Sai Pallavi: ಚಿತ್ರಮಂದಿರದಲ್ಲಿ ಸೋತ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಚಿತ್ರಕ್ಕೆ ಈಗ ಅಂತಾರಾಷ್ಟ್ರೀಯ ಮನ್ನಣೆ
Gargi Movie: ಸಾಯಿ ಪಲ್ಲವಿ ಅವರ ಪಾಲಿಗೆ ‘ಗಾರ್ಗಿ’ ಸಿನಿಮಾ ತುಂಬ ಸ್ಪೆಷಲ್. ಕನ್ನಡದಲ್ಲೂ ಮೂಡಿಬಂದ ಈ ಚಿತ್ರಕ್ಕೆ ಸ್ವತಃ ಸಾಯಿ ಪಲ್ಲವಿ ಅವರೇ ಡಬ್ ಮಾಡಿದ್ದು ವಿಶೇಷ.
ಚಿತ್ರರಂಗದಲ್ಲಿ ನಟಿ ಸಾಯಿ ಪಲ್ಲವಿ (Sai Pallavi) ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಗ್ಲಾಮರ್ ಹಂಗಿಲ್ಲದೇ ಅವರು ಅಪ್ಪಟ ಪ್ರತಿಭೆಯಿಂದಲೇ ಬೆಳೆದುಬಂದಿದ್ದಾರೆ. ಭಾರತದ ಟಾಪ್ ನಟಿಯರ ಪಟ್ಟಿಯಲ್ಲಿ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ. ಆದರೆ ಕೆಲವು ಕಾಂಟ್ರವರ್ಸಿಗಳು ಅವರ ಕೊರಳಿಗೆ ಸುತ್ತಿಕೊಂಡಿವೆ. ಹಾಗಾಗಿ ಚಿತ್ರಮಂದಿರದಲ್ಲಿ ಸಾಯಿ ಪಲ್ಲವಿ ಸಿನಿಮಾಗಳು ಗೆಲ್ಲುತ್ತಿಲ್ಲ. ಈ ವರ್ಷ ತೆರೆಕಂಡ ಅವರ ಎರಡು ಚಿತ್ರಗಳಾದ ‘ವಿರಾಟ ಪರ್ವಂ’ ಮತ್ತು ‘ಗಾರ್ಗಿ’ (Gargi Movie) ಜನಮೆಚ್ಚುಗೆ ಗಳಿಸುವಲ್ಲಿ ವಿಫಲವಾದವು. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾಗಳು ಸೋತು ಸುಣ್ಣವಾದವು. ಆದರೆ ಈಗ ‘ಗಾರ್ಗಿ’ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ಮಾಸ್ಕೋ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ (Moscow International Film Festival) ಈ ಸಿನಿಮಾ ಪ್ರದರ್ಶನ ಆಗಲಿದೆ.
ಈ ಸುದ್ದಿ ಕೇಳಿ ಸಾಯಿ ಪಲ್ಲವಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮಾಸ್ಕೋ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಭಾರತದಿಂದ ಆಯ್ಕೆ ಆದ ಕೆಲವೇ ಸಿನಿಮಾಗಳಲ್ಲಿ ‘ಗಾರ್ಗಿ’ ಕೂಡ ಸ್ಥಾನ ಪಡೆದುಕೊಂಡಿದೆ. ಅದರ ಜೊತೆಗೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’, ವಿಕ್ಕಿ ಕೌಶಲ್ ಅಭಿನಯದ ‘ಸರ್ದಾರ್ ಉದ್ದಮ್’ ಚಿತ್ರಗಳು ಕೂಡ ಆಯ್ಕೆ ಆಗಿವೆ.
ಮಾಸ್ಕೋದಲ್ಲಿ ಇರುವ ಭಾರತದ ರಾಯಭಾರ ಕಚೇರಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಮಾಸ್ಕೋ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆ ಆದ ಸಿನಿಮಾಗಳ ಪೋಸ್ಟರ್ಗಳನ್ನು ಹಂಚಿಕೊಳ್ಳಲಾಗಿದೆ. ಸಾಯಿ ಪಲ್ಲವಿ ಅವರ ಅಪ್ಪಟ ಅಭಿಮಾನಿಗಳು ಈ ಪೋಸ್ಟ್ಗೆ ಕಮೆಂಟ್ ಮಾಡುತ್ತಿದ್ದಾರೆ. ‘ಗಾರ್ಗಿ’ ಚಿತ್ರಕ್ಕೆ ಇನ್ನಷ್ಟು ಮನ್ನಣೆ ಮತ್ತು ಪ್ರಶಸ್ತಿ ಸಿಗಬೇಕು ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ. ಈ ಚಿತ್ರ ಆಸ್ಕರ್ಗೆ ಆಯ್ಕೆ ಆಗಬೇಕು ಎಂಬುದು ಕೆಲವರ ಬಯಕೆ.
ಸಾಯಿ ಪಲ್ಲವಿ ಅವರ ಪಾಲಿಗೆ ‘ಗಾರ್ಗಿ’ ಸಿನಿಮಾ ತುಂಬ ಸ್ಪೆಷಲ್ ಆಗಿದೆ. ಈ ಚಿತ್ರದ ಬಗ್ಗೆ ಅವರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಸಿನಿಮಾ ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಮೂಡಿಬಂದಿದೆ. ಕನ್ನಡಕ್ಕೆ ಸ್ವತಃ ಸಾಯಿ ಪಲ್ಲವಿ ಅವರೇ ಡಬ್ ಮಾಡಿರುವುದು ವಿಶೇಷ. ಜುಲೈ 15ರಂದು ಥಿಯೇಟರ್ನಲ್ಲಿ ರಿಲೀಸ್ ಆದ ‘ಗಾರ್ಗಿ’ ಚಿತ್ರಕ್ಕೆ ಜನರು ಹೆಚ್ಚು ಪ್ರೀತಿ ತೋರಿಸಲಿಲ್ಲ. ಆದರೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಬಳಿಕ ಆಗಸ್ಟ್ 12ರಂದು ‘ಸೋನಿ ಲಿವ್’ ಮೂಲಕ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಯಿತು. ಒಟಿಟಿಯಲ್ಲಿ ಸಿನಿಮಾ ನೋಡಿದ ಅನೇಕರು ಪ್ರಶಂಸೆ ವ್ಯಕ್ತಪಡಿಸಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.