ಮಂಸೋರೆ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರಾ ಸಾಯಿ ಪಲ್ಲವಿ? ಇಲ್ಲಿದೆ ಅಸಲಿಯತ್ತು

Sai Pallavi: ಚಂದನವನದ ಭರವಸೆಯ ನಿರ್ದೇಶಕ ಮಂಸೋರೆ ತಮ್ಮ ಮುಂದಿನ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಮಂಸೋರೆ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರಾ ಸಾಯಿ ಪಲ್ಲವಿ? ಇಲ್ಲಿದೆ ಅಸಲಿಯತ್ತು
ಮಂಸೋರೆ, ಸಾಯಿ ಪಲ್ಲವಿ (ಸಾಂದರ್ಭಿಕ ಚಿತ್ರ)
Follow us
| Updated By: ರಾಜೇಶ್ ದುಗ್ಗುಮನೆ

Updated on:Aug 18, 2021 | 10:18 PM

ಆಕ್ಟ್ 1978 ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಮಂಸೋರೆ ತಮ್ಮ ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ. ಆಕ್ಟ್ 1978 ಚಿತ್ರವು ಮೊದಲ ಲಾಕ್​ಡೌನ್ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಚಿತ್ರವಾಗಿತ್ತು. ಈ ಚಿತ್ರಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಮೆಜಾನ್ ಪ್ರೈಮ್​ ಮೂಲಕ ಇದು ಒಟಿಟಿಯಲ್ಲಿ ತೆರೆ ಕಂಡ ನಂತರ, ಈ ಚಿತ್ರಕ್ಕೆ ವಿವಿಧ ಭಾಷೆಗಳಿಂದಲೂ ಮೆಚ್ಚುಗೆ ಹರಿದು ಬಂದಿತು. ಆ ಪೈಕಿ ತೆಲುಗಿನ ಹಲವು ನಿರ್ಮಾಪಕರು ಮಂಸೋರೆಯವರೊಂದಿಗೆ ಮುಂದಿನ ಚಿತ್ರ ಮಾಡಲು ಮುಂದೆ ಬಂದಿದ್ದಾರೆ. ಅದರ ಭಾಗವಾಗಿ ಒಂದು ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಯವರನ್ನು ಮಂಸೋರೆ ಸಂಪರ್ಕಿಸಿದ್ದು, ಕತೆಯ ಒನ್ ಲೈನ್ ಸಾಯಿ ಪಲ್ಲವಿ ಇಷ್ಟಪಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಪೊಲಿಟಿಕಲ್ ಥ್ರಿಲ್ಲರ್ ಮಾದರಿಯ ಕತೆ ಇದಾಗಿರಲಿದ್ದು, ಒಂದು ಸುತ್ತಿನ ಮಾತುಕತೆಯಷ್ಟೇ ನಡೆದಿದೆ ಎಂದು ಮಂಸೋರೆ ಹೇಳಿದ್ದಾರೆ. ಫೋನ್ ಮುಖಾಂತರ ಸಾಯಿ ಪಲ್ಲವಿಯವರೊಂದಿಗೆ ಮಂಸೋರೆ ಮಾತನಾಡಿದ್ದು, ಕತೆ ಇಷ್ಟಪಟ್ಟ ಅವರು ಸಂಪೂರ್ಣ ಸ್ಕ್ರಿಪ್ಟ್ ಕಳಿಸಿಕೊಡಲು ಕೇಳಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಇದು ನಿಜವೇ ಎಂದು ಮಂಸೋರೆ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಈ ಸುದ್ದಿ ಸುಳ್ಳು ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 15ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಮಂಸೋರೆ ಸಿನಿಮಾ ಕೆಲಸಗಳಿಂದ ತುಸು ಬ್ರೇಕ್ ತೆಗೆದುಕೊಂಡಿದ್ದಾರಂತೆ. ಕೆಲವೇ ದಿನಗಳಲ್ಲಿ ಮರಳಿ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ಹಿಂದಿ ಮತ್ತು ತೆಲುಗಿಗೆ ಆಕ್ಟ್ 1978 ಚಿತ್ರದ ರಿಮೇಕ್ ಹಕ್ಕುಗಳು ಮಾರಾಟವಾಗಿದ್ದು, ಆ ಚಿತ್ರದ ಕೆಲಸಗಳು ನಡೆಯುತ್ತಿವೆ. ಮಂಸೋರೆ ಈವರೆಗೂ ಮಾಡಿರುವ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೆ ವಸ್ತುವಿಷಯದ ಆಯ್ಕೆ ಕಾರಣದಿಂದ ಆ ಚಿತ್ರಗಳು ಗಮನ ಸೆಳೆದಿವೆ. ಮಂಸೋರೆ ನಿರ್ದೇಶಿಸಿದ ಮೊದಲ ಸಿನಿಮಾ ‘ಹರಿವು’ಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

ಎರಡನೇ ಚಿತ್ರವಾದ ‘ನಾತಿಚರಾಮಿ’ಯಲ್ಲಿ ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್​ ಮುಖ್ಯಭೂಮಿಕೆ ನಿಭಾಯಿಸಿದ್ದರು. ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಳ್ಳುವಲ್ಲಿ ಆ ಸಿನಿಮಾ ಯಶಸ್ವಿ ಆಯಿತು. ಬಳಿಕ ಮಂಸೋರೆ ಆ್ಯಕ್ಷನ್​-ಕಟ್​ ಹೇಳಿದ್ದು ‘ಆ್ಯಕ್ಟ್​ 1978’ ಚಿತ್ರಕ್ಕೆ. ರಾಣಿ ಅಬ್ಬಕ್ಕನ ಕುರಿತ ಸಿನಿಮಾವನ್ನೂ ಕೂಡಾ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದ ಮಂಸೋರೆ ಅದರ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

ಅಖಿಲಾ ಜೊತೆ ಹಸೆಮಣೆ ಏರಿದ ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ನಿರ್ದೇಶಕ ಮಂಸೋರೆ

 ಕರೀನಾ ಕಪೂರ್​​​ಗೆ ಬಾಡಿಗೆ ತಾಯ್ತನದ ಆಲೋಚನೆ; ಅಚ್ಚರಿಯ ವಿಚಾರ ಬಿಚ್ಚಿಟ್ಟ ನಟಿ

(Sandalwood wellknown director Mansore talks with Sai Pallavi for his next political thriller feature)

Published On - 8:36 pm, Wed, 18 August 21