ಸಲ್ಮಾನ್ ಖಾನ್ ರಾಧೆ ಚಿತ್ರ ಜೀ5ನಲ್ಲಿ ತೆರೆಕಂಡು ಹೊಸ ದಾಖಲೆ ಸೃಷ್ಟಿ ಮಾಡಿತ್ತು. ಒಂದೇ ದಿನ ಸಿನಿಮಾ 42 ಲಕ್ಷ ವೀಕ್ಷಣೆ ಕಂಡಿತ್ತು. ಈ ಮಧ್ಯೆ ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿತ್ತು. ರಿಲೀಸ್ ಆದ ಕೆಲವೇ ಹೊತ್ತಿಗೆ ಸಿನಿಮಾ ಪೈರಸಿ ಆಗಿತ್ತು. ಈ ಬಗ್ಗೆ ಸಲ್ಮಾನ್ ಖಾನ್ ಬೇಸರ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಪೈರಸಿ ಮಾಡಿದವರಿಗೆ ಎಚ್ಚರಿಕೆ ನೀಡಿದ್ದಾರೆ.
ತಮಿಳ್ ರಾಕರ್ಸ್ ಸೇರಿ ಸಾಕಷ್ಟು ವೆಬ್ಸೈಟ್ಗಳಲ್ಲಿ ರಾಧೆ ಸಿನಿಮಾ ಲೀಕ್ ಆಗಿತ್ತು. ಇದರ ಬಗ್ಗೆ ಸಲ್ಲು ಅಭಿಮಾನಿಗಳು ಕಿಡಿಕಾರಿದ್ದರು. ಸಿನಿಮಾ ಲೀಕ್ ಮಾಡಿದವರ ವಿರುದ್ಧ ಸೈಬರ್ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಈ ವಿಚಾರವನ್ನು ಸಲ್ಮಾನ್ ಖಾನ್ ಗಂಭೀರವಾಗಿ ಪರಿಗಣಿಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಸಲ್ಮಾನ್ ಖಾನ್, ‘ರಾಧೆ ಸಿನಿಮಾವನ್ನು ನಾವು ಕೇವಲ 249 ರೂಪಾಯಿಗೆ ನೋಡುವ ಅವಕಾಶವನ್ನು ನೀಡಿದ್ದೇವೆ. ಇದರ ಹೊರತಾಗಿಯೂ ಕೆಲವರು ರಾಧೆ ಸಿನಿಮಾವನ್ನು ಅಕ್ರಮವಾಗಿ ಸಿನಿಮಾ ಸ್ಟ್ರೀಮ್ ಮಾಡುತ್ತಿದ್ದಾರೆ. ಈ ರೀತಿಯ ಪೈರೇಟೆಡ್ ಸೈಟ್ಗಳ ವಿರುದ್ಧ ಸೈಬರ್ ಸೆಲ್ನವರು ಕ್ರಮ ಕೈಗೊಳ್ಳಬೇಕು. ದಯವಿಟ್ಟು ಇದರಲ್ಲಿ ಭಾಗಿಯಾಗಬೇಡ. ಏಕೆಂದರೆ, ನಿಮ್ಮ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತದೆ. ನೀವು ಭಾರೀ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
— Salman Khan (@BeingSalmanKhan) May 15, 2021
‘ರಾಧೆ’ ನೋಡೋಕೆ ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಜೀ5 ಸರ್ವರ್ ತಾಂತ್ರಿಕ ತೊಂದರೆ ಅನುಭವಿಸಿತ್ತು. ಜೀ5ನಲ್ಲಿ ಮೇ13ರ ಮಧ್ಯಾಹ್ನ 12 ಗಂಟೆಗೆ ಈ ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ಸುಮಾರು 12.5 ಲಕ್ಷ ಜನರು ಒಮ್ಮೆಲೇ ಲಾಗಿನ್ ಆಗಲು ಪ್ರಯತ್ನಿಸಿದ್ದರು. ಇದರ ಪರಿಣಾಮವಾಗಿ ಅನೇಕರಿಗೆ ಜೀ5 ವೆಬ್ಸೈಟ್ ಮತ್ತು ಆ್ಯಪ್ ಓಪನ್ ಆಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ.
ಇನ್ನು, ‘ರಾಧೆ’ ಚಿತ್ರ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿಲ್ಲ. ಐಎಂಡಿಬಿ ‘ರಾಧೆ’ ಚಿತ್ರಕ್ಕೆ 10 ಅಂಕಕ್ಕೆ ಕೇವಲ 2.4 ರೇಟಿಂಗ್ ನೀಡಿದೆ. ಇದರಿಂದ ಸಲ್ಮಾನ್ ವೃತ್ತಿ ಜೀವನದ ಎರಡನೇ ಅತ್ಯಂತ ಕೆಟ್ಟ ಸಿನಿಮಾ ಎಂಬ ಹಣೆಪಟ್ಟಿ ‘ರಾಧೆ’ಗೆ ಸಿಕ್ಕಿದೆ. ರೇಸ್ 3 ಚಿತ್ರಕ್ಕೆ ಐಎಂಡಿಬಿ 1.9 ರೇಟಿಂಗ್ ನೀಡಿತ್ತು. ಇದು ಸಲ್ಲು ವೃತ್ತಿ ಜೀವನದ ಅತ್ಯಂತ ಕಳಪೆ ಚಿತ್ರವಾಗಿತ್ತು. ಈಗ ಈ ಸಾಲಿಗೆ ‘ರಾಧೆ’ ಕೂಡ ಸೇರ್ಪಡೆ ಆಗಿದೆ.
ಇದನ್ನೂ ಓದಿ: Salman Khan: ಕಳಪೆ ವಿಮರ್ಶೆ ಸಿಕ್ಕರೂ ದಾಖಲೆ ಬರೆದ ‘ರಾಧೆ’; ಒಟಿಟಿಯಲ್ಲಿ ಸಲ್ಮಾನ್ ಖಾನ್ ಹೊಸ ರೆಕಾರ್ಡ್