
ಬಾಲಿವುಡ್ಗೆ (Bollywood) ಹೋಲಿಸಿದರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಯೋಪಿಕ್ಗಳು ತುಸು ಕಡಿಮೆಯೇ ಎನ್ನಬೇಕು. ರಾಮ್ ಗೋಪಾಲ್ ವರ್ಮಾ ಕೆಲ ಗ್ಯಾಂಗ್ಸ್ಟರ್ಗಳು, ವೀರಪ್ಪನ್ ಬಗ್ಗೆ ಸಿನಿಮಾ ಮಾಡಿದ್ದು ಬಿಟ್ಟರೆ ನಿಜಕ್ಕೂ ಮಹನೀಯ ವ್ಯಕ್ತಿಗಳ ಬಗ್ಗೆ ಸಿನಿಮಾ ಬಂದಿರುವುದು ವಿರಳವೇ. ಇದೀಗ ಭಾರತದ ಶ್ರೇಷ್ಠ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನವನ್ನು ತೆರೆಯ ಮೇಲೆ ತರಲು ವೇದಿಕೆ ಸಜ್ಜಾಗುತ್ತಿದೆ. ಭಾರತ ರತ್ನ ಪಡೆದ ಮೊಟ್ಟ ಮೊದಲ ಸಂಗೀತ ಕ್ಷೇತ್ರದ ಸಾಧಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಕುರಿತ ಸಿನಿಮಾ ತಯಾರಾಗಲಿದ್ದು, ಗಾನ ವಿದೂಷಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ.
ಸಾಯಿ ಪಲ್ಲವಿ, ಈಗಾಗಲೇ ತಮ್ಮ ನಟನೆಯಿಂದ ದೇಶದಾದ್ಯಂತ ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ. ಅಲ್ಲದೆ, ಸಾಯಿ ಪಲ್ಲವಿ, ಸಾಮಾನ್ಯ ಕಮರ್ಶಿಯಲ್ ಸಿನಿಮಾಗಳಲ್ಲದೆ, ಮೌಲ್ಯವುಳ್ಳ, ಭಿನ್ನ ಕತೆಯುಳ್ಳ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಾ ಬಂದಿದ್ದು, ಇದೀಗ ಖ್ಯಾತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ. ಈ ಪಾತ್ರಕ್ಕಾಗಿ ವಿಶೇಷ ತಯಾರಿಯನ್ನೂ ಸಹ ಸಾಯಿ ಪಲ್ಲವಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ರಜನೀಕಾಂತ್-ಕಮಲ್ ಹಾಸನ್ ಸಿನಿಮಾನಲ್ಲಿ ನಟಿಸಲಿದ್ದಾರೆ ಸಾಯಿ ಪಲ್ಲವಿ?
ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನ ಆಧರಿತ ಸಿನಿಮಾವನ್ನು ಅಲ್ಲು ಅರ್ಜುನ್ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ನಿರ್ಮಾಣ ಮಾಡಲಿದ್ದಾರೆ. ಸಿನಿಮಾ ನಿರ್ದೇಶನ ಮಾಡಲಿರುವುದು ಗೌತಮ್ ತಿನರೂರಿ. ಇವರು ಈ ಮೊದಲು ತೆಲುಗಿನಲ್ಲಿ ‘ಮಳ್ಳಿ ರಾವ’, ರಾಷ್ಟ್ರಪ್ರಶಸ್ತಿ ವಿಜೇತ ‘ಜೆರ್ಸಿ’, ಇತ್ತೀಚೆಗೆ ಬಿಡುಗಡೆ ಆಗಿದ್ದ ‘ಕಿಂಗ್ಡಮ್’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ ಅವರು ‘ಮ್ಯಾಜಿಕ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಮ್ಯಾಜಿಕ್’ ಸಿನಿಮಾದ ಬಳಿಕ ಅವರು ಎಂಎಸ್ ಸುಬ್ಬಲಕ್ಷ್ಮಿ ಜೀವನ ಆಧರಿಸಿದ ಸಿನಿಮಾ ಮಾಡಲಿದ್ದಾರೆ.
ಇನ್ನು ಸಾಯಿ ಪಲ್ಲವಿ ಅವರು ಪ್ರಸ್ತುತ ಕೆಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಣ್ಬೀರ್ ಕಪೂರ್, ಯಶ್ ನಟಿಸುತ್ತಿರುವ ರಾಮಾಯಣ ಸಿನಿಮಾನಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಹಿಂದಿಯ ‘ಮೇರೆ ರಹೋ’ ಹೆಸರಿನ ಸಿನಿಮಾನಲ್ಲೂ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಸಿನಿಮಾದ ನಾಯಕ ಆಮಿರ್ ಖಾನ್ ಪುತ್ರ ಜುನೈದ್ ಖಾನ್. ಇದರ ಜೊತೆಗೆ ಮಣಿರತ್ನಂ ಅವರ ಮುಂದಿನ ಸಿನಿಮಾನಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸುಧಾ ಕೊಣಗರ ನಿರ್ದೇಶನದ ಸಿನಿಮಾನಲ್ಲಿಯೂ ಸಾಯಿ ಪಲ್ಲವಿ ನಟಿಸಲಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ