Actor Shivaram: ಹಿರಿಯ ನಟ ಶಿವರಾಂ ನಿಧನ; ತ್ಯಾಗರಾಜನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ತ್ಯಾಗರಾಜ ನಗರದ ಅವರ ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಬೆಂಗಳೂರು: ಹಿರಿಯ ನಟ ಎಸ್.ಶಿವರಾಂ ಇಂದು (ಡಿ.04) ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಪ್ರಶಾಂತ್ ಆಸ್ಪತ್ರೆಯ ಸಿಬ್ಬಂದಿಗಳು ಅಗಲಿದ ಹಿರಿಯ ನಟನ ಅಂತಿಮ ದರ್ಶನವನ್ನು ಪಡೆದಿದ್ದಾರೆ. ಆಸ್ಪತ್ರೆಯಿಂದ ಶಿವರಾಂ ಅವರ ಪಾರ್ಥಿವ ಶರೀರವನ್ನು ತ್ಯಾಗರಾಜ ನಗರದಲ್ಲಿರುವ ಮನೆಗೆ ರವಾನಿಸಲಾಗುವುದು. ಅಲ್ಲಿ ಕುಟುಂಬದವರು ಸಾಂಪ್ರದಾಯಿಕ ಪೂಜೆ ಸಲ್ಲಿಸಲಿದ್ದು, ನಂತರ ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅಂತ್ಯಕ್ರಿಯೆಯ ಕುರಿತು ಸಚಿವ ಆರ್.ಅಶೋಕ್ ಅವರೊಂದಿಗೆ ಚರ್ಚಿಸಿ ನಂತರ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಎಲ್ಲಾ ಪ್ರಯತ್ನದ ನಂತರವೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ; ಶಿವರಾಂ ಪುತ್ರ ಲಕ್ಷ್ಮೀಶ್ ಕಂಬನಿ ವೈದ್ಯರ ಸತತ ಪ್ರಯತ್ನದ ನಂತರವೂ ಶಿವರಾಂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರ ಪುತ್ರ ಲಕ್ಷ್ಮೀಶ್ ಹೇಳಿದ್ದಾರೆ. ‘‘ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರನ್ನು ಉಳಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲ. ನಮ್ಮ ತಂದೆ ಶಿವರಾಂ ಇನ್ನು ನಮ್ಮ ಜತೆ ಇಲ್ಲ. ಶಿವರಾಂ ಅವರು ಭಗವಂತನ ಪಾದ ಸೇರಿದ್ದಾರೆ. ಆಸ್ಪತ್ರೆ ವತಿಯಿಂದ ಎಲ್ಲಾ ರೀತಿ ಚಿಕಿತ್ಸೆ ನೀಡಿದ್ದಾರೆ. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ನಾವು ಒಪ್ಪಿಕೊಳ್ಳಲೇ ಬೇಕು’’ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಹಿರಿಯ ನಟ ಶಿವರಾಂ ನಿಧನಕ್ಕೆ ನಾಡಿನ ಕಂಬನಿ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ನಿಧನಕ್ಕೆ ನಾಡು ಕಂಬನಿ ಮಿಡಿದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ‘ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ಕಲಾವಿದ ಶಿವರಾಂ ಅವರ ನಿಧನ ತುಂಬಾ ದುಃಖದ ವಿಷಯ. ಶಿವರಾಂ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಚಿತ್ರರಂಗದ ಗಣ್ಯರು, ಕಲಾವಿದರು ಶಿವರಾಂ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:
Shivaram Death: ನಟ ಶಿವರಾಂ ನಿಧನ; ಹಿರಿಯ ಕಲಾವಿದನ ಅಗಲಿಕೆಗೆ ಕಂಬನಿ ಮಿಡಿಯುತ್ತಿರುವ ಗಣ್ಯರು
Published On - 3:36 pm, Sat, 4 December 21