ಹಿರಿಯ ನಟ ಜೈ ಜಗದೀಶ್ (Jai Jagadeesh) ಅವರ ವಿರುದ್ಧ ಹಲ್ಲೆ ಆರೋಪ ಎದುರಾಗಿದೆ. ಜೂನ್ 5ರಂದು ಅವರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಪೊಲೀಸರು ಸೂಚಿಸಿದ್ದರು. ಅದರ ಅನ್ವಯ ಇಂದು (ಜೂನ್ 12) ಜೈ ಜಗದೀಶ್ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಪೊಲೀಸ್ ಠಾಣೆಗ ಬಂದ ಅವರು ಅಂದಿನ ಘಟನೆಯ ವಿವರ ನೀಡಿದ್ದಾರೆ. ಬೆಳ್ಳೂರು ಕ್ರಾಸ್ ಟೋಲ್ ಬಳಿ ಜೈ ಜಗದೀಶ್ ಗಲಾಟೆ ಮಾಡಿಕೊಂಡಿದ್ದರು. ತಮ್ಮ ಕಾರಿನ ಮೇಲೆ ಬಾಟಲ್ ಎಸೆದಿದ್ದಾರೆಂದು ವ್ಯಕ್ತಿಯೊಬ್ಬರ ಜೊತೆ ಅವರು ಜಗಳವಾಡಿದ್ದರು. ಟೋಲ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ನ ಕಿಟಕಿಯಿಂದ ತಂಪು ಪಾನೀಯ ಬಾಟಲ್ ಎಸೆಯಲಾಗಿತ್ತು. ಈ ವೇಳೆ ಬಸ್ ಇಳಿದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಜೈ ಜಗದೀಶ್ ಅವರು ಹಲ್ಲೆ (Assault) ಮಾಡಿದರು ಎಂಬ ಆರೋಪ ಎದುರಾಗಿದೆ.
ನನ್ನದೇನೂ ತಪ್ಪಿಲ್ಲ ಎಂದ ನಟ:
‘ಬಾಟಲಿಯನ್ನ ಕಾರಿನ ಮೇಲೆ ಎಸೆದಿದ್ದ ವ್ಯಕ್ತಿಯನ್ನು ಪ್ರಶ್ನಿಸಿದೆ. ಈ ವೇಳೆ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಹಿನ್ನೆಲೆಯಲ್ಲಿ ಟೋಲ್ ಬಳಿ ಗಲಾಟೆಯಾಗಿತ್ತು. ಇದರಲ್ಲಿ ನನ್ನದೇನೂ ತಪ್ಪಿಲ್ಲ. ನಾನು ಹಲ್ಲೆ ಮಾಡಿಲ್ಲ’ ಎಂದು ಜೈ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.
‘ನಡೆದಿರುವುದು ಸಣ್ಣ ಘಟನೆ. ಅದಕ್ಕೆ ರೆಕ್ಕೆ-ಪುಕ್ಕ ಕಟ್ಟಲಾಗಿದೆ. ಈ ಘಟನೆಯ ಹಿಂದೆ ಯಾರೆಲ್ಲ ಇದ್ದಾರೋ ಗೊತ್ತಿಲ್ಲ. ಬಾಟಲಿ ಆ ಕಡೆ ಎಸೆಯಪ್ಪ ಅಂತ ಹೇಳಿದ್ದಕ್ಕೆ ಆತ ಕೆಟ್ಟ ಮಾತುಗಳಿಂದ ನಿಂದಿಸಿದ. 10 ವರ್ಷದ ಹಿಂದೆ ಆಗಿದ್ರೆ ಈ ಮಾತು ಹೇಳಿದಾಗ ಹಕ್ಕೊಂಡು ಜಡಿದಿರುತ್ತಿದ್ದೆ. ಆದ್ರೆ ಈಗ ನಾನು ಹಾಗಿಲ್ಲ. ನನಗೂ ವಯಸ್ಸಾಗಿದೆ. ನಾನೇನು ಮಾತನಾಡಲಿ? ಸೀನಿಯರ್ ಆರ್ಟಿಸ್ಟ್ ಅಂತ ಜನರು ಮರ್ಯಾದೆ ಕೊಡ್ತಾರೆ. ಅದನ್ನು ಉಳಿಸಿಕೊಳ್ಳುವ ಸಲುವಾಗಿ ಏನೂ ಮಾತನಾಡದೇ ನಾನು ಆಚೆ ಬಂದೆ’ ಎಂದು ಜೈ ಜಗದೀಶ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:32 pm, Sun, 12 June 22