
ಹೈದರಾಬಾದ್ನಲ್ಲಿ ನಡೆದ ಅದ್ದೂರಿ ಸೈಮಾ ಸಮಾರಂಭದಲ್ಲಿ ‘ಅತ್ಯುತ್ತಮ ಹೊಸ ನಟ’ ಪ್ರಶಸ್ತಿ ಪಡೆದ ಅಭಿಷೇಕ್ ಅಂಬರೀಷ್ ಅವರು ಈ ಪ್ರಶಸ್ತಿಯನ್ನು ಅಪ್ಪನ ಫೋಟೋದ ಮುಂದಿರಿಸಿ ಖುಷಿಪಟ್ಟಿದ್ದಾರೆ. ಎಲ್ಲರಿಂದ ಅವರಿಗೆ ಅಭಿನಂದನೆ ಸಲ್ಲಿಕೆ ಆಗುತ್ತಿದೆ.

ಮಗನಿಗೆ ಸಿಕ್ಕ ಮೊದಲ ಅವಾರ್ಡ್ ಬಗ್ಗೆ ಸುಮಲತಾ ಅಂಬರೀಷ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿಷೇಕ್ ಜೊತೆ ಸುಮಲತಾ ಕೂಡ ಭಾಗವಹಿಸಿದ್ದರು. ಸಂಭ್ರಮದ ಕ್ಷಣಕ್ಕೆ ಅವರೂ ಸಾಕ್ಷಿಯಾದರು.

‘ಮಗನಿಗೆ ಮೊದಲ ಅವಾರ್ಡ್ ಸಿಕ್ಕಿದ್ದಕ್ಕೆ ಹೆಮ್ಮೆ ಮತ್ತು ಸಂತಸ ಆಗುತ್ತಿದೆ. ಅಂಬರೀಷ್ ಇನ್ನೂ ಹೆಚ್ಚು ಹೆಮ್ಮೆ ಪಡುತ್ತಿದ್ದರು’ ಎಂದು ಸುಮಲತಾ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಅಭಿಷೇಕ್ ಅವರು ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಾಗಶೇಖರ್ ನಿರ್ದೇಶನದ ‘ಅಮರ್’ ಸಿನಿಮಾ ಮೂಲಕ ಅಭಿಷೇಕ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನವೇ ಅಂಬರೀಷ್ ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ.

ಸೈಮಾ ಸಮಾರಂಭದಲ್ಲಿ ಸುಮಲತಾ ಅಂಬರೀಷ್ ಜೊತೆಗೆ ಅವರ ಸ್ನೇಹಿತೆಯರು ಸಾಥ್ ನೀಡಿದರು. ಎಲ್ಲರ ಜೊತೆ ಸುಮಲತಾ ಸೆಲ್ಫೀ ಕ್ಲಿಕ್ಕಿಸಿಕೊಂಡರು. ತಮ್ಮ ಮಗನ ಬಗ್ಗೆ ಸ್ನೇಹಿತೆಯರಿಂದ ಮೆಚ್ಚುಗೆ ಕೇಳಿಬಂದಿರುವುದಕ್ಕೆ ಅವರು ಖುಷಿ ಆಗಿದ್ದಾರೆ.