ಅಶ್ವಿನಿ ನಕ್ಷತ್ರ (Ashwini Nakshatra) ಮೂಲಕ ಮನೆಮಾತಾಗಿದ್ದ ಕಾರ್ತಿಕ್ ಜಯರಾಮ್ ಅಲಿಯಾಸ್ ಜೆಕೆ (JK) ಆ ನಂತರ ಹಲವು ಧಾರಾವಾಹಿ, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವೇ ಅಲ್ಲದೆ ಹಿಂದಿ ಧಾರಾವಾಹಿಗಳಲ್ಲಿಯೂ ನಟಿಸಿ ಹಿಂದಿ ಪ್ರೇಕ್ಷಕರ ಮನಸ್ಸು ಸಹ ಗೆದ್ದಿದ್ದಾರೆ. ನಾಯಕ, ವಿಲನ್, ಪೋಷಕ ಪಾತ್ರ ಎಲ್ಲದಕ್ಕೂ ಹೊಂದಿಕೊಳ್ಳುತ್ತಿದ್ದ ಪ್ರತಿಭಾವಂತ ನಟ ಜೆಕೆ ಈಗ ಹಠಾತ್ತನೆ ಚಿತ್ರರಂಗವನ್ನು (Sandalwood) ಬಿಡುವ ಮಾತನ್ನಾಡಿದ್ದಾರೆ. ಇದು ಅವರೇ ಸ್ವತಃ ಕೈಗೊಂಡ ನಿರ್ಧಾರವಲ್ಲ ಬದಲಿಗೆ ಕೆಲವರು ಪರೋಕ್ಷವಾಗಿ ಹೇರಿದ ಒತ್ತಡದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಜೆಕೆ.
ಟಿವಿ9 ಜೊತೆಗೆ ಮಾತನಾಡಿರುವ ಜೆಕೆ, ”ಒಳ್ಳೆಯ ಉದ್ಯೋಗವನ್ನು ಮಾಡುತ್ತಿದ್ದೆ ಅದರ ಜೊತೆಗೆ ಆಗಾಗ ಸಿನಿಮಾ ಹಾಗೂ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದೆ, ಬಳಿಕ ಎರಡು ದೋಣೆಯ ಮೇಲೆ ಕಾಲಿಡುವುದು ಸೂಕ್ತವಲ್ಲ ಎನಿಸಿ ಕೆಲಸ ಬಿಟ್ಟು ನಟನೆಯನ್ನು ಪೂರ್ಣ ವೃತ್ತಿಯನ್ನಾಗಿ ಮಾಡಿಕೊಂಡೆ. ಅದಕ್ಕೆ ತಕ್ಕಂತೆ ಕನ್ನಡದ ಜನ ಪ್ರೀತಿಸಿದರು. ಮಾಧ್ಯಮಗಳು ಪ್ರೋತ್ಸಾಹ ನೀಡಿದವು. ನಾನು ಕನ್ನಡ ಭಾಷೆಯನ್ನು ಬಹುವಾಗಿ ಪ್ರೀತಿಸುತ್ತೇನೆ, ಆದರೆ ಕೆಲವರಿಗೆ ನಾನಿಲ್ಲಿ ಇರುವುದು ಇಷ್ಟವಿಲ್ಲ ಹಾಗಾಗಿ ನಾನು ಹೋಗುತ್ತಿದ್ದೇನೆ” ಎಂದಿದ್ದಾರೆ.
”ಕೆಲವರು ಬಹಳ ತೊಂದರೆ ಕೊಟ್ಟಿದ್ದಾರೆ. ಹಿಂದಿ ಧಾರಾವಾಹಿ ಮಾಡುತ್ತಿದ್ದೆ ಒಳ್ಳೆಯ ಹೆಸರು ಗಳಿಸಿದ್ದೆ. ಹಿಂದಿ ಸಿನಿಮಾ ಒಂದರ ಅವಕಾಶ ಸಹ ನನಗೆ ದೊರಕಿತ್ತು ಇನ್ನೇನು ಚಿತ್ರೀಕರಣ ಪ್ರಾರಂಭವಾಗಬೇಕು ಎಂಬ ಸಮಯದಲ್ಲಿ ಅಲ್ಲಿಗೆ ಕರೆ ಮಾಡಿ ನನಗೆ ಸಿಕ್ಕ ಅವಕಾಶವನ್ನು ತಪ್ಪಿಸಲಾಯ್ತು. ಇಲ್ಲಿಯೂ ಸಹ ನನಗೆ ಬರಬೇಕಿದ್ದ ಅವಕಾಶವನ್ನು ತಪ್ಪಿಸಿದರು. ನನಗೇ ನೇರವಾಗಿ ಸವಾಲು ಹಾಕಿ 2022 ರ ವೇಳೆಗೆ ಇಂಡಸ್ಟ್ರಿ ಬಿಡುಸುತ್ತೇವೆ ಎಂದರು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಜೆಕೆ.
ಯಾರು ಹಾಗೆ ಮಾಡಿದವರು? ಯಾರಿಗೆ ನಿಮ್ಮ ಮೇಲೆ ದ್ವೇಷ ಎಂಬ ಪ್ರಶ್ನೆಗೆ ಉತ್ತರಿಸಿರುವ ಜೆಕೆ, ”ಯಾರಿಗೆ ಎಂದು ಹೇಳಿದರೆ ವಿವಾದವಾಗುತ್ತದೆ, ಅದಕ್ಕೆ ಪೂರಕವಾದ ವಿಡಿಯೋ ಸಾಕ್ಷಿಗಳನ್ನೆಲ್ಲ ಒದಗಿಸಬೇಕಾಗುತ್ತದೆ ಅವೆಲ್ಲವೂ ನನ್ನ ಬಳಿ ಇಲ್ಲ. ಆದರೆ ನೇರವಾಗಿ ಹೇಳಿದ ವಿಚಾರಗಳಿಗೆ ನಾನು ಮಾತ್ರವೇ ಸಾಕ್ಷಿ. ಆ ವಿಷಯಗಳನ್ನೆಲ್ಲ ಹೇಳಲು ನಾನು ಬಯಸುವುದಿಲ್ಲ. ಆದರೆ ಚಿತ್ರರಂಗದಿಂದ ದೂರ ಹೋಗುವ ವಿಚಾರವನ್ನಂತೂ ಮಾಡಿದ್ದೇನೆ” ಎಂದಿದ್ದಾರೆ.
ಇದನ್ನೂ ಓದಿ:JK: ಜೆಕೆ ಮದುವೆಯ ಬಗ್ಗೆ ಹರಿದಾಡುತ್ತಿದೆ ವದಂತಿ; ಸ್ಪಷ್ಟನೆ ನೀಡಿದ ನಟ ಹೇಳಿದ್ದೇನು?
ಒಮ್ಮೆಲೆ ಇಂಥಹಾ ಗಟ್ಟಿ ನಿರ್ಧಾರ ಏಕೆ? ಚಿತ್ರರಂಗದಿಂದ ದೂರಾದ ಬಳಿಕ ಮುಂದೇನು? ಎಂಬ ಪ್ರಶ್ನೆಗೆ ಉತ್ತರಿಸಿರುವ ಜೆಕೆ, ”ಸಾಕಷ್ಟು ಅವಕಾಶಗಳು ನನ್ನ ಮುಂದೆ ಇವೆ. ನಟನೆ ಮಾತ್ರವೇ ಅಲ್ಲದೆ ಅದಕ್ಕೆ ಹೊರತಾದ ಆಯ್ಕೆಗಳೂ ಸಹ ನನ್ನ ಮುಂದೆ ಇದೆ. ಆದರೆ ಈಗ ಸದ್ಯಕ್ಕೆ ನನ್ನ ಮುಂದಿರುವ ಸವಾಲೆಂದರೆ ಐರಾವನ್ ಸಿನಿಮಾದ ಬಿಡಗುಡೆ ಮತ್ತು ಕಾಡ ಸಿನಿಮಾದ ಬಿಡುಗಡೆ ಇದೆರಡನ್ನೂ ಮುಗಿಸಿ ನಾನು ಮುಂದಿನ ಹೆಜ್ಜೆ ಇಡುತ್ತೇನೆ. ಈ ನಿರ್ಧಾರ ನನ್ನ ಪಾಲಿಗೆ ಬಹಳ ಕಠಿಣವಾದ ನಿರ್ಧಾರ ಆದರೆ ಈ ನಿರ್ಧಾರವನ್ನು ನಾನು ತೆಗೆದುಕೊಳ್ಳಲೇ ಬೇಕಿದೆ” ಎಂದಿದ್ದಾರೆ ಜೆಕೆ. ಅವರ ನಟನೆಯ ಐರಾವನ್ ಸಿನಿಮಾ ಜೂನ್ 28ಕ್ಕೆ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ