ಧನುಷ್ ಮುಂದಿನ ಚಿತ್ರದಲ್ಲಿ ಸಾಯಿ ಪಲ್ಲವಿ ಪೊಲೀಸ್ ಅಧಿಕಾರಿ? ವೈರಲ್ ಆಗ್ತಿದೆ ‘ಡಿ55’ ಅಪ್‌ಡೇಟ್

ಖ್ಯಾತ ನಟಿ ಸಾಯಿ ಪಲ್ಲವಿ ಅವರು ಸಖತ್ ಬ್ಯುಸಿ ಆಗಿದ್ದಾರೆ. ಧನುಷ್ ಜೊತೆ ಅವರು ನಟಿಸಲಿರುವ ಹೊಸ ಸಿನಿಮಾದ ಬಗ್ಗೆ ಅಪ್ಡೇಟ್ ಕೇಳಿಬಂದಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರವನ್ನು ತಾತ್ಕಾಲಿಕವಾಗಿ ‘ಡಿ55’ ಎಂದು ಕರೆಯಲಾಗುತ್ತಿದೆ. ಸಾಯಿ ಪಲ್ಲವಿ ಅವರ ಪಾತ್ರದ ಬಗ್ಗೆ ಒಂದು ಗಾಸಿಪ್ ಹಬ್ಬಿದೆ.

ಧನುಷ್ ಮುಂದಿನ ಚಿತ್ರದಲ್ಲಿ ಸಾಯಿ ಪಲ್ಲವಿ ಪೊಲೀಸ್ ಅಧಿಕಾರಿ? ವೈರಲ್ ಆಗ್ತಿದೆ ‘ಡಿ55’ ಅಪ್‌ಡೇಟ್
Sai Pallavi, Dhanush
Image Credit source: Wunderbar Films

Updated on: Jun 11, 2026 | 5:18 PM

ಬಹುಭಾಷಾ ನಟಿ ಸಾಯಿ ಪಲ್ಲವಿ (Sai Pallavi) ಅವರು ಸದಾ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಇದೀಗ ಕಾಲಿವುಡ್ ಸ್ಟಾರ್ ಧನುಷ್ (Dhanush) ಹಾಗೂ ಮಾಲಿವುಡ್ ಸ್ಟಾರ್ ಹೀರೋ ಮಮ್ಮುಟ್ಟಿ ನಟಿಸುತ್ತಿರುವ ಬಹುನಿರೀಕ್ಷಿತ ‘D55’ ಸಿನಿಮಾದಲ್ಲಿ ಸಾಯಿ ಪಲ್ಲವಿ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹರಿದಾಡುತ್ತಿರುವ ಲೇಟೆಸ್ಟ್ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಖಾಕಿ ಖದರ್ ತೋರಿಸಲಿದ್ದಾರೆ. ಅಂದರೆ, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಗಾಸಿಪ್ ಜೋರಾಗಿ ಕೇಳಿಬರುತ್ತಿದೆ.

ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘D55’ ಒಂದು ಹೈ-ವೋಲ್ಟೇಜ್ ಸ್ಪೈ ಆ್ಯಕ್ಷನ್ ಡ್ರಾಮಾ ಆಗಿರಲಿದೆ. ಈ ಹಿಂದೆ ‘ಮಾರಿ 2’ ಚಿತ್ರದ ‘ರೌಡಿ ಬೇಬಿ’ ಹಾಡಿನ ಮೂಲಕ ಧನುಷ್ ಮತ್ತು ಸಾಯಿ ಪಲ್ಲವಿ ಜೋಡಿ ಧೂಳೆಬ್ಬಿಸಿತ್ತು. ಈಗ ಮತ್ತೊಮ್ಮೆ ಈ ಜೋಡಿ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆದರೆ, ಸಾಯಿ ಪಲ್ಲವಿ ಅವರ ಪೊಲೀಸ್ ಪಾತ್ರದ ಬಗ್ಗೆ ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಸದ್ಯ ಈ ಚಿತ್ರದ ಶೂಟಿಂಗ್ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಜುಲೈ 2026ರ ವೇಳೆಗೆ ಚಿತ್ರೀಕರಣ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಈ ನಡುವೆ ಚಿತ್ರದ ಟೈಟಲ್ ಬಗ್ಗೆಯೂ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಈ ಹಿಂದೆ ಧನುಷ್ ಅವರ ಹುಟ್ಟುಹಬ್ಬದ ದಿನದಂದು (ಜುಲೈ 28) ಶೀರ್ಷಿಕೆ ಅನಾವರಣ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗಿನ ಮಾಹಿತಿ ಪ್ರಕಾರ, ಚಿತ್ರತಂಡ ಈ ವಾರವೇ ಶೀರ್ಷಿಕೆಯನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. ಚಿತ್ರದಲ್ಲಿ ಧನುಷ್ ಪಾತ್ರದ ಹೆಸರಾದ ‘ಚೆಳಿಯನ್’ ಎಂಬುದನ್ನೇ ಸಿನಿಮಾದ ಶೀರ್ಷಿಕೆಯನ್ನಾಗಿ ಇಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಈ ಚಿತ್ರದಲ್ಲಿ ಮಮ್ಮುಟ್ಟಿ ಹಾಗೂ ಧನುಷ್ ಪ್ರಮುಖ ಪಾತ್ರಗಳಲ್ಲಿದ್ದರೆ, ಸಾಯಿ ಪಲ್ಲವಿ ಜೊತೆಗೆ ಮತ್ತೊಬ್ಬ ಜನಪ್ರಿಯ ನಟಿ ಶ್ರೀಲೀಲಾ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಈಗಾಗಲೇ ಈ ಚಿತ್ರಕ್ಕಾಗಿ ಎರಡು ಹಾಡುಗಳ ಸಂಯೋಜನೆಯನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಾಯಿ ಪಲ್ಲವಿ ಕೈತಪ್ಪಿದ ಮಧುಬಾಲಾ ಬಯೋಪಿಕ್ ಅವಕಾಶ: ಕಾರಣ ಏನು?

ಈ ಚಿತ್ರದ ಕೆಲಸ ಮುಗಿದ ನಂತರ ಧನುಷ್ ಅವರು ನಿರ್ದೇಶಕ ತಮಿಳರಸನ್ ಪಚ್ಚಮುತ್ತು ಜೊತೆ ಮಧುರೈ ಹಿನ್ನೆಲೆಯ ಆ್ಯಕ್ಷನ್ ಸಿನಿಮಾವೊಂದನ್ನು ಮಾಡಲಿದ್ದಾರೆ. ಇತ್ತ ಸಾಯಿ ಪಲ್ಲವಿ ಅವರು ರಣಬೀರ್ ಕಪೂರ್ ಮತ್ತು ಯಶ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಸಿನಿಮಾ ಎರಡು ಭಾಗದಲ್ಲಿ ತಯಾರಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us