ಮಚ್ಚು ಎಲ್ಲಿದೆ ಎಂದು ಬಾಯಿಬಿಡದ ರಜತ್, ವಿನಯ್; ಪೊಲೀಸರ ಎದುರು ಬೇಜವಾಬ್ದಾರಿ ಉತ್ತರ
ಲಾಂಗ್ ಹಿಡಿದು ರೀಲ್ಸ್ ಮಾಡಿದ ಕೇಸ್ನಲ್ಲಿ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರು ತೀವ್ರ ವಿಚಾರಣೆ ಎದುರಿಸುತ್ತಿದ್ದಾರೆ. ಇಂದು (ಮಾರ್ಚ್ 25) ಮಹಜರು ಪ್ರಕ್ರಿಯೆ ಕೂಡ ನಡೆದಿದೆ. ಆದರೆ ರೀಲ್ಸ್ ಮಾಡಲು ಬಳಸಿದ್ದ ಮಾರಕಾಸ್ತ್ರ ಎಲ್ಲಿದೆ ಎಂದು ಅವರು ಬಾಯಿ ಬಿಟ್ಟಿಲ್ಲ. ಪೊಲೀಸರ ಪ್ರಶ್ನೆಗೆ ಅವರು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

ಮಚ್ಚು ಹಿಡಿದು ಬಿಗ್ಬಾಸ್ (Bigg Boss) ಮಾಜಿ ಸ್ಪರ್ಧಿಗಳಿಂದ ರೀಲ್ಸ್ ಮಾಡಿದ ಪ್ರಕರಣದಲ್ಲಿ ವಿಚಾರಣೆ ತೀವ್ರಗೊಂಡಿದೆ. ವಿನಯ್ ಗೌಡ ಹಾಗೂ ರಜತ್ ಕಿಶನ್ (Rajath Kishan) ಅವರಿಗೆ ಪೊಲೀಸರು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಪೊಲೀಸರಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಸ್ಟುಡಿಯೋದಲ್ಲಿ ಸ್ಥಳ ಮಹಜರು ವೇಳೆ ಒಂದು ಗಂಟೆ ಪರಿಶೀಲಿಸಿದರೂ ಮಚ್ಚು ಪತ್ತೆಯಾಗಿಲ್ಲ. ರೀಲ್ಸ್ ಮಾಡಲು ಬಳಸಿದ್ದ ಮಚ್ಚು ಎಲ್ಲಿದೆ ಎಂಬುದು ಇನ್ನೂ ನಿಗೂಢವಾಗಿ ಉಳಿದುಕೊಂಡಿದೆ. ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ರಜತ್ ಕಿಶನ್ ಮತ್ತು ವಿನಯ್ ಗೌಡ (Vinay Gowda) ಅವರು ರೀಲ್ಸ್ ಮಾಡಿದ್ದರು.
ಅಕ್ಷಯ ಸ್ಟುಡಿಯೋದ ಮೂಲೆಮೂಲೆಯಲ್ಲಿ ಹುಡುಕಿದರೂ ಲಾಂಗ್ ಪತ್ತೆ ಆಗಿಲ್ಲ. ಮಚ್ಚು ಎಲ್ಲಿದೆ ಎಂದು ಕೇಳಿದರೂ ರಜತ್ ಹಾಗೂ ವಿನಯ್ ಗೌಡ ಬಾಯಿ ಬಿಟ್ಟಿಲ್ಲ. ಸೆಟ್ ಹಾಕಿದ್ದವರು ತಗೊಂಡು ಹೋಗಿರಬಹುದೆಂದು ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಹೀಗಾಗಿ ಬಸವೇಶ್ವರ ನಗರ ಪೊಲೀಸರು ಅವರಿಬ್ಬರನ್ನು ಮತ್ತೆ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಸತ್ಯಾಂಶ ಮಾತ್ರ ಹೇಳುವಂತೆ ಪೋಲಿಸರ ತಾಕೀತು ಮಾಡಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಶ್ನೆ 1: ರೀಲ್ಸ್ ಗೆ ಬಳಸಿದ ಮಾರಕಾಸ್ತ್ರ ಯಾವುದು? ಎಲ್ಲಿದೆ? ಉತ್ತರ: ನಾಗರಾಬಾವಿ ಅಕ್ಷಯ್ ಸ್ಟುಡಿಯೋ. ಪ್ರಶ್ನೆ 2: ಪೊಲೀಸರ ದಿಕ್ಕು ತಪ್ಪಿಸುವ ಯತ್ನ ಮಾಡ್ತಿದ್ದೀರಾ? ಉತ್ತರ : ಇಲ್ಲ ಸರ್. ಪ್ರಶ್ನೆ 3: ತನಿಖೆ ಭಾಗವಾಗಿ ವೆಪನ್ ಸೀಜ್ ಮಾಡಬೇಕಿದೆ ಗೊತ್ತೆ? ಉತ್ತರ: ಹೌದು ಸರ್, ಅಕ್ಷಯ್ ಸ್ಟುಡಿಯೋದಲ್ಲಿ ಇದೆ ತೋರಿಸ್ತಿವಿ. ಪ್ರಶ್ನೆ 4: ಪೋಲಿಸರ ತನಿಖೆ ಸಹಕರಿಸಬೇಕು, ಇಲ್ಲವಾದಲ್ಲಿ ಕಾನೂನು ರೀತ್ಯಾ ಕ್ರಮಜರುಗಿಸಲಾಗುವುದು ಅರಿವಿದೆಯಾ? ಉತ್ತರ: ರೀಲ್ಸ್ ಗೆ ಬಳಸಿದ್ದ ಅಸಲಿ ವೆಪನ್ ತೋರಿಸ್ತಿವಿ ಸರ್.
ಈ ರೀತಿ ವಿನಯ್ ಮತ್ತು ರಜತ್ ಹೇಳಿದ್ದರು. ಆದರೂ ಕೂಡ ಮಹಜರು ವೇಳೆ ವೆಪನ್ ಪತ್ತೆ ಆಗಿಲ್ಲ. ಮಚ್ಚು ಎಲ್ಲಿದೆ ಎಂಬುದನ್ನು ತಿಳಿಯಲು ಬಸವೇಶ್ವರ ನಗರ ಠಾಣೆಯಲ್ಲಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈಗ ರಜತ್ ಹಾಗೂ ವಿನಯ್ ಮೇಲೆ ಸಾಕ್ಷ್ಯನಾಶ ಆರೋಪ ಕೂಡ ಎದುರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಪೊಲೀಸರನ್ನೇ ಬಕ್ರಾ ಮಾಡಿದ್ರಾ ವಿನಯ್-ರಜತ್? ಫೈಬರ್ ಮಚ್ಚಿನ ಮೇಲೆ ಅನುಮಾನ
ರಜತ್ ಪತ್ನಿಗೂ ಬಸವೇಶ್ವರನಗರ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸೋಮವಾರ (ಮಾರ್ಚ್ 24) ರಜತ್ ಪತ್ನಿ ಫೈಬರ್ ಮಚ್ಚು ತಂದುಕೊಟ್ಟಿದ್ದರು. ಆದರೆ ಅದು ನಕಲಿ ಮಚ್ಚು ಅನ್ನೋದು ತನಿಖೆ ವೇಳೆ ಬಯಲಾಯಿತು. ಹಾಗಾಗಿ ಅಸಲಿ ಮಚ್ಚು ಮತ್ತೆ ಮಾಡುವ ಸಲುವಾಗಿ ಮತ್ತೆ ನೋಟಿಸ್ ನೀಡಲಾಯಿತು. ಇಂದು (ಮಾ.25) ಅವರು ವಿಚಾರಣೆಗೆ ಹಾಜರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.