ಚಿತ್ರರಂಗದಲ್ಲಿ ಆಗಾಗ ಡ್ರಗ್ಸ್ (Drugs) ವಾಸನೆ ಹರಡುತ್ತದೆ. ಟಾಲಿವುಡ್ ಮಂದಿ ಮೇಲೆ ಈಗಾಗಲೇ ಒಂದಷ್ಟು ಆರೋಪಗಳಿವೆ. ಮಾದಕ ದ್ರವ್ಯದ ಕೇಸ್ನಲ್ಲಿ ಈ ಹಿಂದೆ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈಗ ಚಿತ್ರತಂಡವೊಂದಕ್ಕೆ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ನೋಟಿಸ್ ಕಳಿಸಿದ್ದಾರೆ. ಹೌದು, ಸಾಯಿ ಧರಂ ತೇಜ್ (Sai Dharam Tej) ನಟನೆಯ ‘ಗಾಂಜಾ ಶಂಕರ್’ ಸಿನಿಮಾ ತಂಡದವರಿಗೆ ನೋಟಿಸ್ ನೀಡಲಾಗಿದೆ. ಹಾಗಂತ ಈ ಚಿತ್ರತಂಡದವರು ಡ್ರಗ್ಸ್ ಸೇವನೆ ಮಾಡಿಲ್ಲ. ಬದಲಿಗೆ, ಮಾದಕ ದ್ರವ್ಯದ ಮಾರಾಟ, ಸೇವನೆ ಮುಂತಾದ ದೃಶ್ಯಗಳನ್ನು ‘ಗಾಂಜಾ ಶಂಕರ್’ (Gaanja Shankar) ಸಿನಿಮಾದಲ್ಲಿ ವೈಭವೀಕರಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಮುಂಚಿತವಾಗಿಯೇ ಈ ಚಿತ್ರತಂಡಕ್ಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಟೈಟಲ್ ಬದಲಿಸುವಂತೆಯೂ ಸೂಚಿಸಲಾಗಿದೆ.
‘ತೆಲಂಗಾಣ ರಾಜ್ಯ ಮಾದಕ ದ್ರವ್ಯ ನಿಗ್ರಹ ದಳ’ದ ನಿರ್ದೇಶಕ ಸಂದೀಪ್ ಶಾಂಡಿಲ್ಯ ಅವರು ‘ಗಾಂಜಾ ಶಂಕರ್’ ಚಿತ್ರತಂಡಕ್ಕೆ ನೋಟಿಸ್ ನೀಡಿದ್ದಾರೆ. ಕೆಲವೇ ತಿಂಗಳ ಹಿಂದೆ ‘ಗಾಂಜಾ ಶಂಕರ್’ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಅದರಲ್ಲಿ ತೋರಿಸಿದ ದೃಶ್ಯಗಳನ್ನು ಗಮನಿಸಿ ಅಧಿಕಾರಿಗಳು ಚಿತ್ರತಂಡಕ್ಕೆ ನೋಟಿಸ್ ಕಳಿಸಿದ್ದಾರೆ. ‘ಕಥಾನಾಯಕನನ್ನು ಗಾಂಜಾ ವ್ಯಾಪಾರ ಮಾಡುವವನ ರೀತಿ ವೈಭವೀಕರಿಸಿದರೆ ಅದರಿಂದ ಯುವ ಜನತೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ’ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
‘ಈ ರೀತಿ ಸಿನಿಮಾ ಮಾಡಿದರೆ ಗಾಂಜಾ ಬಳಕೆಯನ್ನು ಉತ್ತೇಜಿಸಿದಂತೆ ಆಗಲಿದೆ. ನಿಮ್ಮ ಸಿನಿಮಾದಲ್ಲಿ ಮಾದಕ ವಸ್ತು ಬಳಕೆಯನ್ನು ತೋರಿಸಬಾರದು. ಗಾಂಜಾ ಶಂಕರ್ ಎಂಬ ಶೀರ್ಷಿಕೆಯನ್ನು ಬದಲಾಯಿಸಬೇಕು. ಟೈಟಲ್ನಲ್ಲಿ ಗಾಂಜಾ ಎಂಬ ಪದವನ್ನು ತೆಗೆದುಹಾಕಬೇಕು. ಒಂದು ವೇಳೆ ನಿಮ್ಮ ಸಿನಿಮಾದಲ್ಲಿ ಆಕ್ಷೇಪಾರ್ಹ ದೃಶ್ಯಗಳು ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನೋಟಿಸ್ ಮೂಲಕ ಖಡಕ್ ಎಚ್ಚರಿಕೆ ನೀಡಲಾಗಿದೆ. ಇದಕ್ಕೆ ಚಿತ್ರತಂಡದವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ಸಾಯಿ ಧರಂ ತೇಜ್ ಸಿನಿಮಾದಿಂದ ಪೂಜಾ ಹೆಗ್ಡೆ ಔಟ್; ಕಾರಣ ಕೇಳಿ ಚಿತ್ರತಂಡಕ್ಕೆ ಶಾಕ್
‘ಗಾಂಜಾ ಶಂಕರ್’ ಚಿತ್ರದಲ್ಲಿ ಸಾಯಿ ಧರಂ ತೇಜ್ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಸಂಪತ್ ನಂದಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಾಗ ವಂಶಿ ಅವರು ಬಂಡವಾಳ ಹೂಡುತ್ತಿದ್ದಾರೆ. ನೋಟಿಸ್ ಪ್ರತಿಯನ್ನು ಈ ಮೂವರಿಗೂ ಕಳಿಸಲಾಗಿದೆ. ಅಲ್ಲದೇ, ತೆಲುಗು ಸಿನಿಮಾ ಕಲಾವಿದರ ಸಂಘ, ನಿರ್ಮಾಪಕರ ಸಂಘ ಹಾಗೂ ನಿರ್ದೇಶಕರ ಸಂಘಕ್ಕೂ ನೋಟಿಸ್ ಪ್ರತಿ ರವಾನಿಸಲಾಗಿದೆ. ಈಗ ಸಿನಿಮಾ ತಂಡದವರು ಹೊಸ ಟೈಟಲ್ ಇಡುವುದು ಅನಿವಾರ್ಯ ಆಗಿದೆ.
Director @TS_NAB Issued Notice to #GANJASHANKAR film Crew raising objection over title & content depicting character as Ganja business, its glorification. Request film fraternity sensitize the concerned to refrain from glorifying sale, consume etc, of NDPS Substance.@TelanganaDGP pic.twitter.com/ImW927lKYV
— Telangana Anti Narcotics Bureau (@TS_NAB) February 17, 2024
ಸಾಯಿ ಧರಂ ತೇಜ್ ಅವರಿಗೆ 2021ರಲ್ಲಿ ಅಪಘಾತ ಆಗಿತ್ತು. ಬೈಕ್ನಿಂದ ಬಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದರು. ಹಲವು ತಿಂಗಳ ಕಾಲ ಅವರು ಚಿಕಿತ್ಸೆ ಪಡೆದರು. ನಂತರ ಅವರು ನಟಿಸಿದ ‘ವಿರೂಪಾಕ್ಷ’ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ‘ಗಾಂಜಾ ಶಂಕರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿರುವ ಅವರಿಗೆ ಈ ನೋಟಿಸ್ನಿಂದ ಕಾನೂನಿನ ಸಮಸ್ಯೆ ಎದುರಾದಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Mon, 19 February 24