Bigg Boss: ಇನ್ನೂ ನಡೆಯುತ್ತಿದೆ ಬಿಗ್ ಬಾಸ್ ಕಾರ್ಯಕ್ರಮ; ಮನೆಯೊಳಗೆ ಇದ್ದಾರೆ 9 ಸ್ಪರ್ಧಿಗಳು
Bigg Boss Finale: ಬೇರೆಲ್ಲ ರಿಯಾಲಿಟಿ ಶೋಗಳಿಗಿಂತ ಬಿಗ್ ಬಾಸ್ ಶೋ ನಡೆಸುವುದು ತುಂಬ ಕಷ್ಟ. ಅದರಲ್ಲೂ ಕೊರೊನಾ ವೈರಸ್ ದಾಳಿ ಇಟ್ಟ ನಂತರ ಈ ಕಾರ್ಯಕ್ರಮ ನಡೆಸಿಕೊಡುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕನ್ನಡದಲ್ಲಿ 7 ಸೀಸನ್ಗಳು ಯಶಸ್ವಿಯಾಗಿ ನಡೆದುಕೊಂಡು ಬಂದ ಬಿಗ್ ಬಾಸ್ ಕಾರ್ಯಕ್ರಮಕ್ಕೆ 8ನೇ ಸೀಸನ್ನಲ್ಲಿ ವಿಘ್ನ ಎದುರಾಯಿತು. ಕೊರೊನಾ ವೈರಸ್ ಕಾರಣದಿಂದ ಈ ಶೋ ನಿಲ್ಲಿಸಬೇಕಾಗಿರುವುದು ಅನಿವಾರ್ಯ ಆಯಿತು. ಹಾಗಾಗಿ ಕಿರುತೆರೆ ಪ್ರೇಕ್ಷಕರಿಗೆ ಬೇಸರ ಆಯಿತು. ಅಂತಿಮವಾಗಿ ಮನೆಯೊಳಗಿದ್ದ 11 ಮಂದಿ ಸ್ಪರ್ಧಿಗಳು ಹೊರಬರಬೇಕಾಯಿತು. ಆದರೆ ಮಲಯಾಳಂನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಇನ್ನೂ ನಡೆಯುತ್ತಿದೆ. ಕರ್ನಾಟಕಕ್ಕೆ ಹೋಲಿಸಿದರೆ ಕೇರಳದಲ್ಲಿ ಕೊವಿಡ್ ಭೀಕರತೆ ಕಡಿಮೆ ಇರುವುದರಿಂದ ಅಲ್ಲಿ ಬಿಗ್ ಬಾಸ್ ಸದ್ಯಕ್ಕೆ ಮುಂದುವರಿಯುತ್ತಿದೆ.
ಮಲಯಾಳಂ ಚಿತ್ರರಂಗದ ಲೆಜೆಂಡರಿ ನಟ ಮೋಹನ್ಲಾಲ್ ನಡೆಸಿಕೊಡುತ್ತಿರುವ ‘ಬಿಗ್ ಬಾಸ್ ಮಲಯಾಳಂ ಸೀಸನ್ 3’ ಕಾರ್ಯಕ್ರಮ ಏಷ್ಯಾನೆಟ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. 2021ರ ಫೆಬ್ರವರಿ 14ರಂದು ಮೂರನೇ ಸೀಸನ್ ಶುರುವಾಯಿತು. ಕೊರೊನಾ ವೈರಸ್ನಿಂದ ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಎಲ್ಲ ಸ್ಪರ್ಧಿಗಳನ್ನು ಎರಡು ವಾರಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು. ಆ ಬಳಿಕವೇ ಬಿಗ್ ಬಾಸ್ ಮನೆಗೆ ಬಿಟ್ಟುಕೊಳ್ಳಲಾಗಿತ್ತು.
ಈಗ ಮಲಯಾಳಂ ಬಿಗ್ ಬಾಸ್ನಲ್ಲಿ 90 ದಿನಗಳು ಕಳೆದಿವೆ. ಪ್ರಸ್ತುತ 9 ಸ್ಪರ್ಧಿಗಳು ಹಣಾಹಣಿ ಮುಂದುವರಿಸಿದ್ದಾರೆ. ಮೇ 15ರ ಎಪಿಸೋಡ್ನಲ್ಲಿ ನಟಿ ರಮ್ಯಾ ಪಣಿಕ್ಕರ್ ಎಲಿಮಿನೇಟ್ ಆಗಿದ್ದಾರೆ. ಅನೂಪ್, ಡಿಂಪಲ್, ಫಿರೋಜ್ ಎ., ಮಣಿಕುಟ್ಟನ್, ನೋಬಿ, ರಂಜಾನ್, ರಿತು, ಸಾಯಿ, ಸೂರ್ಯ ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇವರ ಪೈಕಿ ಯಾರು ಫೈನಲ್ವರೆಗೆ ತಲುಪುತ್ತಾರೆ? ಯಾರು ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂಬ ಕೌತುಕ ಪ್ರೇಕ್ಷಕರಲ್ಲಿ ಮನೆ ಮಾಡಿದೆ.
ಮೊದಲಿನ ಪ್ಲ್ಯಾನ್ ಪ್ರಕಾರ ನಡೆದಿದ್ದರೆ ಮುಂಬರುವ ವಾರದಲ್ಲೇ ಮಲಯಾಳಂ ಬಿಗ್ ಬಾಸ್ ಫಿನಾಲೆ ಆಗಬೇಕಿತ್ತು. ಆದರೆ ಕೊರೊನಾ ಹಾವಳಿ ಸದ್ಯಕ್ಕೆ ಹೆಚ್ಚಿರುವುದರಿಂದ ಈ ಸಂದರ್ಭದಲ್ಲಿ ಅದ್ದೂರಿಯಾಗಿ ಫಿನಾಲೆ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಇನ್ನೂ ಮೂರು ವಾರಗಳ ಕಾಲ ಬಿಗ್ ಬಾಸ್ ಶೋ ಮುಂದುವರಿಸಲು ಆಯೋಜಕರು ತೀರ್ಮಾನಿಸಿದ್ದಾರೆ. ಕಳೆದ ಸೀಸನ್ನಲ್ಲಿ ಕೊರೊನಾ ಕಾರಣದಿಂದ 75ನೇ ದಿನಕ್ಕೆ ಮಲಯಾಳಂ ಬಿಗ್ ಬಾಸ್ ಕೊನೆಯಾಗಿತ್ತು.
ಇದನ್ನೂ ಓದಿ:
ಬಿಗ್ ಬಾಸ್ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಈ ಮೂವರಿಗೆ ಪ್ರವೇಶವಿಲ್ಲ; ಶೋ ಮುಗಿದರೂ ಗುಂಪುಗಾರಿಕೆ ನಿಂತಿಲ್ಲ ಯಾಕೆ?
ಬಿಗ್ ಬಾಸ್ನಿಂದ ಹೊರಬಂದು ನುಡಿದಂತೆ ನಡೆದ ಶುಭಾ ಪೂಂಜಾ; ಬಡವರಿಗೆ ಫುಡ್ ಕಿಟ್ ನೀಡಿದ ನಟಿ