ಆಂಧ್ರ, ತೆಲಂಗಾಣದಲ್ಲಿ ವಿವಾದ ಎಬ್ಬಿಸಿದ ‘ಸಲಾರ್’ ಟಿಕೆಟ್ ದರ
Salaar: ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಟಿಕೆಟ್ ಬೆಲೆ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ವಿವಾದ ಎಬ್ಬಿಸಿದೆ.
ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇಂದಿನಿಂದ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಅಡ್ವಾನ್ಸ್ ಬುಕಿಂಗ್ ಪರಾರಂಭವಾಗಿದೆ. ಬೆಂಗಳೂರಿನಲ್ಲಿ ಟಿಕೆಟ್ ದರಗಳು ಭಾರಿ ಹೆಚ್ಚಿವೆ. ಇಲ್ಲಿ ಇದನ್ನಾರು ಕೇಳುವವರಿಲ್ಲ, ಆದರೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ‘ಸಲಾರ್’ ಸಿನಿಮಾದ ಟಿಕೆಟ್ ದರಗಳು ವಿವಾದವನ್ನೇ ಎಬ್ಬಿಸಿವೆ. ಕೆಲವು ಸಿನಿಮಾ ನಿರ್ಮಾಪಕರು, ರಾಜಕಾರಣಿಗಳು ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ತೆಲಂಗಾಣದಲ್ಲಿ ‘ಸಲಾರ್’ ಸಿನಿಮಾಕ್ಕೆ ಮಲ್ಟಿಪ್ಲೆಕ್ಸ್ನಲ್ಲಿ 450 ರೂಪಾಯಿ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ 250 ರೂಪಾಯಿ ಟಿಕೆಟ್ ನಿಗದಿಪಡಿಸಲಾಗಿದೆ. ಆದರೆ ಇತರೆ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ನಲ್ಲಿ 200 ಹಾಗೂ ಸಿಂಗಲ್ ಸ್ಕ್ರೀನ್ನಲ್ಲಿ 100 ರಿಂದ 130 ರೂಪಾಯಿ ಅಷ್ಟೆ ಇರುತ್ತದೆ. ಆದರೆ ಸರ್ಕಾರ 2021ರ ಡಿಸೆಂಬರ್ನಲ್ಲಿ ಹೊರಡಿಸಿದ್ದ ಆದೇಶದಂತೆ ದೊಡ್ಡ ಬಜೆಟ್ ಸಿನಿಮಾಗಳು ಟಿಕೆಟ್ ಬೆಲೆ ಹೆಚ್ಚಿಸಿಕೊಳ್ಳಬಹುದಾದ್ದರಿಂದ ‘ಸಲಾರ್’ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ:‘ಸಲಾರ್’ ಬುಕಿಂಗ್ಗೆ ಭರ್ಜರಿ ರೆಸ್ಪಾನ್ಸ್; ಮುಂಜಾನೆ 5 ಗಂಟೆ ಶೋಗಳು ಸೋಲ್ಡ್ಔಟ್
ಈ ನಿರ್ಧಾರವನ್ನು ಕೆಲವು ಸಣ್ಣ ಸಿನಿಮಾಗಳ ನಿರ್ಮಾಪಕರು ಖಂಡಿಸಿದ್ದಾರೆ. ಇದು ಅನ್ಯಾಯದ ನಿರ್ಧಾರ. ಮಲ್ಟಿಪ್ಲೆಕ್ಸ್ನಲ್ಲಿ 450 ರೂಪಾಯಿ ಟಿಕೆಟ್, ಪಾಪ್ಕಾರ್ನ್, ಪಾರ್ಕಿಂಗ್ ಇನ್ನಿತರೆಗಳೆಲ್ಲ ಸೇರಿದರೆ ಒಬ್ಬ ವ್ಯಕ್ತಿಗೆ 750 ರೂಪಾಯಿ ಆಗುತ್ತದೆ. ಈ ಮೊತ್ತದಲ್ಲಿ ಆತ ಮೂರು ಸಣ್ಣ ಸಿನಿಮಾಗಳನ್ನು ನೋಡಬಲ್ಲ. ಈಗ ‘ಸಲಾರ್’ ಸಿನಿಮಾಕ್ಕೆ ಇಷ್ಟು ಮೊತ್ತ ಖರ್ಚು ಮಾಡಿದ ಮೇಲೆ ಬೇರೆ ಸಿನಿಮಾಗಳಿಗೆ ಆತ ಹಣ ಖರ್ಚು ಮಾಡುವುದಿಲ್ಲ ಇದರಿಂದ ಇತರೆ ಸಿನಿಮಾಗಳಿಗೆ ಸಮಸ್ಯೆ ಆಗುತ್ತದೆ. ಕೂಡಲೇ ಸರ್ಕಾರಿ ಆದೇಶ ಸಂಖ್ಯೆ 120ನ್ನು ರದ್ದು ಮಾಡಬೇಕು ಎಂದು ನಿರ್ಮಾಪಕ ನೆಟ್ಟಿ ಕುಮಾರ್ ಒತ್ತಾಯಿಸಿದ್ದಾರೆ.
ಸರ್ಕಾರಿ ಆದೇಶ ಸಂಖ್ಯೆ 120 ಚಿತ್ರರಂಗದ ಐದಾರು ಮಂದಿಯ ಪರವಾಗಿ ಅಷ್ಟೆ ಇದೆ. ಆ ಆದೇಶದಲ್ಲಿ ಚಿತ್ರರಂಗದ ಕ್ಷೇಮಾಭಿವೃದ್ಧಿ ಆಲೋಚನೆ ಇಲ್ಲ, ಬದಲಿಗೆ ದೊಡ್ಡ ಸ್ಟಾರ್ಗಳು, ನಿರ್ಮಾಪಕರು ಉಳಿಯಲು ಬೆಳೆಯಲು ಬೇಖಾದ ಅಂಶಗಳಷ್ಟೆ ಇದೆ. ಆದೇಶ ಸಂಖ್ಯೆ 120ನ್ನು ರದ್ದು ಮಾಡಿ, ಮಲ್ಟಿಪ್ಲೆಕ್ಸ್ನಲ್ಲಿ ಕಡಿಮೆ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡುವಂತೆ ಮಾಡಬೇಕು, ಮಲ್ಟಿಪ್ಲೆಕ್ಸ್ನಲ್ಲಿ ಬಡವನೂ ಸಿನಿಮಾ ನೋಡುವ ರೀತಿಯಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಯಬೇಕು ಎಂದಿದ್ದಾರೆ. ಆಂಧ್ರ ಪ್ರದೇಶದಲ್ಲಿಯೂ ಸಹ ‘ಸಲಾರ್’ ಸಿನಿಮಾಕ್ಕೆ ಇದೇ ಮಾದರಿಯ ಸಮಸ್ಯೆ ಎದುರಾಗಿದೆ. ‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ