ಆಗ ಹೀರೋ, ಈಗ ವಿಲನ್​ಗೆ ​ಸಂಕಷ್ಟ: ‘ಡೆವಿಲ್ಸ್’ಗೆ ಡೆವಿಲ್ ಆದ ಎಸಿಪಿ ಚಂದನ್

|

Updated on: Mar 25, 2025 | 4:03 PM

ACP Chandan Kumar: ‘ಡೆವಿಲ್’ ಸಿನಿಮಾ ತಂಡಕ್ಕೆ ಎಸಿಪಿ ಚಂದನ್ ಕುಮಾರ್ ಕಂಟಕದಂತೆ ಕಾಡುತ್ತಿರುವಂತಿದೆ. ‘ಡೆವಿಲ್’ ಸಿನಿಮಾದ ನಾಯಕ ದರ್ಶನ್ ಅವರು ಸಿನಿಮಾ ಚಿತ್ರೀಕರಣದಲ್ಲಿರುವಾಗಲೇ ಚಂದನ್ ಅವರು ದರ್ಶನ್ ಅನ್ನು ಬಂಧಿಸಿದ್ದರು. ಈಗ ಅದೇ ಸಿನಿಮಾದ ವಿಲನ್ ಪಾತ್ರಧಾರಿ ವಿನಯ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆಗ ಹೀರೋ, ಈಗ ವಿಲನ್​ಗೆ ​ಸಂಕಷ್ಟ: ‘ಡೆವಿಲ್ಸ್’ಗೆ ಡೆವಿಲ್ ಆದ ಎಸಿಪಿ ಚಂದನ್
Acp Chandan
Follow us on

ಎಸಿಪಿ ಚಂದನ್ ಕುಮಾರ್ ಹೆಸರು ಸುಮಾರು ಹತ್ತು ತಿಂಗಳ ಹಿಂದೆ ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿ ಕೇಳಿ ಬಂದಿತ್ತು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅನ್ನು ಬಂಧಿಸಿ, ಆ ನಂತರ ಪ್ರಕರಣದ ವಿಚಾರಣೆ, ತನಿಖೆಯನ್ನು ನಡೆಸಿದ್ದು ಇದೇ ಎಸಿಪಿ ಚಂದನ್. ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿದ್ದಾಗ ಆ ಸಿನಿಮಾದ ನಾಯಕ ದರ್ಶನ್ ಅನ್ನು ಬಂದಿಸಿದ್ದರು ಚಂದನ್, ಈಗ ಅದೇ ಸಿನಿಮಾದಲ್ಲಿ ವಿಲನ್ ಪಾತ್ರ ನಿರ್ವಹಿಸಿರುವ ವಿನಯ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಾಜಿ ಬಿಗ್​ಬಾಸ್ ಸ್ಪರ್ಧಿ ವಿನಯ್ ಗೌಡ, ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಮತ್ತೊಬ್ಬ ಬಿಗ್​ಬಾಸ್ ಸ್ಪರ್ಧಿ, ಗೆಳೆಯ ರಜತ್ ಜೊತೆ ಸೇರಿಕೊಂಡು ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಆ ರೀಲ್​ನಲ್ಲಿ ವಿನಯ್ ಮತ್ತು ರಜತ್ ಮಚ್ಚೊಂದನ್ನು ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆದು ವಿಚಾರಣೆ ನಡೆಸಿ, ತಡರಾತ್ರಿ ಬಿಟ್ಟು ಕಳಿಸಿದ್ದರು. ಈ ಇಬ್ಬರ ವಿಚಾರಣೆಯನ್ನು ಚಂದನ್ ಅವರೇ ಮಾಡಿದ್ದಾರೆ ಎನ್ನಲಾಗುತ್ತಿದೆ.

ರಜತ್ ಹಾಗೂ ವಿನಯ್ ಅವರು ತಾವು ಫೈಬರ್ ಮಚ್ಚನ್ನು ವಿಡಿಯೋದಲ್ಲಿ ಬಳಸಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಆದರೆ ವಿನಯ್ ಹಾಗೂ ರಜತ್ ನೀಡಿದ ನಕಲಿ ಮಚ್ಚಿಗೂ ವಿಡಿಯೋನಲ್ಲಿ ಇರುವ ಮಚ್ಚಿಗೂ ಹೋಲಿಕೆ ಇಲ್ಲ ಎನ್ನಲಾಗುತ್ತಿದ್ದು, ಈಗ ಮತ್ತೊಮ್ಮೆ ವಿನಯ್ ಹಾಗೂ ರಜತ್ ಅವರನ್ನು ವಿಚಾರಣೆ ಕರೆಯಾಗಿದೆ. ಆದರೆ ಇಬ್ಬರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಪೊಲೀಸರು ಅವರ ಮನೆಯ ಬಳಿ ತೆರಳಿದ್ದಾರೆ.

ಒಟ್ಟಾರೆ ‘ಡೆವಿಲ್’ ಸಿನಿಮಾಕ್ಕೆ ಎಸಿಪಿ ಚಂದನ್ ಅವರು ಡೆವಿಲ್ ರೀತಿಯಲ್ಲೇ ಕಾಡುತ್ತಿದ್ದಾರೆ. ಅಷ್ಟಕ್ಕೂ ಎಸಿಪಿ ಚಂದನ್ ಯಾರು? ಅವರ ಹಿನ್ನೆಲೆ ಏನು? ಎಸಿಪಿ ಚಂದನ್ ಅವರು ಮೂಲತಃ ಮೈಸೂರಿನವರು. ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಹೈಸ್ಕೂಲ್, ಪಿಯುಸಿ ಓದಿದ್ದರು. ಡಿಪ್ಲೊಮೊ ಮಾಡಿ ಬಳಿಕ ಎಂನಿಯರಿಂಗ್ ಮಾಡಿದವರು. 2 ವರ್ಷ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿ ಬಂದಿದ್ದಾರೆ ಚಂದನ್. ನಂತರ ಕೆಪಿಎಸ್ ಸಿ ಪರೀಕ್ಷೆ ಬರೆದು ಉತ್ತಮ ರ್ಯಾಂಕ್ ಪಡೆದು ಡಿವೈಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಈಗ ಎಸಿಪಿ ಆಗಿದ್ದಾರೆ.

ಇದನ್ನೂ ಓದಿ:ಆಪ್ತನಿಗಾಗಿ ಅಭಿಮಾನಿಗಳ ಮುಂದೆ ಬರಲಿರುವ ದರ್ಶನ್, ಯಾವಾಗ? ಎಲ್ಲಿ?

ಚಂದನ್ ಅವರಿಗೂ ಸಿನಿಮಾ ರಂಗಕ್ಕೂ ಪರೋಕ್ಷ ನಂಟು ಇದೆ. ಚಂದನ್ ಅವರಿಗೆ ಪುನೀತ್ ರಾಜ್​ಕುಮಾರ್ ಅವರ ‘ಪೃಥ್ವಿ’ ಸಿನಿಮಾ ಬಹಳ ಇಷ್ಟವಂತೆ. ‘ಸಿಂಘಂ’ ನೋಡಿ ಪೊಲೀಸ್ ಆಗಲು ಬಂದರೆ ಆಗಲ್ಲ, ‘ಪೃಥ್ವಿ’ ಸಿನಿಮಾ ನೋಡಿ ಅದು ಬಹಳ ಪ್ರಾಕ್ಟಿಕಲ್ ಆಗಿದೆ ಎಂದು ರಾಜ್​ಕುಮಾರ್ ಅಕಾಡೆಮಿಯಲ್ಲಿ ಅವರು ಒಮ್ಮೆ ಹೇಳಿದ್ದರು. ರಾಜ್​ಕುಮಾರ್ ಅವರ ಅಭಿಮಾನಿ ಆಗಿರುವ ಚಂದನ್ ಅವರು ಪೊಲೀಸ್ ಆದ ಬಳಿಕ ರಾಜ್​ಕುಮಾರ್ ಕುಟುಂಬದವರ ಜೊತೆಗೆ ಒಡನಾಟ ಸಹ ಬೆಳೆಸಿಕೊಂಡಿದ್ದರಂತೆ.

ಮತ್ತೊಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಡನೆ ಮಾತನಾಡುತ್ತಾ, ತಮಗೆ ಇಂಗ್ಲೀಷ್​ ಭಾಷೆ ಕಲಿಯುವುದು ಬಹಳ ಕಷ್ಟವಾಗಿತ್ತು. ಆಗ ನನ್ನ ಕೆಲವು ಗೆಳೆಯರು ಸಾಕಷ್ಟು ಒಳ್ಳೆಯ ಇಂಗ್ಲೀಷ್ ಸಿನಿಮಾಗಳನ್ನು ಕೊಟ್ಟರು. ಅದನ್ನು ನೋಡುತ್ತಾ ನೋಡುತ್ತಾ ಇಂಗ್ಲೀಷ್ ಕಲಿತೆ ಹಾಗೆ ಒಳ್ಳೆಯ ಸಿನಿಮಾಗಳನ್ನು ನೋಡಿದಂತೆಯೂ ಆಯ್ತು ಎಂದಿದ್ದರು. ಸಿನಿಮಾ ಪ್ರೇಮಿಯಾಗಿರುವ ಚಂದನ್ ಅವರು ಇದೀಗ ಕೆಲವು ಸಿನಿಮಾ ಮಂದಿಗೆ ಸಿಂಹಸ್ವಪ್ನವಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:41 pm, Tue, 25 March 25