ಕೆಲವರ ಪ್ರಚೋದನೆಯಿಂದ ಕೆಲ ಜನ ತಾಳ್ಮೆ ಕಳಕೊಂಡರು, ತಪ್ಪಾಗಿದ್ದರೆ ಕ್ಷಮಿಸಿ ಎಂದ ಅಭಿಷೇಕ್

|

Updated on: Jun 16, 2023 | 9:03 PM

Abhishek Ambareesh: ಬೀಗರ ಔತಣ ಕೂಟದಲ್ಲಿ ಆದ ಕೆಲವು ಅವ್ಯವಸ್ಥೆಗಳ ಬಗ್ಗೆ ಅಭಿಷೇಕ್ ಅಂಬರೀಶ್ ಕ್ಷಮೆ ಕೇಳಿದ್ದಾರೆ. ಕೆಲವರು ಪ್ರಚೋದನೆಯಿಂದ ಕೆಲ ಜನ ತಾಳ್ಮೆ ಕಳೆದುಕೊಂಡರು ಎಂದಿದ್ದಾರೆ ಅಭಿಷೇಕ್.

ಕೆಲವರ ಪ್ರಚೋದನೆಯಿಂದ ಕೆಲ ಜನ ತಾಳ್ಮೆ ಕಳಕೊಂಡರು, ತಪ್ಪಾಗಿದ್ದರೆ ಕ್ಷಮಿಸಿ ಎಂದ ಅಭಿಷೇಕ್
ಅಭಿಷೇಕ್ ಅಂಬರೀಶ್
Follow us on

ಅಭಿಷೇಕ್ ಅಂಬರೀಶ್ (Abhishek Ambareesh), ಅವಿವಾ ಬಿದಪ್ಪ (Aviva Bidappa) ಅವರ ವಿವಾಹದ ಪ್ರಯುಕ್ತ ಮಂಡ್ಯದ ಮದ್ದೂರು ಬಳಿಯ ಗೆಜ್ಜಲಗೆರೆಯಲ್ಲಿ ಬೀಗರ ಔತಣ ಕೂಟವನ್ನು ಆಯೋಜಿಸಲಾಗಿತ್ತು. ಸುಮಾರು 50,000 ಜನರಿಗೆ ಮಾಂಸದೂಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 11:30ರ ಸುಮಾರಿಗೆ ಊಟ ಆರಂಭವಾಯ್ತು. ಆದರೆ ಭಾರಿ ಸಂಖ್ಯೆಯ ಜನ ಆಗಮಿಸಿದ್ದರಿಂದ ಭಾರಿ ನೂಕು-ನುಗ್ಗಲು ಉಂಟಾಯ್ತು. ಮಧ್ಯಾಹ್ನ 2:30 ರ ಸಮಯದಲ್ಲಿ ಕೆಲವು ಜನರು ಅಡುಗೆ ಮಾಡುತ್ತಿದ್ದ ಸ್ಥಳಕ್ಕೆ ನುಗ್ಗಿ ಪಾತ್ರೆಗಳನ್ನು ಬೀಳಿಸಿದ ಘಟನೆಯೂ ನಡೆಯಿತು.

ಇಂದು ನಡೆದ ಬೀಗರ ಔತಣ ಕೂಟದ ಬಗ್ಗೆ ಮಾತನಾಡಲು ಅಭಿಷೇಕ್ ಅಂಬರೀಶ್ ಸುದ್ದಿಗೋಷ್ಠಿ ನಡೆಸಿದ್ದು, ನಾವು ಅಂದುಕೊಂಡಂತೆ ಕಾರ್ಯಕ್ರಮ ಯಶಸ್ವಿಯಾಗಿದೆ ಆದರೆ ಎಲ್ಲೋ ಕೆಲವರು ಮಾಡಿದ ತಪ್ಪಿನಿಂದ ನಾವು ಊಟದ ವ್ಯವಸ್ಥೆಯನ್ನು ಬೇಗನೆ ಮುಗಿಸಬೇಕಾಯ್ತು. ಬಹುತೇಕ ಎಲ್ಲರಿಗೂ ಊಟ ಸಿಕ್ಕಿದೆ ಆದರೆ ಊಟ ಸಿಗದೆ ತೊಂದರೆ ಪಟ್ಟವರಿಗೆ ನಾನು ಕ್ಷಮೆ ಕೇಳುತ್ತೇನೆ ಎಂದರು.

ನಾನು ಯಾರನ್ನೂ ದೂಷಿಸುವುದಿಲ್ಲ. ನಾವು ಸಾಕಷ್ಟು ಮುನ್ನೆಚ್ಚರಿಕೆಯಿಂದಲೇ ಎಲ್ಲ ವ್ಯವಸ್ಥೆ ಮಾಡಿದ್ದೆವು. ಸುಮಾರು 250 ಮಂದಿ ಪೊಲೀಸರು ಸಹ ಸ್ಥಳದಲ್ಲಿ ನಿಯೋಜನೆಗೊಂಡು ಜನರನ್ನು ನಿಯಂತ್ರಿಸಿದರು. ಹಾಗಿದ್ದರೂ ಸಹ ಎಲ್ಲೋ ಕೆಲವು ಮಂದಿ ನಿಯಂತ್ರಣ ತಪ್ಪಿದರು. ಅಥವಾ ಅವರನ್ನು ಕೆಲವರು ಪ್ರಚೋದಿಸಿದ್ದರಿಂದಲೋ ಏನೋ ಅವರು ಅಡುಗೆ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದರು. ಅದರಿಂದಾಗಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟರು ಹಾಗೂ ಮಹಿಳೆಯರು ಗಾಬರಿಯಾಗಿಬಿಟ್ಟರು. ಇದರಿಂದ ಅಡುಗೆ ಬಡಿಸುವುದು ಸಹ ತಡವಾಗಿಬಿಟ್ಟಿತು. ಕಾರಣಗಳನ್ನು ಎಷ್ಟೆ ಹೇಳಿದರು ಸಣ್ಣ ಮಟ್ಟಿನ ಸಮಸ್ಯೆ ಆಗಿರುವುದಂತೂ ನಿಜವಾದ್ದರಿಂದ ನಾನು ಕ್ಷಮೆ ಕೇಳುತ್ತಿದ್ದೇನೆ” ಎಂದು ವಿಶಾಲ ಹೃದಯ ಪ್ರದರ್ಶಿಸಿದರು ಅಭಿಷೇಕ್.

ಇದನ್ನೂ ಓದಿ:Beegara Oota: ಅಭಿಷೇಕ್-ಅವಿವಾ ವಿವಾಹ ಬೀಗರ ಊಟ ಕಾರ್ಯಕ್ರಮದಲ್ಲೊಬ್ಬ ವಿಶಿಷ್ಟ ಅಂಬರೀಷ್ ಅಭಿಮಾನಿ!

ಊಟದ ಕೊರತೆ ಆಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತೋರಿಸಿದರು ಆದರೆ ಅದು ಸುಳ್ಳು. ಖಂಡಿತ ಆಹಾರದ ಕೊರತೆ ಆಗಿರಲಿಲ್ಲ. ಇನ್ನೂ ಸಾಕಷ್ಟು ಆಹಾರ ಇತ್ತು. ದೊಡ್ಡ ಕಾರ್ಯಕ್ರಮ ಮಾಡಿದಾಗ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳು ಆಗುತ್ತವೆ, ಬಡಿಸುವುದರಲ್ಲಿ ತುಸು ತಡವಾಗಿದೆ ಆದರೆ ಅದನ್ನೇ ಇಟ್ಟುಕೊಂಡು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಜನ ತುಸು ಉದ್ರೇಕಕ್ಕೆ ಒಳಗಾದರು ಎನಿಸುತ್ತದೆ. ಆದರೆ ಅವರದ್ದು ತಪ್ಪಲ್ಲ. ಹೊಟ್ಟೆ ಹಸಿದಾಗ ತಾಳ್ಮೆ ಕಳೆದುಕೊಳ್ಳುವುದು ಸಹಜ” ಎಂದರು ಅಭಿಷೇಕ್.

ಕ್ಷಮೆಯ ಜೊತೆಗೆ ಧನ್ಯವಾದವನ್ನೂ ಹೇಳಿದ ಅಭಿಷೇಕ್, ನಮ್ಮ ಆಮಂತ್ರಣಕ್ಕೆ ಓಗೊಟ್ಟು ಆಗಮಿಸಿ ನಮ್ಮ ಔತಣ ಸ್ವೀಕರಿಸಿ ಹರಸಿದ ಎಲ್ಲರಿಗೂ ಧನ್ಯವಾದ. ಜೊತೆಗೆ ಮುಂದೆ ನಿಂತು ಇಷ್ಟು ದೊಡ್ಡ ಕಾರ್ಯಕ್ರಮ ನಡೆಸಿಕೊಟ್ಟ ಎಲ್ಲ ಆತ್ಮೀಯರಿಗೂ, ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ನಡೆಸಲು ಸಹಾಯ ಮಾಡಿದ ಪೊಲೀಸ್ ಸಿಬ್ಬಂದಿಗೆ ವಿಶೇಷ ಧನ್ಯವಾದ ಎಂದರು ಅಭಿಷೇಕ್ ಅಂಬರೀಶ್.

ಔತಣ ಕೂಟಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಜನ ಒಮ್ಮೆಲೆ ಆಗಮಿಸಿದ್ದರಿಂದ ಅಡುಗೆ ಬಡಿಸುವ ಕ್ರಮದಲ್ಲಿ ತುಸು ಏರು ಪೇರಾಯಿತು ಎನ್ನಲಾಗುತ್ತಿದೆ. ಕೆಲವು ಜನರು ಅಡುಗೆ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದರು. ಕಾರ್ಯಕ್ರಮದಲ್ಲಿ ಕೆಲವು ಅವ್ಯವಸ್ಥೆಗಳು ಸಹ ಇದ್ದುವಂತೆ. ವಾಹನ ನಿಲ್ಲಿಸಲು ಸೂಕ್ತವಾದ ವ್ಯವಸ್ಥೆ ಮಾಡಿರಲಿಲ್ಲ, ಜನರ ಪ್ರವೇಶ ಹಾಗೂ ನಿರ್ಗಮನಕ್ಕೆ ಸೂಕ್ತ ವ್ಯವಸ್ಥೆ ಇರಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ