿಮಾ. ಅದೇ ರೀತಿ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಕೊರೊನಾ ಹಾವಳಿಯಿಂದಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ:
ಮುಗಿಯಿತೇ ರಾಜಮೌಳಿಯ ಅಚ್ಛೇ ದಿನ್? ಯಶಸ್ಸಿಗಾಗಿ ಕುಟುಂಬದವರು ಬೇರೆ ದಾರಿ ಹಿಡಿದಿರುವ ಶಂಕೆ
Junior NTR: ಅಬ್ಬಾ, RRR ಚಿತ್ರದಲ್ಲಿ ಹೀರೋಗೂ ಇದೆ ಐಡಿ ಕಾರ್ಡ್; ಅದಕ್ಕೆ ರಾಜಮೌಳಿ ರಿಯಾಕ್ಷನ್ ಏನು?