ಸಲ್ಮಾನ್ ಖಾನ್ ನಟನೆಯ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಸಿನಿಮಾ ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿತ್ತು. ಮೊದಲ ದಿನ ಸಿನಿಮಾ ನೋಡೋಕೆ ಸಿನಿಪ್ರಿಯರು ಮುಗಿಬಿದ್ದಿದ್ದರಿಂದ ಜೀ5 ಸರ್ವರ್ ಕ್ರ್ಯಾಶ್ ಆಗಿತ್ತು. ಆದರೆ, ಇದೆಲ್ಲವೂ ಕೇವಲ ಅಭಿಮಾನಿಗಳ ಬಲದಿಂದ ಆಗಿದ್ದು ಎಂಬುದು ಸ್ಪಷ್ಟವಾಗಿದೆ. ರಾಧೆ ಕೇವಲ ಸೋತಿದ್ದು ಮಾತ್ರವಲ್ಲ ಸಲ್ಮಾನ್ ಖಾನ್ ಕೆರಿಯರ್ನಲ್ಲೇ ಅತ್ಯಂತ ಕಳಪೆ ಸಿನಿಮಾ ಎನ್ನುವ ಹಣೆಪಟ್ಟಿ ಕೂಡ ಹೊತ್ತಿದೆ.
ಕೊರೊನಾ ವೈರಸ್ನಿಂದಾಗಿ ದೇಶದ ಸಾಕಷ್ಟು ರಾಜ್ಯಗಳಲ್ಲಿ ಲಾಕ್ಡೌನ್ ಹೇರಲಾಗಿದೆ. ಹೀಗಾಗಿ, ರಾಧೆ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡಲಿದೆ ಎನ್ನಲಾಗಿತ್ತು. ಆದರೆ, ರಾಧೆ ತಂಡ ಈದ್ ಹಬ್ಬದಂದೆ (ಮೇ 13) ಚಿತ್ರವನ್ನು ಥಿಯೇಟರ್ ಹಾಗೂ ಒಟಿಟಿಯಲ್ಲಿ ಒಟ್ಟಿಗೇ ರಿಲೀಸ್ ಮಾಡಿತ್ತು. ದೇಶದಲ್ಲಿ ಬಹುತೇಕ ಚಿತ್ರಮಂದಿರಗಳು ಕ್ಲೋಸ್ ಇರುವುದರಿಂದ ಸಿನಿಮಾ ಕಲೆಕ್ಷನ್ ಮಾಡಿಲ್ಲ. ಇನ್ನು, ಸಿನಿಮಾ ರಿಲೀಸ್ ಆದ ದಿನವೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿಲ್ಲ.
ಐಎಂಡಿಬಿ ರಾಧೆ ಚಿತ್ರಕ್ಕೆ 10 ಅಂಕಕ್ಕೆ ಕೇವಲ 2.4 ರೇಟಿಂಗ್ ನೀಡಿದೆ. ಇದರ ಜತೆಗೆ ಚಿತ್ರಮಂದಿರಗಳಿಂದ ಸಿನಿಮಾಗೆ ಕಲೆಕ್ಷನ್ ಕೂಡ ಇಲ್ಲ. ಇದರಿಂದ ಸಲ್ಮಾನ್ ವೃತ್ತಿ ಜೀವನದ ಅತ್ಯಂತ ಕೆಟ್ಟ ಸಿನಿಮಾಗಳ ಸಾಲಿನಲ್ಲಿ ರಾಧೆ ಕೂಡ ನಿಂತಿದೆ. ರೇಸ್ 3 ಚಿತ್ರಕ್ಕೆ ಐಎಂಡಿಬಿ 1.9 ರೇಟಿಂಗ್ ನೀಡಿತ್ತು. ಇದು ಸಲ್ಲು ವೃತ್ತಿ ಜೀವನದ ಅತ್ಯಂತ ಕಳಪೆ ಚಿತ್ರವಾಗಿತ್ತು. ಈಗ ಈ ಸಾಲಿಗೆ ರಾಧೆ ಕೂಡ ಸೇರ್ಪಡೆ ಆಗಿದೆ.
ಇನ್ನು, ಸಿನಿಮಾ ನೋಡಿದ ಅನೇಕ ಮಂದಿ ರಾಧೆ ಸಿನಿಮಾವನ್ನು ಟ್ರೋಲ್ ಮಾಡುತ್ತಿದ್ದಾರೆ. ಇದು ನಾನು ನೋಡಿದ ಅತ್ಯಂತ ಕೆಟ್ಟ ಸಿನಿಮಾಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. ಇದರಿಂದ ಸಲ್ಮಾನ್ ವೃತ್ತಿ ಜೀವನದಲ್ಲಿ ಮತ್ತೊಂದು ಚಿತ್ರ ನೆಲಕಚ್ಚಿದಂತಾಗಿದೆ.
2017ರಲ್ಲಿ ತೆರೆಕಂಡಿದ್ದ ‘ಟೈಗರ್ ಜಿಂದಾ ಹೇ’ ಚಿತ್ರವೇ ಕೊನೆ. ಅದಾದ ನಂತರದಲ್ಲಿ ಸಲ್ಲುಗೆ ಅಂಥ ಯಶಸ್ಸು ಸಿಕ್ಕಿಲ್ಲ. ‘ರೇಸ್-3’, ‘ಭಾರತ್’, ‘ದಬಾಂಗ್ 3’ ಚಿತ್ರಗಳು ಸೋಲು ಕಂಡಿದ್ದವು. ಈ ಸಾಲಿಗೆ ಈಗ ರಾಧೆ ಸಿನಿಮಾ ಕೂಡ ಸೇರಿಕೊಂಡಿದೆ.
ಇದನ್ನೂ ಓದಿ: Radhe Movie: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲೀಕ್ ಆಯ್ತು ರಾಧೆ ಸಿನಿಮಾ; ಸಲ್ಲು ಅಭಿಮಾನಿಗಳಿಗೆ ಬೇಸರ
Radhe Movie Review: ‘ರಾಧೆ’ ನೋಡಿ ಏನು ಹೇಳಿದ್ರು ಸಲ್ಮಾನ್ ಖಾನ್ ಫ್ಯಾನ್ಸ್? ಇಲ್ಲಿದೆ ಟ್ವಿಟರ್ ವಿಮರ್ಶೆ