ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘19.20.21’ (19.20.21 Kannada Movie) ಚಿತ್ರ ಕೂಡ ಪ್ರಮುಖವಾಗಿದೆ. ಶೀರ್ಷಿಕೆಯ ಕಾರಣದಿಂದಲೂ ಈ ಸಿನಿಮಾ ಕೌತುಕ ಮೂಡಿಸಿದೆ. ಈಗ ಈ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಪ್ರೇಕ್ಷಕರ ಮನದಲ್ಲಿ ನಿರೀಕ್ಷೆ ಹೆಚ್ಚುವಂತಾಗಿದೆ. ‘ಲಹರಿ ಮ್ಯೂಸಿಕ್’ ಮೂಲಕ ‘19.20.21’ ಚಿತ್ರದ ಟೀಸರ್ (19.20.21 Teaser) ಬಿಡುಗಡೆ ಆಗಿದೆ. ಟೀಸರ್ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರಕ್ಕೆ ನಿರ್ದೇಶಕ ಮಂಸೋರೆ (Mansore) ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಪ್ರತಿ ಸಿನಿಮಾದಲ್ಲೂ ಅವರು ಒಂದು ಗಂಭೀರವಾದ ವಿಚಾರವನ್ನು ಆಯ್ದುಕೊಳ್ಳುತ್ತಾರೆ. ‘19.20.21’ ಸಿನಿಮಾದಲ್ಲೂ ಅದು ಮುಂದುವರಿದಿದೆ ಎಂಬುದು ಟೀಸರ್ ಮೂಲಕ ಖಚಿತವಾಗಿದೆ.
‘19.20.21’ ಸಿನಿಮಾದ ಫಸ್ಟ್ ಪೋಸ್ಟರ್ ಬಿಡುಗಡೆ ಆದಾಗಲೇ ಸಿನಿಪ್ರಿಯರ ಮನದಲ್ಲಿ ನಿರೀಕ್ಷೆ ಸೃಷ್ಟಿ ಆಗಿತ್ತು. ಟೀಸರ್ನಿಂದಾಗಿ ಆ ನಿರೀಕ್ಷೆ ಡಬಲ್ ಆಗಿದೆ. ಕಾಡಿನ ಜನರ ಮೇಲೆ ನಡೆದ ದೌರ್ಜನ್ಯದ ಕಥೆ ಈ ಸಿನಿಮಾದಲ್ಲಿ ಇದೆ ಎಂಬುದಕ್ಕೆ ಟೀಸರ್ನಲ್ಲಿ ಸುಳಿವು ಸಿಕ್ಕಿದೆ. ಇದನ್ನು ನೋಡಿದ ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ‘ಈ ಚಿತ್ರಕ್ಕೆ ಖಂಡಿತ ರಾಷ್ಟ್ರ ಪ್ರಶಸ್ತಿ ಸಿಗಲಿದೆ. ಕನ್ನಡ ಚಿತ್ರರಂಗದಲ್ಲಿ ಇದು ಅತ್ಯುತ್ತಮ ಸಿನಿಮಾ ಆಗಲಿದೆ. ಟ್ರೇಲರ್ಗಾಗಿ ಕಾಯುತ್ತಿದ್ದೇವೆ’ ಎಂಬ ಕಮೆಂಟ್ಗಳು ಬಂದಿವೆ.
ಇದನ್ನೂ ಓದಿ: ಡಿಫರೆಂಟ್ ಪಾತ್ರದಲ್ಲಿ ಪುನೀತ್; ‘ಮಿಷನ್ ಕೊಲಂಬಸ್’ ಚಿತ್ರಕ್ಕಾಗಿ ಮಂಸೋರೆ ಕಂಡಿದ್ದ ಕನಸು ಭಗ್ನ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಅವರು ‘ಹರಿವು’, ‘ನಾತಿಚರಾಮಿ’, ‘ಆಕ್ಟ್ 1978’ ಸಿನಿಮಾಗಳ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಈ ಮೂರೂ ಸಿನಿಮಾಗಳು ವಿಶೇಷ ರೀತಿಯಲ್ಲಿ ಗುರುತಿಸಿಕೊಂಡಿವೆ. ಈಗ ಅವರ ನಾಲ್ಕನೇ ಚಿತ್ರವಾಗಿ ‘19.20.21’ ಸಿನಿಮಾ ಮೂಡಿಬಂದಿದೆ. ‘ಡಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ದೇವರಾಜ್ ಆರ್. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಒಂದು ವರ್ಷದ ಶ್ರಮದ ಒಂದು ಸಣ್ಣ ಮುನ್ನೋಟ ನಿಮ್ಮ ಮುಂದೆ. ಇದು ಬರೀ ಟೀಸರ್ ಮಾತ್ರ. ಟ್ರೈಲರ್ ಮುಂದಿನ ಶುಕ್ರವಾರ, ಅಂದರೆ 27-01-2023 ರಂದು ಬಿಡುಗಡೆಯಾಗಲಿದೆ. ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಮ್ಮ ತಂಡವನ್ನು ಬೆಂಬಲಿಸಿ.#Film19_20_21#Mansore #Film#Constitution#TeaserOutNowhttps://t.co/DDaTFF8ReV pic.twitter.com/pXU0mgdDSF
— ಮಂಸೋರೆ/ManSoRe (@mansore25) January 20, 2023
‘19.20.21’ ಚಿತ್ರದಲ್ಲಿ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಶೃಂಗ ಬಿವಿ, ಬಾಲಾಜಿ ಮನೋಹರ್, ಎಂ.ಡಿ. ಪಲ್ಲವಿ, ರಾಜೇಶ್ ನಟರಂಗ್, ಅವಿನಾಶ್, ಗಿರಿರಾಜ್, ಕೃಷ್ಣ ಹೆಬ್ಬಾಳೆ ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಜನವರಿ 27ರಂದು ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಹಾಡುಗಳಿಗೆ ಬಿಂದು ಮಾಲಿನಿ ಸಂಗೀತ ನೀಡಿದ್ದಾರೆ. ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದಾರೆ. ಶಿವ ಬಿ.ಕೆ. ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಸಂತೋಷ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.