ಇಂದು ಗುರುಪೂರ್ಣಿಮೆ. ತಮ್ಮ ಜೀವನದಲ್ಲಿ ಬಂದು ಒಂದಲ್ಲಾ ಒಂದು ರೀತಿಯಲ್ಲಿ ಪಾಠ ಕಲಿಸಿದ ಗುರುವನ್ನು ಎಲ್ಲರೂ ನೆನೆಯುತ್ತಿದ್ದಾರೆ. ನಟ ಜಗ್ಗೇಶ್ ಕೂಡ ಈ ವಿಶೇಷ ದಿನದಂದು ತಮ್ಮ ಗುರುವನ್ನು ನೆನೆದಿದ್ದು, ವರನಟ ಡಾ. ರಾಜ್ಕುಮಾರ್ ಅವರಿಗೆ ಗುರುಪೂರ್ಣಿಮೆಯ ನಮನಗಳು ಎಂದಿದ್ದಾರೆ.
ರಾಜ್ಕುಮಾರ್ ಅವರು ಮಾತನಾಡಿದ ವಿಡಿಯೋವನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ, ‘ಈ ಮಾತುಗಳನ್ನು ಎದುರಲ್ಲೇ ಕೂತು ಕೇಳಿದ ಅದೃಷ್ಟವಂತ ನಾನು. ಇವರ ಎಲ್ಲಾ ಹಿತನುಡಿ ನನ್ನ ಮನದಲ್ಲಿ ಲೀನವಾಗಿ ಬದುಕಿನ ಭಾಗವಾಗಿದೆ. ಯಾವಜನ್ಮದ ಪುಣ್ಯವೋ ಅವರ ಅಭಿಮಾನಿಯಾಗಿ, ಅವರ ಕಾಲದಲ್ಲೇ ನಟಿಸಿ ಅವರ ಬಳಿಯೇ ಶಹಭಾಸ್ಗಿರಿ ಪಡೆದುಬಿಟ್ಟೆ. ನನ್ನ ಕಲಾರಂಗದ ಗುರುವಿಗೆ ಗುರುಪೂರ್ಣಿಮೆಯ ನಮನಗಳು. ಗುರುಭ್ಯೋನಮಃ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
‘ನಮ್ಮದು ಕಲಾವಿದರ ಜಾತಿ. ಕಲಾವಿದರು ಬೆಳೆದರೆ ನನಗೆ ಖುಷಿ. ನಾನು ನಟ ಮಾತ್ರನಲ್ಲ. ನಾನು ಅಭಿಮಾನಿಯೂ ಹೌದು. ಕಲೆಯ ಅಭಿಮಾನ ನನಗೆ ತುಂಬಾನೇ ಇದೆ’ ಎಂದು ವಿಡಿಯೋದಲ್ಲಿ ರಾಜ್ಕುಮಾರ್ ಮಾತನಾಡಿದ್ದಾರೆ. ಇದಲ್ಲದೆ, ನಿರ್ಮಾಪಕರ ಬಗ್ಗೆಯೂ ರಾಜ್ಕುಮಾರ್ ಮಾತನಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಸೆಲೆಬ್ರಿಟಿಗಳಲ್ಲಿ ನಟ ಜಗ್ಗೇಶ್ ಕೂಡ ಪ್ರಮುಖರು. ಸಿನಿಮಾ ಮಾತ್ರವಲ್ಲದೆ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಅವರು ಸದಾ ಕಾಲ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಕೊರೊನಾ ಎರಡನೇ ಹಾವಳಿ ಬಳಿಕ ಒಂದಷ್ಟು ದಿನಗಳ ಕಾಲ ಸಾಮಾಜಿಕ ಜಾಲತಾಣದಿಂದ ದೂರ ಉಳಿದುಕೊಂಡಿದ್ದ ಜಗ್ಗೇಶ್ ಈಗ ಮತ್ತೆ ಸಕ್ರಿಯರಾಗಿದ್ದಾರೆ.
ಗುರುವಿಲ್ಲದೆ ಗೋವಿಂದನಿಲ್ಲಾ!
ಗುರುವಿಲ್ಲದೆ ವಿಧ್ಯೆಯಿಲ್ಲಾ!
ಗುರುವಿಲ್ಲದೆ ಬದುಕಿನ ದಾರಿ ಅರಿವಿಲ್ಲಾ!
ಬದುಕೆಂಬ ತೆಪ್ಪಕ್ಕೆ ಗುರುವೆ ಹೊಟ್ಟು!
ವಿಧ್ಯೆಕೊಟ್ಟ ಗುರುವಿಗೆ,ಬದುಕಿಗೆ ಆಸರೆಯಾದ ಗುರುರಾಯರ ಹುಡುಕಿಕೊಟ್ಟ ಅಮ್ಮನಿಗೆ ಶರಣಾರ್ಥಿ!
ಭಯದಿಂದ ಬದುಕು ಕಲಿಸಿದ ಅಪ್ಪನಿಗೆ ಶರಣಾರ್ಥಿ!
ಗುರುಕೃಪೆ ನಿಮಗಿರಲಿ….
ಶುಭದಿನ…. pic.twitter.com/lJK60OAjwx— ನವರಸನಾಯಕ ಜಗ್ಗೇಶ್ (@Jaggesh2) July 24, 2021
ಕಳೆದ ಕೆಲವು ದಿನಗಳಿಂದ ಜಗ್ಗೇಶ್ ಅವರು ನಾಲ್ಕು ಒಳ್ಳೆಯ ಸ್ಕ್ರಿಪ್ಟ್ಗಳನ್ನು ಕೇಳಿದ್ದಾರೆ. ಆ ಪೈಕಿ ಎರಡಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನೆರಡು ಸ್ಕ್ರಿಪ್ಟ್ಗಳ ಮಾತುಕತೆ ನಡೆಯುತ್ತಿದೆ ಎಂದು ಅವರು ಇತ್ತೀಚೆಗೆ ಮಾಹಿತಿ ನೀಡಿದ್ದರು. ವಿಜಯ್ ಪ್ರಸಾದ್ ನಿರ್ದೇಶನದ ‘ತೋತಾಪುರಿ’ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ವಿವಾದ: ಫ್ಯಾನ್ಸ್ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್
ಜಗ್ಗೇಶ್ 10ನೇ ಕ್ಲಾಸ್ ಅಂಕಪಟ್ಟಿ ವೈರಲ್; ಅಪ್ಪನಿಂದ ಬಿದ್ದಿತ್ತು ಬೂಟಿನ ಏಟು