ಕಂಠಿ (Kanti) ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟ ಕಿಶೋರ್ (Actor Kishore) ಬಹುಭಾಷಾ ನಟರಾಗಿ ಬಡ್ತಿ ಪಡೆದು ಬಹಳ ಸಮಯವಾಗಿದೆ. ಕನ್ನಡದಲ್ಲಿ ಹಲವು ಅತ್ಯುತ್ತಮ ಪಾತ್ರಗಳಲ್ಲಿ ನಟಿಸಿರುವ ಕಿಶೋರ್, ಪರಭಾಷೆಗಳಲ್ಲಿಯೂ ಹಲವು ಅತ್ಯುತ್ತಮ ನಿರ್ದೇಶಕರುಗಳೊಟ್ಟಿಗೆ ಕೆಲಸ ಮಾಡಿದ್ದಾರೆ, ಬಹುಕಾಲ ನೆನಪುಳಿಯುವ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವೇ ಅಲ್ಲದೆ ದಕ್ಷಿಣ ಭಾರತದಲ್ಲಿಯೇ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರಾಗಿರುವ ಕಿಶೋರ್, ತಾವು ಬಹಳ ಕಷ್ಟಪಟ್ಟು ನಟಿಸಿದ ಸಿನಿಮಾ ಯಾವುದು ಎಂಬ ಬಗ್ಗೆ ಡೆಕ್ಕನ್ ಹೆರಾಲ್ಡ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.
2006 ರಿಂದಲೂ ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿರುವ ಕಿಶೋರ್ಗೆ ಹಲವು ಅತ್ಯುತ್ತಮ ನಿರ್ದೇಶಕರುಗಳು ಸಿಕ್ಕಿದ್ದಾರೆ. ಅವರಲ್ಲಿ ಪ್ರಮುಖವಾದವರು ತಮಿಳಿನ ನಿರ್ದೇಶಕ ವೆಟ್ರಿಮಾರನ್ (Vetrimaran). ಇವರ ಮೊದಲ ಸಿನಿಮಾ ಪೊಲ್ಲಾಧವನ್ (Polladhavan) ನಲ್ಲಿ ನಟಿಸಿದ್ದ ಕಿಶೋರ್ ಆ ಬಳಿಕ ವೆಟ್ರಿ ನಿರ್ದೇಶಿಸಿದ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ಆಡುಕುಳಂ, ಆಸ್ಕರ್ಗೆ ಹೋಗಿದ್ದ ವಿಸಾರನೈ ಸಿನಿಮಾಗಳಲ್ಲಿಯೂ ನಟಿಸಿದರು. ಕಿಶೋರ್ಗೆ ಬಹು ಇಷ್ಟವಾದ ನಿರ್ದೇಶಕರಲ್ಲಿ ವೆಟ್ರಿ ಸಹ ಒಬ್ಬರು. ಆದರೆ ಅವರದ್ದೇ ಒಂದು ಸಿನಿಮಾದಲ್ಲಿ ನಟಿಸುವುದು ಕಿಶೋರ್ಗೆ ಬಹಳ ಕಷ್ಟವಾಗಿ ಪರಿಣಮಿಸಿತಂತೆ. ಅದುವೇ ವಿಸಾರನೈ.
ವೆಟ್ರಿ ನಿರ್ದೇಶನದ ವಿಸಾರನೈ ಸಿನಿಮಾ ಪೊಲೀಸ್ ದೌರ್ಜನ್ಯದ ಬಗೆಗಿನ ಕತೆ ಹೊಂದಿರುವ ಸಿನಿಮಾ ಆಗಿದೆ. ಸಿನಿಮಾದಲ್ಲಿ ಕೆಲವು ಅಮಾಯಕ ಯುವಕರನ್ನು ಹೇಗೆ ಪೊಲೀಸರು ಹೊಡೆದು ಬಡಿದು ಪ್ರಕರಣವೊಂದರಲ್ಲಿ ಸಿಲುಕಿಸಲು ಯತ್ನಿಸುತ್ತಾರೆ ಕೊನೆಗೆ ಅವರನ್ನು ಹೇಗೆ ಕೊಲ್ಲುತ್ತಾರೆ ಎಂಬುದು ಸಿನಿಮಾದ ಕತೆ. ಸಿನಿಮಾದಲ್ಲಿ ಕೆಕೆ ಹೆಸರಿನ ಆಡಿಟರ್ ಪಾತ್ರದಲ್ಲಿ ಕಿಶೋರ್ ನಟಿಸಿದ್ದಾರೆ. ಕಿಶೋರ್ ಪಾತ್ರವನ್ನು ಸಹ ಪೊಲೀಸರು ತೀವ್ರವಾಗಿ ಹಿಂಸೆಗೆ ಒಳಪಡಿಸುತ್ತಾರೆ.
ಆ ಸಿನಿಮಾದಲ್ಲಿ ತೋರಿಸಲಾದ ದೌರ್ಜನ್ಯ, ಪೊಲೀಸರು ಹೊಡೆಯುತ್ತಿದ್ದ ರೀತಿ, ಹೊಡೆಸಿಕೊಳ್ಳುತ್ತಿರುವವರ ಗೋಳಾಟ ಇವನ್ನೆಲ್ಲ ನೋಡುವುದು ಮಹಾ ಹಿಂಸೆಯಾಗಿ ಪರಿಣಮಿಸಿತ್ತಂತೆ ಕಿಶೋರ್ಗೆ. ಅದು ಮಾತ್ರವೇ ಅಲ್ಲದೆ, ಕಿಶೋರ್ ನಿರ್ವಹಿಸಿದ್ದ ಕೆಕೆ ಪಾತ್ರವೂ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾಗತ್ತದೆ. ಆತನಿಗೆ ಹಿಂಸೆ ನೀಡಲೆಂದೇ ಎರಡು ಕೈಗಳನ್ನು ಅಮಾನುಷ ಮಾದರಿಯಲ್ಲಿ ಹಿಂದೆ ಕಟ್ಟಲಾಗಿರುತ್ತದೆ. ವಿಸಾರನೈ ಸಿನಿಮಾದ ಶೂಟಿಂಗ್ ವೇಳೆ ಮತ್ತೊಂದು ಸಿನಿಮಾದಲ್ಲಿಯೂ ಕಿಶೋರ್ ನಟಿಸುತ್ತಿದ್ದರಿಂದ ಚಿತ್ರೀಕರಣದ ಸಮಯದಲ್ಲಿ ಉಳಿಸಲು ಶಾಟ್ಗಳ ನಡುವೆ ಬ್ರೇಕ್ ತೆಗೆದುಕೊಳ್ಳದೆ ಹಾಗೆಯೇ ಕಟ್ಟಿದ ಸ್ಥಿತಿಯಲ್ಲಿಯೇ ಇರುತ್ತಿದ್ದರಂತೆ ಕಿಶೋರ್. ಇದರಿಂದ ಬಹಳ ಸಮಸ್ಯೆಯನ್ನು ಅನುಭವಿಸಬೇಕಾಯಿತಂತೆ. ನಿದ್ದೆ ಮಾಡುವ ಸಮಯದಲ್ಲಿ ಸಹ ಅಪ್ರಯತ್ನಪೂರ್ವಕವಾಗಿ ಕಿಶೋರ್ ಕೈಗಳು ಹಿಂದಕ್ಕೆ ಹೋಗಿಬಿಡುತ್ತಿದ್ದವಂತೆ.
ಇದನ್ನೂ ಓದಿ: Kishore: ‘ಮೈಂಡ್ ಲೆಸ್ ನನ್ನ ಪದವಲ್ಲ’: ‘ಕೆಜಿಎಫ್’ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ ನಟ ಕಿಶೋರ್
ಸಂದರ್ಶನದಲ್ಲಿ ಕಿಶೋರ್ ಅವರೇ ಹೇಳಿರುವಂತೆ, ಆ ಸಿನಿಮಾದಲ್ಲಿ ಅದೆಷ್ಟು ದೌರ್ಜನ್ಯ ತೋರಿಸಲಾಗಿತ್ತೆಂದರೆ ಚಿತ್ರೀಕರಣದ ಸಮಯದಲ್ಲಿ ಅದನ್ನು ನೋಡಲು ಸಹ ಸೆಟ್ನಲ್ಲಿದ್ದವರಿಗೆ ಆಗುತ್ತಿರಲಿಲ್ಲ. ಚಿತ್ರೀಕರಣಕ್ಕೆ ನಿಜವಾದ ಪೊಲೀಸರನ್ನು ಕರೆಸಿ ನಟರನ್ನು ಹೊಡೆಸಲಾಗುತ್ತಿತ್ತು, ಹೊಡೆಯಲು ನಕಲಿ ಕೋಲುಗಳನ್ನು ಬಳಸಲಾಗಿತ್ತಾದರೂ ಜೋರಾಗಿ ಹೊಡೆದರೆ ಅದರಲ್ಲಿಯೂ ಪೆಟ್ಟು ಬೀಳುತ್ತದೆ. ಆ ಪೆಟ್ಟುಗಳನ್ನು ತಿಂದೇ ನಟರು ನಟಿಸುತ್ತಿದ್ದರು. ಸೆಟ್ನಲ್ಲಿ ಇದ್ದವರಿಗೆ ಅದನ್ನು ನೋಡಲು ಸಹ ಕಷ್ಟವಾಗಿಬಿಟ್ಟಿತ್ತು. ಸ್ವತಃ ವೆಟ್ರಿಮಾರನ್, ಅದನ್ನೆಲ್ಲ ನೋಡಲಾಗದೆ ಕೆಲವು ದಿನ ಶೂಟಿಂಗ್ ಅನ್ನು ಬಂದ್ ಮಾಡಿಬಿಟ್ಟಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಕಿಶೋರ್.