ವಿಶ್ವವಿಖ್ಯಾತ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (Bengaluru International Film Festival) ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. 14ನೇ ಬೆಂಗಳೂರು ಸಿನಿಮೋತ್ಸವದಲ್ಲಿ (Bengaluru Film Fest) ಕನ್ನಡ ಸೇರಿದಂತೆ ವಿಶ್ವದ ಹಲವು ಭಾಷೆಗಳ ಸಿನಿಮಾ ಪ್ರದರ್ಶನಗೊಳ್ಳಲಿವೆ. ಜೊತೆಗೆ ಚಿತ್ರೋತ್ಸವದಲ್ಲಿ ಸ್ಪರ್ಧಾ ವಿಭಾಗವೂ ಇದ್ದು, ಮೂರು ವಿವಿಧ ಸ್ಪರ್ಧಾ ವಿಭಾಗದಲ್ಲಿ ಹಲವು ಕನ್ನಡ ಸಿನಿಮಾಗಳು ಇತರೆ ಭಾಷೆಯ ಸಿನಿಮಾಗಳೊಟ್ಟಿಗೆ ಪ್ರಶಸ್ತಿಗಾಗಿ ಸೆಣೆಸಲಿವೆ.
ಕನ್ನಡ ಸ್ಪರ್ಧಾ ವಿಭಾಗ, ಭಾರತೀಯ ಸ್ಪರ್ಧಾ ವಿಭಾಗ ಹಾಗೂ ಏಷಿಯನ್ ಸ್ಪರ್ಧಾ ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕನ್ನಡ ವಿಭಾಗದಲ್ಲಿ ಮಂಸೋರೆ ನಿರ್ದೇಶನದ 19.20.21 ಚಿತ್ರ, ಪುನೀತ್ ರಾಜ್ಕುಮಾರ್ ಅವರ ಗಂಧದ ಗುಡಿ, ಶರಣ್ ನಟನೆಯ ಗುರು ಶಿಷ್ಯರು, ಪೃಥ್ವಿ ಕೋಣನೂರು ನಿರ್ದೇಶನದ ಹದಿನೇಳೆಂಟು, ಕನಕಮಾರ್ಗ, ಕೋರಮ್ಮ, ಕುಬುಸ, ಮೇಡ್ ಇನ್ ಬೆಂಗಳೂರು, ನಾಳ್ಕೆ, ನಾನು ಕುಸುಮ, ಆರ್ಕೆಸ್ಟ್ರಾ ಮೈಸೂರು, ಫೋಟೊ, ಮಠ, ವಿಜಯಾನಂದ ಸಿನಿಮಾಗಳು ಪ್ರಶಸ್ತಿಗಾಗಿ ಪರಸ್ಪರ ಸೆಣೆಸಲಿವೆ.
ಇನ್ನು ಭಾರತೀಯ ವಿಭಾಗದಲ್ಲಿ ಮುದುಗ ಭಾಷೆಯ ಆದಿವಾಸಿ, ಕನ್ನಡದ ಆರಾರಿರಾರೋ ಹಾಗೂ ಅನ್ನ, ಬೆಂಗಾಲಿಯ ಅಪಾರಿಜಿತೊ, ಮೂಕಿ ಸಿನಿಮಾ ದಿ ಗಾರ್ಡ್, ತಮಿಳಿನ ಗಾರ್ಗಿ, ಮಲಯಾಳಂನ ಜನ ಗಣ ಮನ, ಕನ್ನಡದ ಕೋಲಿ ಎಸ್ರು ಹಾಗೂ ಮಾವು ಬೇವು, ಕೊಡವ ಭಾಷೆಯ ಕುಡಿಕಾಲಿ, ಮಲಯಾಳಂನ ಪಲ್ಲೋಟಿ 90 ಕಿಡ್ಸ್, ಬೋಡೋ ಭಾಷೆಯ ಸಿಫುಂಗ್, ಮಲಯಾಳಂನ ಸೌದಿ ವೆಲ್ಲಕ್ಕ ಸಿಸಿನಂ 225/2009, ಕನ್ನಡದ ತನುಜಾ ಸಿನಿಮಾಗಳು ಸ್ಪರ್ಧೆಯಲ್ಲಿವೆ.
ಏಷಿಯನ್ ವಿಭಾಗದಲ್ಲಿ ಇರಾನಿನ ಬಿ-ಮದರ್, ಇಂಡೋನೇಷಿಯಾದ ಬಿಫೋರ್-ನೌ-ದೆನ್, ಇಸ್ರೇಲಿನ ಜಡಾಸ್, ಫಿಲಿಪೀನ್ಸ್ ನ ಲಿಯೋನರ್ ವಿಲ್ ನೆವರ್ ಡೈ, ಜಪಾನಿನ ಲವ್ ಲೈಫ್, ಶ್ರೀಲಂಕಾದ ಸ್ಯಾಂಡ್, ಬಾಂಗ್ಲಾದೇಶದ ಟು ಸಿಸ್ಟರ್ಸ್ ಹಾಗೂ ಎ ಹೌಸ್ ವಿತ್ ನೋ ನೇಮ್ಸ್, ಇರಾನಿನ ವರ್ಲ್ಡ್ ವಾರ್ 3, ತೆಲುಗಿನ ಸ್ಥಳಂ, ಮರಾಠಿಯ ವಾಲ್ವಿ, ಹಾಗೂ ಕನ್ನಡದ ಇನ್, ವಿರಾಟಪುರ ವಿರಾಗಿ, ಸಿಂಗಲ್ ಮ್ಯಾನ್ 1971 ಸಿನಿಮಾಗಳು ಏಷಿಯಾದ ಇತರೆ ಸಿನಿಮಾಗಳೊಟ್ಟಿಗೆ ಸ್ಪರ್ಧಿಸಲಿವೆ.
14ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವವು ಮಾರ್ಚ್ 23 ರಂದು ವಿಧಾನಸೌಧದ ಮುಂಭಾಗ ಉದ್ಘಾಟನೆಗೊಳ್ಳಲಿದೆ. ಮಾರ್ಚ್ 30ರ ವರೆಗೆ ಸಿನಿಮೋತ್ಸವ ನಡೆಯಲಿದ್ದು, ಬೆಂಗಳೂರಿನ ಒರಾಯಿನ್ ಮಾಲ್ನಲ್ಲಿ 11 ಸ್ಕ್ರೀನ್ಗಳಲ್ಲಿ ವಿಶ್ವದ ಹಲವು ಭಾಷೆಗಳ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಒರಾಯಿನ್ ಮಾಲ್ ಮಾತ್ರವೇ ಅಲ್ಲದೆ ಕನ್ನಡ ಕಲಾವಿದರ ಸಂಘ, ಸುಚಿತ್ರ ಫಿಲಂ ಸೊಸೈಟಿಯಲ್ಲಿಯೂ ಸಿನಿಮಾ ಪ್ರದರ್ಶನ ನಡೆಯಲಿದೆ.