ನಟ ಜಗ್ಗೇಶ್ ಅವರದ್ದು ಏಳು-ಬೀಳಿನ ಹಾದಿ. ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತ ಬಂದ ಅವರು ನಂತರ ಹೀರೋ ಆಗಿ ಬಡ್ತಿ ಪಡೆದರು. ಅನೇಕ ಕಷ್ಟಗಳನ್ನು ಅವರು ಕಂಡಿದ್ದಾರೆ. ಸಿನಿಮಾ ರಂಗದಲ್ಲಿ ಯಶಸ್ಸು ಪಡೆಯುವುದಕ್ಕಿಂತ ಮುನ್ನ ಜಗ್ಗೇಶ್ ಬದುಕಿನಲ್ಲಿ ಅನೇಕ ಸಮಸ್ಯೆಗಳಿದ್ದವು. ಅಂದುಕೊಂಡಿದ್ದು ನೆರವೇರಲಿ ಎಂದು ಅವರು ಬೇಡಿಕೊಂಡಿದ್ದು ಗುರುರಾಯರ ಬಳಿ. ಆಗಿನ ಸಮಯ ಹೇಗಿತ್ತು ಎಂಬುದನ್ನು ಜಗ್ಗೇಶ್ ಅವರು ಒಂದು ಫೋಟೋ ಮೂಲಕ ವಿವರಿಸಿದ್ದಾರೆ. ಈ ಶರ್ಟ್ ಲೆಸ್ ಫೋಟೋದ ಹಿಂದೆ ಅವರ ಬದುಕಿನ ಕಥೆಯೇ ಇದೆ.
ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಈ ಮೂಲಕ ಅವರ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ತಮ್ಮ ಜೀವನದ ಕೆಲವು ಘಟನೆಗಳನ್ನು ಹಂಚಿಕೊಳ್ಳುವ ಮೂಲಕ ಅನೇಕರಿಗೆ ಸ್ಫೂರ್ತಿ ತುಂಬುತ್ತಾರೆ. ಅನುಭವದ ಮಾತುಗಳನ್ನು ಅಭಿಮಾನಿಗಳಿಗೆ ದಾಟಿಸುತ್ತಾರೆ. ಈಗ ಅವರು ತಮ್ಮ ವಿವಾಹಪೂರ್ವದ ದಿನಗಳ ನೆನಪಿನ ಬುತ್ತಿ ಬಿಚ್ಚಿದ್ದಾರೆ. ಈ ಫೋಟೋ ಕ್ಲಿಕ್ ಮಾಡಿದ ಸಂದರ್ಭದಲ್ಲಿ ತಮ್ಮ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ.
‘1980. ಮಂತ್ರಾಲಯ ತುಂಗಾ ತೀರದ ಬಂಡೆಯ ಮೇಲೆ ಏಕಾಂಗಿ. ಆಗ ಮನದಲ್ಲಿ ಗುನುಗುತ್ತಿದ್ದ ಹಾಡು ‘‘ನನ್ನವರಾರೂ ನನಗಿಲ್ಲ.. ನೀನಲ್ಲದೇ ಬೇರೆ ಗತಿ ಇಲ್ಲ.. ನನ್ನಲಿ ಏಕೆ ಕೃಪೆ ಇಲ್ಲ.. ಗುರುರಾಯನೆ ನೀನೇ ನನಗೆಲ್ಲ..’’. ರಾಯರಲ್ಲಿ ಅಂದಿನ ನನ್ನ ಬೇಡಿಕೆ ಒಂದೇ. ಮಡದಿಯಾಗಿ ಪರಿಮಳಾ ಬೇಕು, ವೃತ್ತಿಯಾಗಿ ಕಲಾರಂಗಬೇಕು’ ಎಂದು ಜಗ್ಗೇಶ್ ಪೋಸ್ಟ್ ಮಾಡಿದ್ದಾರೆ. ಅವರು ಬೇಡಿದ ಈ ವರಗಳನ್ನು ರಾಯರು ಕರುಣಿಸಿದರು.
‘40 ವರ್ಷ ಹಿಂದೆ ತಿರುಗಿ ಈ ಚಿತ್ರ ನೋಡಿದಾಗ ರಾಯರ ಪವಾಡ ನನ್ನ ಬದುಕಿನ ವಿಸ್ಮಯ. ಮಾಯಸಂದ್ರವೆಲ್ಲಿ ಚಿತ್ರರಂಗವೆಲ್ಲಿ. ಈಶ್ವರ ಗೌಡ ಜಗ್ಗೇಶ್ ಆದದ್ದೆಲ್ಲಿ. ಅರ್ಪಣಾಭಾವದಿಂದ ನಂಬಿದರೆ ರಾಯರು ಬೃಂದಾವನದಿಂದ ತಾಯಂತೆ ಎದ್ದುಬಂದು ಹರಸುವರು. ಗುರುಭ್ಯೋ ನಮಃ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಫೋಟೋದಲ್ಲಿ ನೀವು ರಜನಿಕಾಂತ್ ರೀತಿ ಕಾಣುತ್ತೀರಿ ಎಂದು ಅಭಿಮಾನಿಯೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್, ‘ನಾವು ಹಿಂದಿನ ಜನ್ಮದ ಸಹೋದರರು ಎನಿಸುತ್ತದೆ. ನನ್ನನ್ನು ತಮ್ಮನಂತೆ ಪ್ರೀತಿಸುತ್ತಾರೆ. ನಮ್ಮಿಬ್ಬರ ಸ್ನೇಹಕ್ಕೆ 36 ವರ್ಷ’ ಎಂದು ಉತ್ತರಿಸಿದ್ದಾರೆ. ಜಗ್ಗೇಶ್ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ತೋತಾಪುರಿ’, ‘ರಂಗನಾಯಕ’ ಮುಂತಾದ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.
ಇದನ್ನೂ ಓದಿ:
Published On - 1:31 pm, Sat, 23 October 21