‘ಯಲ್ಲಮ್ಮ’ ಸಿನಿಮಾದಿಂದ ಹೊರನಡೆದ ಸಾಯಿ ಪಲ್ಲವಿ, ಕಾರಣವೇನು?
Sai Pallavi: ನಟಿ ಸಾಯಿ ಪಲ್ಲವಿ, ಸಿನಿಮಾ ಆಯ್ಕೆಯಲ್ಲಿ ಬಹಳ ಚ್ಯೂಸಿ, ಕತೆ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ‘ಯಲ್ಲಮ್ಮ’ ಹೆಸರಿನ ತೆಲುಗು ಸಿನಿಮಾ ಅನ್ನು ಸಾಯಿ ಪಲ್ಲವಿ ಒಪ್ಪಿಕೊಂಡಿದ್ದರು. ಆದರೆ ಈಗ ಹಠಾತ್ತನೆ ‘ಯಲ್ಲಮ್ಮ’ ಸಿನಿಮಾದಿಂದ ಹೊರ ನಡೆದಿದ್ದಾರೆ ನಟಿ ಸಾಯಿ ಪಲ್ಲವಿ. ಕಾರಣವೇನು ಗೊತ್ತೆ?

ಸಾಯಿ ಪಲ್ಲವಿ ಸಿನಿಮಾಗಳ ಆಯ್ಕೆಯಲ್ಲಿ ಬಹಳ ಎಚ್ಚರಿಕೆವಹಿಸುತ್ತಾರೆ. ಪ್ರತಿದಿನವೂ ಅವರಿಗೆ ಕತೆ ಹೇಳಲು ನಿರ್ದೇಶಕರು ಸಾಲುಗಟ್ಟಿರುತ್ತಾರೆ, ಅಡ್ವಾನ್ಸ್ ನೀಡಲು ಕನಿಷ್ಟ 20 ನಿರ್ಮಾಪಕರು ರೆಡಿಯಾಗಿದ್ದಾರೆ. ಆದರೆ ಸಾಯಿ ಪಲ್ಲವಿ ಆದ್ಯತೆ ಏನಿದ್ದರು ಕತೆಗೆ ಮತ್ತು ತಮ್ಮ ಪಾತ್ರಕ್ಕೆ. ಕೇವಲ ಮರ ಸುತ್ತುವ, ಹಾಡುಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ನಾಯಕಿಯ ಪಾತ್ರವನ್ನು ಅವರು ಒಪ್ಪುವುದಿಲ್ಲ. ಪಾತ್ರ ಗಟ್ಟಿಯಾಗಿದ್ದರೆ ಮಾತ್ರವೇ ಸಾಯಿ ಪಲ್ಲವಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳುತ್ತಾರೆ ಇಲ್ಲವಾದರೆ ಇಲ್ಲ. ಆದರೆ ಇತ್ತೀಚೆಗೆ ಸಿನಿಮಾ ಒಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದ ಸಾಯಿ ಪಲ್ಲವಿ ಆ ನಂತರ ಸಿನಿಮಾದಿಂದ ಹೊರಗೆ ಹೋಗಿದ್ದಾರೆ.
‘ಯಲ್ಲಮ್ಮ’ ಹೆಸರಿನ ಸಿನಿಮಾದಲ್ಲಿ ನಟಿಸಲು ಸಾಯಿ ಪಲ್ಲವಿ ಒಪ್ಪಿಕೊಂಡಿದ್ದರು. ಈ ಹಿಂದೆ ‘ಬಲಗಂ’ ಅಂಥಹಾ ಅದ್ಭುತ ಸಿನಿಮಾ ನಿರ್ದೇಶಿಸಿದ್ದ ವೇಣು ಯಲದಂಡಿ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಕತೆ ಇಷ್ಟವಾಗಿ ಸಾಯಿ ಪಲ್ಲವಿ ಓಕೆ ಹೇಳಿದ್ದರು. ಸಿನಿಮಾಕ್ಕೆ ದಿಲ್ ರಾಜು ಬಂಡವಾಳ ಹೂಡುತ್ತಿದ್ದು, ಸಿನಿಮಾದಲ್ಲಿ ನಾಯಕನಾಗಿ ‘ಜಯಂ’ ಖ್ಯಾತಿಯ ನಿತಿನ್ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿರುವ ಸಮಯದಲ್ಲಿ ಹಠಾತ್ತನೆ ಸಾಯಿ ಪಲ್ಲವಿ ಸಿನಿಮಾದಿಂದ ಹೊರಗೆ ನಡೆದಿದ್ದಾರೆ.
ಇದನ್ನೂ ಓದಿ:ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಆಯ್ಕೆಗೆ ಯಶ್ ಕಾರಣ
‘ಯಲ್ಲಮ್ಮ’ ಸಾಮಾಜಿಕ ಕಥಾಹಂದರ ಇರುವ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ನಾಯಕಿಯದ್ದೇ ಪ್ರಧಾನ ಪಾತ್ರವಂತೆ. ಅದೇ ಕಾರಣಕ್ಕೆ ಸಿನಿಮಾ ತಂಡ ಸಾಯಿ ಪಲ್ಲವಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಸಾಯಿ ಪಲ್ಲವಿಗೂ ಸಹ ಕತೆ ಬಹಳ ಇಷ್ಟವಾಗಿತ್ತು. ನಿತಿನ್ ಜೊತೆಗೆ ಮೊದಲ ಬಾರಿಗೆ ನಟಿಸಲು ಒಪ್ಪಿಕೊಂಡಿದ್ದರು. ಆದರೆ, ಡೇಟ್ಸ್ ಸಮಸ್ಯೆಯಿಂದಾಗಿ ಸಾಯಿ ಪಲ್ಲವಿ ಅನಿವಾರ್ಯವಾಗಿ ಸಿನಿಮಾದಿಂದ ಹೊರಗೆ ಬಂದಿದ್ದಾರೆ.
ಸಾಯಿ ಪಲ್ಲವಿ ಇದೀಗ ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಇನ್ನೂ ಹಲವು ಸಿನಿಮಾಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಡೇಟ್ಸ್ ಸಮಸ್ಯೆ ಎದುರಾಗಿದ್ದು, ‘ಯಲ್ಲಮ್ಮ’ ಸಿನಿಮಾದಲ್ಲಿ ನಟಿಸಲು ಇಷ್ಟವಿದ್ದರೂ ಅನಿವಾರ್ಯವಾಗಿ ಹೊರಬಂದಿದ್ದಾರೆ. ಆದರೆ ‘ಯಲ್ಲಮ್ಮ’ ಚಿತ್ರತಂಡ ಪ್ರೀ ಪ್ರೊಡಕ್ಷನ್ ನಿಲ್ಲಿಸಿಲ್ಲ, ಸಾಯಿ ಪಲ್ಲವಿ ಹೊರಹೋದರೂ ಸಹ ಮತ್ತೊಬ್ಬ ಸ್ಟಾರ್ ನಟಿಯನ್ನೇ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
‘ಯಲ್ಲಮ್ಮ’ ಸಿನಿಮಾದ ಪಾತ್ರ ಗಟ್ಟಿ ಪಾತ್ರವಾಗಿದ್ದು ನುರಿತ ನಟಿಯೇ ಪಾತ್ರಕ್ಕೆ ಬೇಕಾಗಿದ್ದ ಕಾರಣ, ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ ನಿರ್ದೇಶಕ ವೇಣು. ಕೀರ್ತಿ ಸುರೇಶ್ ಈ ಮೊದಲು ನಟ ನಿತಿನ್ ಜೊತೆಗೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಮತ್ತೊಮ್ಮೆ ನಿತಿನ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ನಟಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ