‘ಒಂದು ದಿನದಲ್ಲಿ ನನ್ನ ಜೀವನವೇ ಬದಲಾಯ್ತು’; ಟೀಚರ್ ‘ಗಾರ್ಗಿ’ ಬಾಳಿನ ಏರಿಳಿತದ ಹಾದಿ

ಟ್ರೇಲರ್​​ನಲ್ಲಿ ಗಾರ್ಗಿ ಪಾತ್ರಕ್ಕೆ ಅವರದ್ದೇ ಧ್ವನಿ ಇದೆ. ಅವರು ಸ್ಪಷ್ಟ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದು ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಾಯಿ ಪಲ್ಲವಿ ಅವರು ತಂದೆಗಾಗಿ ಹೋರಾಡುವ ಮಗಳಾಗಿ ಕಾಣಿಸಿಕೊಂಡಿದ್ದಾರೆ.

‘ಒಂದು ದಿನದಲ್ಲಿ ನನ್ನ ಜೀವನವೇ ಬದಲಾಯ್ತು’; ಟೀಚರ್ ‘ಗಾರ್ಗಿ’ ಬಾಳಿನ ಏರಿಳಿತದ ಹಾದಿ
ಸಾಯಿ ಪಲ್ಲವಿ
TV9kannada Web Team

| Edited By: Rajesh Duggumane

Jul 07, 2022 | 8:46 PM

ನಟಿ ಸಾಯಿ ಪಲ್ಲವಿ (Sai Pallavi) ಅವರು ಚಿತ್ರರಂಗದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಎಲ್ಲ ಹೀರೋಯಿನ್​ಗಳಂತೆ ಅವರು ಮೇಕಪ್​ ಹಾಕುವುದಿಲ್ಲ. ತಾವು ಇರುವ ರೀತಿಯಲ್ಲೇ ಕ್ಯಾಮೆರಾ ಫೇಸ್ ಮಾಡುತ್ತಾರೆ. ಇದು ‘ಗಾರ್ಗಿ’ ಸಿನಿಮಾದಲ್ಲೂ (Gargi Movie) ಮುಂದುವರಿದಿದೆ. ‘ಗಾರ್ಗಿ’ ಚಿತ್ರದ ಟ್ರೇಲರ್ ಇಂದು (ಜುಲೈ 7) ರಿಲೀಸ್ ಆಗಿದೆ. ಇದರಲ್ಲಿ ಅವರ ನಟನೆ ಗಮನ ಸೆಳೆದಿದೆ. ತಂದೆಗಾಗಿ ಒದ್ದಾಡುವ ಮಗಳಾಗಿ ಸಾಯಿ ಪಲ್ಲವಿ ಪಾತ್ರ ಹೈಲೈಟ್ ಆಗಿದೆ.

‘ಗಾರ್ಗಿ’ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಗಾರ್ಗಿ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಗಾರ್ಗಿ ಮಧ್ಯಮ ವರ್ಗದ ಹುಡುಗಿ. ತಂದೆ ಸೆಕ್ಯುರಿಟಿ ಗಾರ್ಡ್​. ಗಾರ್ಗಿ ತೀರ್ಥಹಳ್ಳಿಯವಳು. ಅವಳು ಬೆಂಗಳೂರಿನಲ್ಲಿ ಟೀಚರ್​ ಆಗಿ ಕೆಲಸ ಮಾಡುತ್ತಿರುತ್ತಾಳೆ. ಒಂದು ದಿನ ಗಾರ್ಗಿ ತಂದೆ ಅರೆಸ್ಟ್ ಆಗುತ್ತಾನೆ. ಪೊಲೀಸರ ಮೇಲೆ ಗಾರ್ಗಿಗೆ ಅನುಮಾನ ಮೂಡುತ್ತದೆ. ‘ಒಂದು ತಿಂಗಳು ನಾವು ಫಾಲೋಅಪ್​ ಮಾಡಿ ನಿಮ್ಮ ತಂದೆಯನ್ನು ಅರೆಸ್ಟ್ ಮಾಡಿದ್ದೇವೆ’ ಎಂದು ಪೊಲೀಸರು ಗಾರ್ಗಿಗೆ ಹೇಳುತ್ತಾರೆ. ಅರೆಸ್ಟ್​ ಪ್ರಕರಣ ಕೋರ್ಟ್​ನಲ್ಲೂ ವಿಚಾರಣೆಗೆ ಬರುತ್ತದೆ. ಇವಿಷ್ಟು ವಿಚಾರಗಳು ಟ್ರೇಲರ್​ನಲ್ಲಿದೆ.

ಈ ಸಿನಿಮಾಗೆ ಸಾಯಿ ಪಲ್ಲವಿ ಅವರು ಕನ್ನಡ ಕಲಿತು ಡಬ್ ಮಾಡಿದ್ದಾರೆ. ಟ್ರೇಲರ್​​ನಲ್ಲಿ ಗಾರ್ಗಿ ಪಾತ್ರಕ್ಕೆ ಅವರದ್ದೇ ಧ್ವನಿ ಇದೆ. ಅವರು ಸ್ಪಷ್ಟ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದು ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಾಯಿ ಪಲ್ಲವಿ ಅವರು ತಂದೆಗಾಗಿ ಹೋರಾಡುವ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಅವರ ನೈಜ ನಟನೆ ಮೂಲಕ ಗಮನ ಸೆಳೆಯುತ್ತಾರೆ. ಈ ಸಿನಿಮಾ ಜುಲೈ 15ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ರಿಲೀಸ್​ಗಾಗಿ ಅವರು ಕಾದಿದ್ದಾರೆ.

ಇತ್ತೀಚೆಗೆ ತೆರೆಗೆ ಬಂದ ಅವರ ನಟನೆಯ ‘ವಿರಾಟ ಪರ್ವಂ’ ಚಿತ್ರ ಸೋಲು ಕಂಡಿದೆ. ಸಾಯಿ ಪಲ್ಲವಿ ಅವರು ಈ ಚಿತ್ರದ ಪ್ರಚಾರದ ವೇಳೆ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿ ಮಾಡಿತ್ತು. ಸಿನಿಮಾ ಸೋಲಲು ಅವರ ಹೇಳಿಕೆಯೂ ಕಾರಣ ಎನ್ನಲಾಗಿತ್ತು. ಈಗ ‘ಗಾರ್ಗಿ’ ಸಿನಿಮಾ ರಿಲೀಸ್ ಆಗುತ್ತಿದ್ದು ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada