ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ ಬಿದಪ್ಪ (Aviva Bidappa) ಮದುವೆ ಸಮಾರಂಭ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು ಇಂದು (ಜೂನ್ 16) ಮಂಡ್ಯದ ಮದ್ದೂರಿನ ಗೆಜ್ಜಲಗೆರೆಯಲ್ಲಿ ಅದ್ಧೂರಿಯಾಗಿ ಬೀಗರ ಔತಣಕೂಟವನ್ನು ಮಂಡ್ಯದ ಜನತೆಗಾಗಿ ವಿಶೇಷವಾಗಿ ಆಯೋಜಿಸಲಾಗಿತ್ತು. ಕೆಲವು ಸಣ್ಣ-ಪುಟ್ಟ ಅವ್ಯವಸ್ಥೆಗಳ ನಡುವೆಯೂ ಸಾವಿರಾರು ಮಂದಿ ಬಾಡೂಟವನ್ನು ಸವಿದು ಅಭಿ-ಅವಿವಾಗೆ ಶುಭ ಹಾರೈಸಿದ್ದಾರೆ. ಆದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ರಾಜಕೀಯ ಉದ್ದೇಶದಿಂದ ಈ ಔತಣ ಕೂಟ ಆಯೋಜಿಸಿದ್ದಾರೆ ಎಂಬ ಟೀಕೆ ಅಲ್ಲಲ್ಲಿ ಕೇಳಿ ಬರುತ್ತಿವೆ. ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿದ ಅಭಿಷೇಕ್ ಅಂಬರೀಶ್ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
ಬೀಗರೂಟ ನಡೆಯುವ ಸಂದರ್ಭದಲ್ಲಿ ಕೆಲ ಜನರು ಅಡುಗೆ ಕೋಣೆಗೆ ನುಗ್ಗಿ ದಾಂಧಲೆ ನಡೆಸಿ ಆಹಾರವನ್ನು ಚೆಲ್ಲಿದ ಬಗ್ಗೆ ಮಾತನಾಡಿದ ಅಭಿಷೇಕ್, ಕೆಲವರ ಪ್ರಚೋದನೆಯಿಂದ ಹೀಗಾಗಿದೆ ಎಂದು ಅನ್ನಿಸುತ್ತಿದೆ. ಈ ಕಾರ್ಯಕ್ರಮದಿಂದ ನಾವು ರಾಜಕೀಯ ಲಾಭ ಪಡೆಯುತ್ತೇವೆ ಎಂಬ ದುರಾಲೋಚನೆಯಿಂದ ಕೆಲವರು ಹೀಗೆ ಮಾಡಿರುವ ಸಾಧ್ಯತೆ ಇದೆ. ಆದರೆ ಈ ಕಾರ್ಯಕ್ರಮದ ಹಿಂದೆ ಯಾವುದೇ ರಾಜಕೀಯ ಯೋಚನೆಗಳು ಇಲ್ಲ ಎಂದು ಸ್ಪಷ್ಟ ಪಡಿಸಲು ಇಚ್ಛಿಸುತ್ತೇನೆ ಎಂದರು.
ಮುಂದುವರೆದು, ”ನಾವು ರಾಜಕೀಯ ಉದ್ದೇಶದಿಂದ ಈ ಕಾರ್ಯಕ್ರಮ ಮಾಡುವುಗಿದ್ದರೆ ವಿಧಾನಸಭೆ ಚುನಾವಣೆಗೆ ಮುಂಚೆ ಮಾಡಬೇಕಿತ್ತು ಅಥವಾ ನಮ್ಮ ಅಮ್ಮನಿಗೆ ಸಹಾಯವಾಗಲೆಂದು ಲೋಕಸಭೆ ಚುನಾವಣೆ ಸಮೀಪ ಬಂದಾಗ ಮಾಡಬಹುದಿತ್ತು ಆದರೆ ನಾವು ಹಾಗೆ ಮಾಡಲಿಲ್ಲ. ಎಷ್ಟೋ ಜನ ಮುಖಂಡರು ಬಂದು ನಮಗೆ ಸಲಹೆ ಕೊಟ್ಟರು. ಈ ಸಮಯದಲ್ಲಿ ಈ ಕಾರ್ಯಕ್ರಮ ಬೇಡ ಇನ್ನು ಸ್ವಲ್ಪ ದಿನ ಮುಂದಕ್ಕೆ ಹಾಕಿಕೊಂಡರೆ ಚುನಾವಣೆಗೆ ಸಹಾಯ ಆಗುತ್ತದೆ ಎಂದರು. ರಾಜಕೀಯ ಕೋನದಿಂದ ಅದು ಸರಿಯಾಗಿತ್ತು ಆದರೆ ನಾವು ಒಪ್ಪಲಿಲ್ಲ. ಇದು ನಮ್ಮ ಮದುವೆ ಸಂಭ್ರಮ ಇದಕ್ಕೆ ರಾಜಕೀಯ ಬೆರೆಸುವುದು ಬೇಡವೆಂಬುದು ನಮ್ಮ ನಿಲವಾಗಿತ್ತು” ಎಂದಿದ್ದಾರೆ ಅಭಿಷೇಕ್.
ಇದನ್ನೂ ಓದಿ:ಅಭಿಷೇಕ್-ಅವಿವಾ ಭರ್ಜರಿ ಬೀಗರೂಟಕ್ಕೆ ತಯಾರಿ, 7 ಟನ್ ಮಟನ್, 7 ಟನ್ ಚಿಕನ್, ಅಡುಗೆ ಏನೇನು?
”ಅಂಬರಿಶ್ ಅವರ ಮಗನ ಮದುವೆ ಇದು. ನಮ್ಮ ಕುಟುಂಬವನ್ನು ಸಾಕಿರುವ ಜನ ಇವರು. ಹಾಗಾಗಿ ಮೊದಲೇ ನಿಶ್ಚಯಿಸಿಕೊಂಡಿದ್ದೆವು. ಮಂಡ್ಯದಲ್ಲಿಯೇ ನಾವು ಬೀಗರೂಟ ಹಾಕಿಸಬೇಕೆಂದು. ಕುಟುಂಬದಲ್ಲಿ ಮದುವೆ ಆದರೆ ಹೇಗೆ ಬಂಧುಗಳನ್ನು ಕರೆದು ಊಟ ಹಾಕಿಸುತ್ತಾರೋ ಹಾಗೆಯೇ ನಾವು ಊಟ ಹಾಕಿಸಬೇಕು ಎಂದುಕೊಂಡಿದ್ದೆವು ಹಾಗೆಯೇ ಮಾಡಿದೆವು” ಎಂದಿದ್ದಾರೆ.
ಬೀಗರ ಔತಣ ಕೂಟದ ವೇಳೆ ನೂಕುನುಗ್ಗಲು ಉಂಟಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಕೆಲವರು ಅಡುಗೆ ಮಾಡುವಲ್ಲಿಗೆ ತೆರಳಿ ದಾಂಧಲೆ ಎಬ್ಬಿಸಿದ್ದಾರೆ. ನೂಕುನುಗ್ಗಲಿನಲ್ಲಿ ಆಹಾರವೂ ನೆಲದ ಪಾಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದ ಅಭಿಷೇಕ್, ಆಹಾರದ ಕೊರತೆ ಇರಲಿಲ್ಲ ಆದರೆ ಆಹಾರವನ್ನು ಚೆಲ್ಲಿದ್ದು ಬಹಳ ಬೇಸರವಾಯ್ತು ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ