ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿರುವ ಸಿನಿಮಾಗಳ ಪೈಕಿ ಆರ್ಆರ್ಆರ್ ಚಿತ್ರ ಮುಂಚೂಣಿಯಲ್ಲಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ರಾಮ್ ಚರಣ್, ಜ್ಯೂ. ಎನ್ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಸದ್ಯಕ್ಕೆ ಲಾಕ್ಡೌನ್ನಿಂದಾಗಿ ಆರ್ಆರ್ಆರ್ ಶೂಟಿಂಗ್ ಸ್ಥಗಿತಗೊಂಡಿದೆ. ಆದರೆ ಚಿತ್ರೀಕರಣ ಮುಗಿಯುವುದಕ್ಕೂ ಮುನ್ನವೇ ಈ ಸಿನಿಮಾದ ಡಿಜಿಟಲ್ ಪ್ರಸಾರ ಹಕ್ಕುಗಳು ಸೇಲ್ ಆಗಿವೆ ಎಂಬ ಬಗ್ಗೆ ಮಾಹಿತಿ ಕೇಳಿಬರುತ್ತಿದೆ.
ರಾಜಮೌಳಿ ನಿರ್ದೇಶನದ ಸಿನಿಮಾಗಳೆಂದರೆ ಸಿಕ್ಕಾಪಟ್ಟೆ ಅದ್ದೂರಿಯಾಗಿರುತ್ತವೆ. ಆರ್ಆರ್ಆರ್ ಕೂಡ ಹಾಗೆಯೇ ಮೂಡಿಬರುತ್ತಿದೆ. ಈ ಸಿನಿಮಾವನ್ನು ಜಗತ್ತಿನಾದ್ಯಂತ ಇರುವ ಪ್ರೇಕ್ಷಕರು ಮುಗಿಬಿದ್ದು ನೋಡುತ್ತಾರೆ ಎಂಬ ಭರವಸೆ ನಿರ್ಮಾಪಕರಿಗೆ ಇದೆ. ಅದೇ ಭರವಸೆಯ ಮೇಲೆ ಓಟಿಟಿ ಸಂಸ್ಥೆಗಳು ಕೂಡ ಭಾರಿ ಮೊತ್ತಕ್ಕೆ ಚಿತ್ರವನ್ನು ಖರೀದಿಸಲು ಮುಂದೆ ಬಂದಿವೆ. ಮೂಲಗಳ ಪ್ರಕಾರ ಆರ್ಆರ್ಆರ್ ಸಿನಿಮಾದ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಜೀ5 ಖರೀದಿಸಿದೆ. ಬರೋಬ್ಬರಿ 325 ಕೋಟಿ ರೂ.ಗಳಿಗೆ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಭಾರತದಲ್ಲಿ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆದ ಮೊದಲ ಸಿನಿಮಾ ಇದು ಎನ್ನಲಾಗಿದೆ.
ಈ ಚಿತ್ರ ಓಟಿಟಿಗೆ ಮಾರಾಟವಾಗಿದೆ ಎಂದಮಾತ್ರಕ್ಕೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಿಲ್ಲ ಎಂದುಕೊಳ್ಳುವುದು ಬೇಡ. ಇದು ದೊಡ್ಡ ಪರದೆಗಾಗಿಯೇ ತಯಾರಾಗುತ್ತಿರುವ ಸಿನಿಮಾ. ಚಿತ್ರಮಂದಿರಗಳಲ್ಲೇ ಸಿನಿಮಾವನ್ನು ತೆರೆ ಕಾಣಿಸಬೇಕು ಎಂಬುದು ನಿರ್ಮಾಪಕರ ಉದ್ದೇಶ. ಈಗಾಗಲೇ ವಿತರಕರಿಂದ ಭಾರೀ ಮೊತ್ತ ಸಿಕ್ಕಿದೆ ಎನ್ನಲಾಗಿದೆ. ಚಿತ್ರದ ಆಡಿಯೋ ಹಕ್ಕುಗಳು ಕೂಡ ದೊಡ್ಡ ಬೆಲೆಗೆ ಮಾರಾಟ ಆಗಿವೆ. ಎಲ್ಲವೂ ಸೇರಿದರೆ ಬಿಡುಗಡೆಗೂ ಮುನ್ನವೇ ಈ ಸಿನಿಮಾ 800ರಿಂದ 850 ಕೋಟಿ ರೂ. ಬಾಚಿಕೊಂಡಿದೆ ಎಂದು ಅಂದಾಜಿಸಲಾಗುತ್ತಿದೆ.
ಈ ಯಾವುದೇ ಸುದ್ದಿಗಳ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಾಮ್ ಭೀಮ್ ಮತ್ತು ಅಲ್ಲುರಿ ಸೀತಾರಾಮ ರಾಜು ಪಾತ್ರಗಳಿಗೆ ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚೆಗೆ ಜ್ಯೂ. ಎನ್ಟಿಆರ್ ಜನ್ಮದಿನದ ಪ್ರಯುಕ್ತ ಕೊಮರಾಮ್ ಭೀಮ್ ಪಾತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:
Happy Birthday Jr NTR: ಕೊಮರಾಮ್ ಭೀಮ್ ಅವತಾರದಲ್ಲಿ ಎದುರಾದ ಜ್ಯೂ. ಎನ್ಟಿಆರ್
ಉಲ್ಟಾಪಲ್ಟಾ ಆಯ್ತು ರಾಜಮೌಳಿ ಲೆಕ್ಕಾಚಾರ; ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಸರ
Published On - 9:16 am, Sat, 22 May 21