ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಧ್ವನಿ ಇಲ್ಲ? ‘ಏಕ್ ದಿನ್’ ಸೋಲಿನ ಬಳಿಕ ನಟಿಗೆ ಮತ್ತೊಂದು ಹಿನ್ನಡೆ
ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ಅವರಿಗೆ ಆರಂಭದಲ್ಲೇ ನಿರಾಸೆ ಆಗಿದೆ. ಅವರ ಹಿಂದಿ ಉಚ್ಚಾರಣೆ ಬಗ್ಗೆ ಟೀಕೆ ವ್ಯಕ್ತವಾಗಿದೆ. ‘ರಾಮಾಯಣ’ ಸಿನಿಮಾದಲ್ಲಿ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಸೀತಾ ಪಾತ್ರಧಾರಿ ಸಾಯಿ ಪಲ್ಲವಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಸಾಯಿ ಪಲ್ಲವಿ (Sai Pallavi) ಅವರ ಹಿಂದಿ ಉಚ್ಚಾರಣೆಯ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ಹಿನ್ನೆಲೆಯಲ್ಲಿ, ಚಿತ್ರತಂಡವು ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ ಮಾಡಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದರಿಂದ ಹಿಂದಿ ಚಿತ್ರರಂಗದಲ್ಲಿ ಸಾಯಿ ಪಲ್ಲವಿ ಅವರಿಗೆ ಕೊಂಚ ಹಿನ್ನಡೆ ಆದಂತೆ ಆಗಲಿದೆ. ಅಲ್ಲದೇ, ಅವರ ಅಭಿಮಾನಿಗಳಿಗೆ ಖಂಡಿತಾ ಬೇಸರ ಆಗಲಿದೆ.
ಸಾಯಿ ಪಲ್ಲವಿ ಅಭಿನಯದ ‘ಏಕ್ ದಿನ್’ ಚಿತ್ರದ ಪ್ರಚಾರದ ವೇಳೆ ಅವರ ಹಿಂದಿ ಉಚ್ಚಾರಣೆಯಲ್ಲಿ ತಮಿಳು ಶೈಲಿ ಎದ್ದು ಕಾಣುತ್ತಿತ್ತು. ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ಸಾಯಿ ಪಲ್ಲವಿ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ‘ಹಿಂದಿಯ ಮೂಲ ಪದಗಳನ್ನೇ ಸರಿಯಾಗಿ ಉಚ್ಚರಿಸಲು ಬಾರದ ನಟಿಯನ್ನು ಸೀತಾ ಮಾತೆಯ ಪಾತ್ರಕ್ಕೆ ಆಯ್ಕೆ ಮಾಡಿದ್ದೇಕೆ?’ ಎಂದು ಹಲವರು ಪ್ರಶ್ನಿಸಿದ್ದರು.
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಒಂದು ಸಾಂಸ್ಕೃತಿಕ ಮಹತ್ವವಿರುವ ಚಿತ್ರವಾಗಿದೆ. ಇದರಲ್ಲಿ ಭಾಷೆ ಅತ್ಯಂತ ಶುದ್ಧವಾಗಿ ಮತ್ತು ಸ್ಪಷ್ಟವಾಗಿರಬೇಕು ಎಂಬುದು ತಂಡದ ಆಶಯ. ‘ಏಕ್ ದಿನ್’ ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ಪಾತ್ರವು ತಮಿಳು ಹಿನ್ನೆಲೆಯದ್ದಾಗಿದ್ದರಿಂದ ಅಲ್ಲಿನ ಉಚ್ಚಾರಣೆ ಹೊಂದಿಕೆಯಾಗಿತ್ತು. ಆದರೆ ‘ರಾಮಾಯಣ’ ಸಿನಿಮಾದಲ್ಲಿ ಸೀತಾ ದೇವಿಯ ಪಾತ್ರಕ್ಕೆ ಅತ್ಯಂತ ಪರಿಷ್ಕೃತ ಹಿಂದಿ ಬೇಕಿರುವುದರಿಂದ, ವೃತ್ತಿಪರ ಡಬ್ಬಿಂಗ್ ಕಲಾವಿದರಿಂದ ಧ್ವನಿ ಕೊಡಿಸಲು ನಿರ್ಮಾಪಕರು ಚಿಂತಿಸುತ್ತಿದ್ದಾರೆ ಎಂದು ವರದಿ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಾಯಿ ಪಲ್ಲವಿ ಪರವಾಗಿ ಕೆಲವರು ಬ್ಯಾಟಿಂಗ್ ಮಾಡುತ್ತಿದ್ದರೆ, ಇನ್ನು ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ಸಾಯಿ ಪಲ್ಲವಿ ಅವರ ನಟನೆ ಅದ್ಭುತವಾಗಿದೆ, ಭಾಷೆಯೊಂದೇ ಅಡೆತಡೆಯಾಗಬಾರದು’ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ‘ಇಷ್ಟು ದೊಡ್ಡ ಚಿತ್ರಕ್ಕೆ ಭಾಷೆಯ ಮೇಲೆ ಹಿಡಿತವಿರುವ ನಟಿಯನ್ನು ಆಯ್ಕೆ ಮಾಡಬೇಕಿತ್ತು’ ಎಂದು ಟೀಕಾಕಾರರು ವಾದಿಸುತ್ತಿದ್ದಾರೆ.
ಇದನ್ನೂ ಓದಿ: ಚೇತರಿಕೆ ಕಾಣದ ಸಾಯಿ ಪಲ್ಲವಿ ಸಿನಿಮಾ; ನಿರ್ಮಾಪಕ ಆಮಿರ್ಗೆ ನಷ್ಟ?
‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ ನಟಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ಅಭಿನಯಿಸುತ್ತಿದ್ದಾರೆ. ಸನ್ನಿ ಡಿಯೋಲ್ ಅವರಿಗೆ ಹನುಮಂತನ ಪಾತ್ರ ನೀಡಲಾಗಿದೆ. ರವಿ ದುಬೆ ಅವರು ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




