ಬದುಕು ಬದಲಿಸಿದ ಹೆದ್ದಾರಿಯಿಂದಲೇ ಸಾವು; ಸಂಚಾರಿ ವಿಜಯ್ ನೆನೆದು ದುಃಖ ಹೊರಹಾಕಿದ ನಿರ್ದೇಶಕ ಮಂಸೋರೆ
ಸಂಚಾರಿ ವಿಜಯ್ ಮೊದಲ ಬಾರಿಗೆ ಖ್ಯಾತಿ ತಂದುಕೊಟ್ಟ ಸಿನಿಮಾ ‘ಹರಿವು’. ಆ ಚಿತ್ರಕ್ಕೆ ಮಂಸೋರೆ ನಿರ್ದೇಶನ ಮಾಡಿದ್ದರು. ಈ ಕಾರಣಕ್ಕೆ ಮಂಸೋರೆ ಹಾಗೂ ಸಂಚಾರಿ ವಿಜಯ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅವರ ಪುಣ್ಯತಿಥಿಯಂದು ಮಂಸೋರೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಸಂಚಾರಿ ವಿಜಯ್ ಅವರು (Sanchari Vijay) ನಿಧನ ಹೊಂದಿ ಇಂದಿಗೆ (ಜೂನ್ 15) ಒಂದು ವರ್ಷ ಕಳೆದಿದೆ. ಬಾಳಿ ಬದುಕಬೇಕಿದ್ದ ಅವರು ನಮ್ಮನ್ನು ಅಗಲಿ ಹೋಗಿದ್ದು ನಿಜಕ್ಕೂ ಬೇಸರದ ಸಂಗತಿ. 2011ರಲ್ಲಿ ಸಂಚಾರಿ ವಿಜಯ್ ಅವರು ಸಿನಿಮಾರಂಗಕ್ಕೆ ಎಂಟ್ರಿ ನೀಡಿದರು. ಅವರು ನಟಿಸಿದ ಮೊದಲ ಸಿನಿಮಾ ‘ರಂಗಪ್ಪ ಹೋಗ್ಬಿಟ್ನಾ’. ಅವರಿಗೆ ಮೊದಲ ಬಾರಿಗೆ ಖ್ಯಾತಿ ತಂದುಕೊಟ್ಟ ಸಿನಿಮಾ ‘ಹರಿವು’. ಆ ಚಿತ್ರಕ್ಕೆ ಮಂಸೋರೆ (Mansore) ನಿರ್ದೇಶನ ಮಾಡಿದ್ದರು. ಈ ಕಾರಣಕ್ಕೆ ಮಂಸೋರೆ ಹಾಗೂ ಸಂಚಾರಿ ವಿಜಯ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅವರ ಪುಣ್ಯತಿಥಿಯಂದು ಮಂಸೋರೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಅವರು ಬರೆದ ಪತ್ರ ಇಲ್ಲಿದೆ.
‘ರಾಷ್ಟ್ರೀಯ ಹೆದ್ದಾರಿ 4. ನನ್ನ ಜೀವನದಲ್ಲಿ ಬಹು ಮುಖ್ಯವಾದ ಅಧ್ಯಾಯ. ಬೆಂಗಳೂರು ಚೆನ್ನೈ ನಗರವನ್ನು ಸಂಪರ್ಕಿಸುವ ಇಂದಿನ ರಾಷ್ಟ್ರೀಯ ಹೆದ್ದಾರಿ 75, ಚತುಷ್ಪಥ ರಸ್ತೆ ಆಗುವ ಮೊದಲು ರಾಷ್ಟ್ರೀಯ ಹೆದ್ದಾರಿ 4 ಎಂದಿತ್ತು. ಅದು ನಮ್ಮೂರನ್ನು ಹಾದು ಹೋಗುವ ಹೆದ್ದಾರಿ ಆದ್ದರಿಂದ ಸಹಜವಾಗಿಯೇ ಅದರೊಂದಿಗೆ ಒಂದು ನಾಸ್ಟಾಲಜಿ ಬೆಸೆದುಕೊಂಡಿರುತ್ತದೆ. ಆದರೆ ನನಗೆ ರಾಷ್ಟ್ರೀಯ ಹೆದ್ದಾರಿ 4 ಹೆಚ್ಚು ಮುಖ್ಯವಾದದ್ದು. ಅದು, ಹರಿವು ಸಿನೆಮಾದ ಕಾರಣಕ್ಕೆ’ ಎಂದು ಪತ್ರ ಆರಂಭಿಸಿದ್ದಾರೆ ಮಂಸೋರೆ.
‘ಹರಿವು ನನ್ನ ಮೊದಲ ನಿರ್ದೇಶನದ ಸಿನಿಮಾ. ಮೊದಲ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನಿಮಾ. ನಾನಾ ಕೆಲಸಗಳನ್ನು ಮಾಡಿಕೊಂಡಿದ್ದ ನನಗೆ, ನಿರ್ದೇಶಕನಾಗಿ ಒಂದು ಗಟ್ಟಿಯಾದ ನೆಲೆ ಕೊಟ್ಟ ಸಿನಿಮಾ. ಅದೆಲ್ಲದಕ್ಕಿಂತ ಹೆಚ್ಚಾಗಿ ಸಂಚಾರಿ ವಿಜಯ್ ಎಂಬ ಆಪ್ತ ಗೆಳೆಯನನ್ನು ಕೊಟ್ಟ ಸಿನಿಮಾ. ನಾಯಕನಾಗಿ ವಿಜಯ್ ಸರ್ ಮೊದಲ ಸಿನಿಮಾ ಹರಿವು. ಅದರ ಮೊದಲ ಶಾಟ್ 2012ರಲ್ಲಿ ಚಿತ್ರೀಕರಣವಾದದ್ದು ಇದೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ. ನಾನು ನಿರ್ದೇಶಕನಾಗಿ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದು ಇದೇ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ. ಆ ಸಿನೆಮಾ ಚಿತ್ರೀಕರಣವಾದದ್ದು ಇದೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ’ ಎಂದಿದ್ದಾರೆ ಮಂಸೋರೆ.
‘ಹರಿವು ಸಿನಿಮಾದ ಮುಖ್ಯಕತೆ ಅನಾವರಣಗೊಳ್ಳುವುದು ಇದೇ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ. 2012ರಲ್ಲಿ ಮೊದಲ ಬಾರಿಗೆ ಚಿತ್ರೀಕರಣ ಆರಂಭಿಸಿದಾಗ ಮಾಡಿಕೊಂಡ ಅವಾಂತರಗಳು, ಕಲಿಸಿದ ಪಾಠಗಳು, ನಿರ್ದೇಶನದ ಕಡೆಗೆ ಇರಬೇಕಾದ ಬದ್ಧತೆಗಳನ್ನು ಕಲಿಸಿಕೊಟ್ಟದ್ದು ಇದೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ’ ಎಂದು ಅವರು ಹಳೆಯ ಘಟನೆ ನೆನೆದಿದ್ದಾರೆ.
‘ಈ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ನಾನು ಸಂಚಾರಿ ವಿಜಯ್ ಸರ್ ಸಾಕಷ್ಟು ಬಾರಿ ಜೊತೆಯಾಗಿ ಪ್ರಯಾಣ ಮಾಡಿದ್ದೇವೆ. ಆದರೆ ಈ ರಾಷ್ಟ್ರೀಯ ಹೆದ್ದಾರಿ 4 ನನ್ನ ಪಾಲಿಗೆ ಶಾಶ್ವತವಾದ ದುಃಖದ ನೆನಪೊಂದನ್ನು ಉಳಿಸಿ ಬಿಡುತ್ತದೆ ಎಂದು ಯಾವತ್ತೂ ಯೋಚಿಸಿರಲಿಲ್ಲ’ ಎಂದಿದ್ದಾರೆ ಮಂಸೋರೆ.
‘ಎಷ್ಟೋ ಕನಸುಗಳು, ನಗು, ಜಗಳ, ನೆನಪುಗಳ ಮೂಲಕ ಸಂಚರಿಸಿದ್ದ ಈ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ನನ್ನ ಗೆಳೆಯನ ಜೊತೆ ಅಂತಿಮ ಪ್ರಯಾಣ ಮಾಡುವ ದಿನ ಬಂದಿದ್ದು ನನ್ನ ಪಾಲಿನ ಬಹು ದೊಡ್ಡ ದುರಂತ. ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ, ಈ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಆಪ್ತ ಗೆಳೆಯನನ್ನು ಆ್ಯಂಬುಲೆನ್ಸ್ನಲ್ಲಿ ಮಲಗಿಸಿಕೊಂಡು, ಅವರ ಆಪ್ತವಾದ ಸಾಕಷ್ಟು ಕನಸುಗಳನ್ನು ಕಂಡಿದ್ದ ಅವರ ದುಡಿಮೆಯ ಗಳಿಕೆಯಿಂದ ಕೊಂಡುಕೊಂಡಿದ್ದ ಅವರ ತೋಟಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುವಂತ ದಿನ ಬರುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲ. ಅಂತಹ ದುರಂತದ ದಿನಕ್ಕೆ ಇಂದಿಗೆ ಒಂದು ವರ್ಷ. ವಿಜಯ್ ಸರ್ ನನಗೆ ಪರಿಚಯ ಆಗಿದ್ದು, ಮೊದಲ ಬಾರಿ ಮಾತನಾಡಿದ್ದು 13-06-2012. ಅವರು ನನ್ನೊಂದಿಗೆ ಮಾತು ನಿಲ್ಲಿಸಿ ಮೌನವಾಗಿದ್ದು 13-06-2021’ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ಇಲ್ಲದೇ ಕಳೆಯಿತು ಒಂದು ವರ್ಷ; ಕನ್ನಡದ ಹೆಮ್ಮೆಯ ನಟನ ನೆನಪು ಅಮರ
‘ಅಪ್ಪನ ಜೊತೆಯ ನೆನಪಿನ ಕೊನೆಯ ಪಯಣವೂ ಇದೇ ರೀತಿ ಆಂಬ್ಯುಲೆನ್ಸ್ನಲ್ಲೇ ಸಾಗಿತ್ತು. ಅಷ್ಟೇ ಆಪ್ತನಾದ ಗೆಳೆಯನ ಜೊತೆಯ ಕೊನೆಯ ಪಯಣವೂ ಆಂಬ್ಯುಲೆನ್ಸಲ್ಲೇ ಸಾಗುವಂತಾಯಿತು. ಅದು ನಮ್ಮಿಬ್ಬರ ಪಾಲಿನ, ಜೀವನದ ಮುಖ್ಯವಾದ ಹೆದ್ದಾರಿಯಲ್ಲಿ. ಆ ಹೆದ್ದಾರಿಯಲ್ಲಿ ಒಂದೊಂದು ಹಂತದಲ್ಲೂ ಒಂದೊಂದು ನೆನಪುಗಳಿವೆ. ಪ್ರತೀ ಬಾರಿ ಹೋದಾಗಲೂ ಆ ನೆನಪುಗಳು ಕಾಡುತ್ತಲೇ ಇರುತ್ತವೆ. ಮಿಸ್ ಯೂ ಸಂಚಾರಿ ವಿಜಯ್ ಸರ್’ ಎಂದಿದ್ದಾರೆ ಅವರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.