ಕೊವಿಡ್ ಎರಡನೇ ಅಲೆಗೆ ಅನೇಕರು ಪ್ರಾಣ ಕಳೆದುಕೊಂಡರು. ಲಕ್ಷಾಂತರ ಜನರ ಜೀವ ಉಳಿಸಲು ವೈದ್ಯರು ಹಗಲು-ರಾತ್ರಿ ಕಷ್ಟಪಟ್ಟಿದ್ದಾರೆ. ಇಂಥ ಕಷ್ಟದ ಪರಿಸ್ಥಿತಿಯಲ್ಲೂ ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆಗಳು ನಡೆದಿರುವುದು ವಿಷಾದನೀಯ. ಈ ಬಗ್ಗೆ ಕನ್ನಡದ ಖ್ಯಾತ ನಟ ಕೋಮಲ್ ಕುಮಾರ್ ಮಾತನಾಡಿದ್ದಾರೆ. ಅವರು ಕೂಡ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಗುಣಮುಖರಾಗಿ ಬಂದಿರುವ ಕೋಮಲ್ ಈಗ ವೈದ್ಯರ ಬಗ್ಗೆ ಮಾತನಾಡಿದ್ದಾರೆ.
‘ಎಲ್ಲರಿಗೂ ನಮಸ್ಕಾರ. ನಾನು ಇಂದು ಮಾತನಾಡಲು ದೊಡ್ಡ ಕಾರಣ ಇದೆ. ಈ ಕೊವಿಡ್ ಎಂಬ ಜಾಗತಿಕ ಸಾಂಕ್ರಮಿಕದ ಸಮಯದಲ್ಲಿ ನಾವೆಲ್ಲರೂ ವೈದ್ಯರಿಗೆ ಬೆಂಬಲ ನೀಡಬೇಕು. ಅವರು ಸಮಾಜದಲ್ಲಿ ಮುಂದೆ ನಿಂತು ಸೇವೆ ಮಾಡುತ್ತಿದ್ದಾರೆ. ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಹಣೆಬರಹ ಸರಿ ಇಲ್ಲದಿದ್ದಾಗ ಕೆಲವರು ಸಾಯುತ್ತಾರೆ. ಅದಕ್ಕೆ ಡಾಕ್ಟರ್ ಕಾರಣ ಅಲ್ಲ. ಇವತ್ತು ವೈದ್ಯರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ’ ಎಂದು ಕೋಮಲ್ ಹೇಳಿದ್ದಾರೆ.
‘ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆಪ್ತರು ಸತ್ತಿದ್ದಾರೆ ಎಂದಾಗ ಎಲ್ಲರಿಗೂ ನೋವು ಇರುತ್ತದೆ. ವ್ಯಕ್ತಿ ಸಾಯಲಿ ಎಂದು ಯಾರೂ ಚಿಕಿತ್ಸೆ ಕೊಡುವುದಿಲ್ಲ. ಅವರಿಗೆ ತಿಳಿದ ರೀತಿಯಲ್ಲಿ ಚಿಕಿತ್ಸೆ ನೀಡಿರುತ್ತಾರೆ. ದಯವಿಟ್ಟು ಎಲ್ಲರೂ ಡಾಕ್ಟರ್ಗಳಿಗೆ ಬೆಂಬಲ ನೀಡಿ. ತಾಳ್ಮೆ ಇಟ್ಟುಕೊಳ್ಳಿ, ಅವರಿಗೆ ಗೌರವ ನೀಡಿ. ನನ್ನ ಅನಿಸಿಕೆ ಹೇಳಿದ್ದೇನೆ. ಏನಾದರೂ ತಪ್ಪಿದ್ದರೆ ಕ್ಷಮಿಸಿ’ ಎಂದಿದ್ದಾರೆ ಕೋಮಲ್.
‘ನಾನು ಯಾವಾಗಲೂ ವೈದ್ಯರಿಗೆ ಬೆಂಬಲ ನೀಡುತ್ತಾನೆ. ಯಾಕೆಂದರೆ ಅವರೇ ನಮ್ಮ ಜೀವ ಉಳಿಸುವ ನಿಜವಾದ ದೇವರು. ಉದಾಹರಣೆಗೆ, ನನಗೂ ಕೊರೊನಾ ಬಂದಿತ್ತು. ನನ್ನನ್ನು ಕಾಪಾಡಿದ್ದೇ ವೈದ್ಯರು. ಅವರ ಪರವಾಗಿ ಕಳಕಳಿಯಿಂದ ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಹಲ್ಲೆ ಮಾಡಬೇಡಿ. ಹಲ್ಲೆ ಮಾಡುವುದು ಶಿಕ್ಷಾರ್ಹ ಅಪರಾಧ’ ಎಂದು ಕೋಮಲ್ ಹೇಳಿದ್ದಾರೆ.
ಕೋಮಲ್ ಅವರಿಗೆ ಕೊರೊನಾ ಪಾಸಿಟಿವ್ ಆದಾಗ ಅವರ ಸಹೋದರ, ನಟ ಜಗ್ಗೇಶ್ ಬಹಳ ಕಷ್ಟಪಟ್ಟಿದ್ದರು. ಯಾರಿಗೂ ಗೊತ್ತಾಗದ ರೀತಿಯಲ್ಲಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಕೋಮಲ್ ಚೇರಿಸಿಕೊಂಡ ನಂತರವೇ ಈ ವಿಷಯವನ್ನು ಅವರು ಜಗತ್ತಿಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ತಾವು ಅನುಭವಿಸಿದ ನೋವು ಏನೆಂಬುದರ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ:
ನಟ ಕೋಮಲ್ಗೆ ಕೊರೊನಾ; ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಜಗ್ಗೇಶ್
ರಿಯಲ್ ಹೀರೋ ಆದ ಜಗ್ಗೇಶ್; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ