2025ರ ಮೊದಲ ಕನ್ನಡ ಚಿತ್ರವಾಗಿ ತೆರೆಕಾಣಲಿದೆ ‘ಗನ್ಸ್ ಆ್ಯಂಡ್ ರೋಸಸ್’
‘ನಂದ ಲವ್ಸ್ ನಂದಿತಾ’ ಸಿನಿಮಾದಲ್ಲಿ ಅರ್ಜುನ್ ಅವರು ಬಾಲನಟನಾಗಿ ಅಭಿನಯಿಸಿದ್ದರು. ಈಗ ಅವರು ಹೀರೋ ಆಗಿದ್ದಾರೆ. ಮೊದಲ ಬಾರಿಗೆ ಹೀರೋ ಆಗಿ ಅಭಿನಯಿಸಿರುವ ‘ಗನ್ಸ್ ಆ್ಯಂಡ್ ರೋಸಸ್’ ಸಿನಿಮಾ ಜ.3ರಂದು ರಿಲೀಸ್ ಆಗಲಿದೆ. ಹೆಚ್.ಆರ್. ನಟರಾಜ್ ನಿರ್ಮಿಸಿದ ಈ ಚಿತ್ರಕ್ಕೆ ಶ್ರೀನಿವಾಸ್ ಕುಮಾರ್ ಅವರ ನಿರ್ದೇಶನವಿದೆ.
ಕನ್ನಡದ ಹಲವು ಸಿನಿಮಾಗೆ ಕಥೆ ಬರೆದ ಅಜಯ್ ಕುಮಾರ್ ಅವರ ಮಗ ಅರ್ಜುನ್ ಅವರು ಈಗ ಹೀರೋ ಆಗಿ ಸಿನಿಮಾರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರು ಹೀರೋ ಆಗಿ ಅಭಿನಯಿಸಿದ ಮೊದಲ ಸಿನಿಮಾ ‘ಗನ್ಸ್ ಆ್ಯಂಡ್ ರೋಸಸ್’ ಬಿಡುಗಡೆಗೆ ಸಜ್ಜಾಗಿದೆ. 2025ರ ಮೊದಲ ಶುಕ್ರವಾರ, ಅಂದರೆ ಜನವರಿ 3ರಂದು ಈ ಸಿನಿಮಾ ತೆರೆ ಕಾಣಲಿದೆ. ಆ ಮೂಲಕ ಹೊಸ ವರ್ಷದಲ್ಲಿ ಬಿಡುಗಡೆ ಆಗಲಿರುವ ಕನ್ನಡದ ಮೊದಲ ಸಿನಿಮಾವಾಗಿ ‘ಗನ್ಸ್ ಆ್ಯಂಡ್ ರೋಸಸ್’ ಬರಲಿದೆ.‘ದ್ರೋಣ ಕ್ರಿಯೇಷನ್ಸ್’ ಮೂಲಕ ಹೆಚ್.ಆರ್. ನಟರಾಜ್ ಅವರು ‘ಗನ್ಸ್ ಆ್ಯಂಡ್ ರೋಸಸ್’ ಸಿನಿಮಾವನ್ನು ನಿರ್ಮಿಸಿದ್ದಾರೆ. ಶ್ರೀನಿವಾಸ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರತಂಡದಿಂದ ಸುದ್ದಿಗೋಷ್ಠಿ ನಡೆಯಿತು.
ನಿರ್ಮಾಪಕ ಹೆಚ್.ಆರ್. ನಟರಾಜ್ ಅವರು ಮಾತನಾಡಿ, ‘ನಾನು ಮೂಲತಃ ಚಿತ್ರರಂಗದವನಲ್ಲ. ರಾಜಕೀಯದಲ್ಲಿ ಸಕ್ರಿಯ ಆಗಿದ್ದೇನೆ. ಬಿಲ್ಡರ್ ಕೂಡ ಹೌದು. ನಾವು ನಂಬಿದ ಶ್ಯಾಮ್ ಶಂಕರ್ ಭಟ್ ಗುರುಗಳು ಈ ಸಿನಿಮಾ ಮಾಡಲು ನನಗೆ ಆದೇಶಿಸಿದರು. ಅವರ ಮಾತಿನಂತೆ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೇನೆ’ ಎಂದರು. ‘ಗೋಕುಲ್ ಫಿಲಂಸ್’ ಮೂಲಕ ಈ ಸಿನಿಮಾ ಬಿಡುಗಡೆ ಆಗಲಿದೆ.
ಕಳೆದ 25 ವರ್ಷಗಳಿಂದ ಅನೇಕ ಚಿತ್ರಗಳಿಗೆ ಸಹ-ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಶ್ರೀನಿವಾಸ್ ಕುಮಾರ್ ಅವರಿಗೆ ಇದೆ. ಈಗ ಅವರು ‘ಗನ್ಸ್ ಆ್ಯಂಡ್ ರೋಸಸ್’ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಯಶ್ವಿಕಾ ನಿಷ್ಕಲಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಅವಿನಾಶ್, ಕಿಶೋರ್, ಶೋಭರಾಜ್, ನೀನಾಸಂ ಅಶ್ವಥ್, ಜೀವನ್ ರಿಚಿ ಸೇರಿದಂತೆ ಹಲವು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: Year Ender 2024: ಈ ವರ್ಷ ಹಿಟ್ ಆದ ಕನ್ನಡ ಸಿನಿಮಾಗಳಿವು
‘ಗನ್ಸ್ ಆ್ಯಂಡ್ ರೋಸಸ್’ ಚಿತ್ರಕ್ಕೆ ಶಶಿಕುಮಾರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಜನಾರ್ದನ್ ಬಾಬು ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಸಂಜೀವ್ ರೆಡ್ಡಿ ಅವರು ಸಂಕಲನ ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಶರತ್ ಅವರು ಬರೆದಿದ್ದಾರೆ. ತಾಂತ್ರಿಕ ಬಳಗದವರು, ಕಲಾವಿದರು ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.