ಕ್ರಿಸ್ಮಸ್ ದಿನ ‘ಸಲಾರ್’ ಸಿನಿಮಾ ಅಬ್ಬರ; 500 ಕೋಟಿ ರೂಪಾಯಿ ದಾಟಲಿದೆ ಕಲೆಕ್ಷನ್?
Salaar Movie collection: ಈ ಸಿನಿಮಾ ಸೋಮವಾರ ಭಾರತದಲ್ಲಿ 41 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ ಆಗಿದೆ.

‘ಸಲಾರ್’ ಸಿನಿಮಾ (Salaar Movie) ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಭಾರತದಲ್ಲಿ 90 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿತ್ತು. ಈಗ ಈ ಚಿತ್ರದ ಗಳಿಕೆ 250 ಕೋಟಿ ರೂಪಾಯಿ ಮೇಲಾಗಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಚಿತ್ರದ ಕಲೆಕ್ಷನ್ 500 ಕೋಟಿ ರೂಪಾಯಿ ಸಮೀಪಿಸಿದೆ. ವಾರದ ದಿನಗಳಲ್ಲಿ ‘ಸಲಾರ್’ ಚಿತ್ರವನ್ನು ಎಷ್ಟು ಜನರು ವೀಕ್ಷಿಸುತ್ತಾರೆ ಎನ್ನುವ ಆಧಾರದ ಈ ಸಿನಿಮಾ 500 ಕೋಟಿ ರೂಪಾಯಿ ಕ್ಲಬ್ ಸೇರುತ್ತದೆಯೋ ಅಥವಾ ಇಲ್ಲವೋ ಅನ್ನೋದು ನಿರ್ಧಾರ ಆಗಲಿದೆ.
‘ಸಲಾರ್’ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ‘ಕೆಜಿಎಫ್ 2’ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಪ್ರಭಾಸ್, ಪ್ರಶಾಂತ್ ನೀಲ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಸೋಮವಾರ (ಡಿಸೆಂಬರ್ 25) ಭಾರತದಲ್ಲಿ 41 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ ಆಗಿದೆ.
ಹಿಂದಿ ಭಾಗದಲ್ಲಿ ‘ಸಲಾರ್’ ಸಿನಿಮಾ ಅಂದುಕೊಂಡಷ್ಟು ಗಳಿಕೆ ಮಾಡುತ್ತಿಲ್ಲ. ‘ಕೆಜಿಎಫ್ 2’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ 50+ ಕೋಟಿ ರೂಪಾಯಿ ಕಲೆ ಹಾಕಿತ್ತು. ಆದರೆ, ‘ಸಲಾರ್’ ಹಿಂದಿ ಬೆಲ್ಟ್ನಲ್ಲಿ ಮೊದಲ ದಿನ ಕಲೆ ಹಾಕಿದ್ದು ಕೇವಲ 15 ಕೋಟಿ ರೂಪಾಯಿ. ಎರಡನೇ ದಿನ ಈ ಗಳಿಕೆ 16 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಮೂರನೇ ದಿನ 21 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಗಳಿಕೆ ನಿಧಾನವಾಗಿ ಹೆಚ್ಚುತ್ತಿದೆಯಾದರೂ ‘ಕೆಜಿಎಫ್ 2’ ಚಿತ್ರದಷ್ಟು ಕಲೆಕ್ಷನ್ ಆಗುತ್ತಿಲ್ಲ. ಹಿಂದಿ ವಿಭಾಗದಲ್ಲಿ ಸರಿಯಾದ ಪ್ರಚಾರ ನೀಡದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಸಲಾರ್’ ಸಿನಿಮಾದಲ್ಲಿ ಹೈಲೈಟ್ ಆದ ಈ ಪಾತ್ರ ಮಾಡಿದವರು ಯಾರು?
‘ಸಲಾರ್’ ಸಿನಿಮಾ ‘ಉಗ್ರಂ’ ಸಿನಿಮಾದ ರಿಮೇಕ್ ಎಂದು ಕೆಲವರು ಟೀಕೆ ಮಾಡಿದರು. ‘ಕೆಜಿಎಫ್ 2’ ಮೇಕಿಂಗ್ಗೆ ಹೋಲಿಕೆ ಇದೆ ಎಂದು ಕೆಲವರು ಟೀಕಿಸಿದರು. ಈ ಟೀಕೆಗಳಿಗೆ ಚಿತ್ರತಂಡ ಕಿವಿಕೊಟ್ಟಿಲ್ಲ. ಈ ಚಿತ್ರದಿಂದ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ದೊಡ್ಡ ಗೆಲುವು ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 am, Tue, 26 December 23




