Sudeep: ಮುಂಬೈ ವೇದಿಕೆ ಮೇಲೆ ನಿಂತು ಹಿಂದಿ ವಾಲಾಗಳಿಗೆ ಕನ್ನಡ ಕಲಿಯಿರಿ ಎಂದ ಸುದೀಪ್

|

Updated on: Mar 10, 2023 | 5:22 PM

ಅವಕಾಶ ಸಿಕ್ಕಾಗೆಲ್ಲ ಹೊರ ರಾಜ್ಯಗಳಲ್ಲಿ ಕನ್ನಡದ ಹಿರಿಮೆ ಸಾರುತ್ತಾ ಬಂದಿರುವ ಸುದೀಪ್, ಇದೀಗ ಮುಂಬೈನಲ್ಲಿ ನಿಂತು ಅಲ್ಲಿನ ಹಿಂದಿವಾಲಾಗಳಿಗೆ ಆದಷ್ಟು ಬೇಗ ಕನ್ನಡ ಕಲಿಯಿರಿ ಎಂದಿದ್ದಾರೆ.

Sudeep: ಮುಂಬೈ ವೇದಿಕೆ ಮೇಲೆ ನಿಂತು ಹಿಂದಿ ವಾಲಾಗಳಿಗೆ ಕನ್ನಡ ಕಲಿಯಿರಿ ಎಂದ ಸುದೀಪ್
ಸುದೀಪ್
Follow us on

ಸುದೀಪ್​ರ (Sudeep) ಕನ್ನಡ (Kannada) ಪ್ರೇಮದ ತಿಳಿಯದ ಕನ್ನಡಿಗರು ಕಡಿಮೆ. ವರ್ಷಗಳ ಹಿಂದೆಯೇ ತಮ್ಮ ನಟನೆ ಮೂಲಕ ಕನ್ನಡ ಕೀರ್ತಯನ್ನು ಗಡಿಯಾಚೆಗೆ ವಿಸ್ತರಿಸಿದ್ದ ಸುದೀಪ್, ಈಗಿನ ಪ್ಯಾನ್ ಇಂಡಿಯಾ (Pan India) ಕಾಲದಲ್ಲಿ ಕನ್ನಡ ಚಿತ್ರರಂಗದ ಸಾಧನೆಗಳನ್ನು ಸಂಭ್ರಮಿಸುತ್ತಿರುವ ಜೊತೆಗೆ ಸಾಧನೆಯಲ್ಲಿ ಪಾಲುದಾರರು ಆಗಿದ್ದಾರೆ. ಕೇವಲ ಸಿನಿಮಾಕ್ಕೆ ಮಾತ್ರ ಸೀಮಿತಗೊಳ್ಳದೆ ಅವಕಾಶ ಸಿಕ್ಕಾಗೆಲ್ಲ ಹೊರ ರಾಜ್ಯಗಳಲ್ಲಿ ಕನ್ನಡದ ಮಹತ್ವದ ಬಗ್ಗೆ, ಬಹುಭಾಷಾ ಸಂಸ್ಕೃತಿಯ ಸುಂದರತೆಯ ಬಗ್ಗೆ ಮಾತನಾಡುವ ಜೊತೆಗೆ ಹಿಂದಿ ಹೇರಿಕೆ ವಿರುದ್ಧವೂ ಗುಡುಗುತ್ತಿರುತ್ತಾರೆ.

ಕೆಲ ತಿಂಗಳ ಹಿಂದಷ್ಟೆ ಬಾಲಿವುಡ್​ನ ಖ್ಯಾತ ನಟ ಅಜಯ್ ದೇವಗನ್​ಗೆ ಭಾರತದ ಬಹುಭಾಷಾ ಸಂಸ್ಕೃತಿಯ ಬಗ್ಗೆ ಹಾಗೂ ಉತ್ತರದವರ ಹಿಂದಿ ಹೇರಿಕೆ ಮನಸ್ಥಿತಿಯ ಬಗ್ಗೆ ಟ್ವಿಟ್ಟರ್ ನಲ್ಲಿ ಪಾಠ ಮಾಡಿದ್ದ ನಟ ಸುದೀಪ್, ಇದೀಗ ಮುಂಬೈಗೆ ತೆರಳಿ ಅಲ್ಲಿನ ವೇದಿಕೆ ಮೇಲೆ ನಿಂತು ಎದುರಿಗಿದ್ದ ಹಿಂದಿವಾಲಾಗಳಿಗೆ ಕನ್ನಡ ಕಲಿಯಿರಿ ಎಂದಿದ್ದಾರೆ.

ಆಗಿರುವುದಿಷ್ಟು, ಉಪೇಂದ್ರ ನಟಿಸಿ ಆರ್ ಚಂದ್ರು ನಿರ್ದೇಶಿಸಿರುವ ಕನ್ನಡದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ನಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದ ಪ್ರಚಾರಕ್ಕೆ ಚಿತ್ರತಂಡದ ಜೊತೆ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಚಿತ್ರತಂಡ ಸಿನಿಮಾದ ಬಗ್ಗೆ ಮಾತನಾಡಿದ್ದು, ಆರ್.ಚಂದ್ರು ಅವರ ಸರದಿ ಬಂದಾಗ ಅವರು ಕನ್ನಡದಲ್ಲಿಯೇ ಮಾತನಾಡಲು ಆರಂಭಿಸಿದರು. ”ಸುದೀಪ್, ಉಪೇಂದ್ರ, ಶಿವಣ್ಣ ಅವರ ಅಭಿಮಾನಿ ನಾನು. ಅವರೊಟ್ಟಿಗೆ ಒಂದು ಫೋಟೊ ತೆಗೆದುಕೊಂಡರೆ ಸಾಕು ಎಂದುಕೊಂಡಿದ್ದವನು ನಾನು ಆದರೆ ಅವರು ಕೊಟ್ಟಂತಹಾ ಪ್ರೀತಿ, ನನ್ನ ಮೇಲಿಟ್ಟ ವಿಶ್ವಾಸದಿಂದಲೇ ಕಬ್ಜ ಸಿನಿಮಾ ಆಗಿದೆ” ಎಂದರು.

ಮುಂದುವರೆದು, ”ಕಬ್ಜ’ ಸಿನಿಮಾವನ್ನು ನಾನು ಮಾಡಿದ್ದಲ್ಲ. ಯಾವುದೋ ಒಂದು ಶಕ್ತಿ ನನ್ನಿಂದ ಈ ಸಿನಿಮಾವನ್ನು ಮಾಡಿಸಿದೆ. ಇಷ್ಟು ದೊಡ್ಡ ಸ್ಟಾರ್​ಗಳು ಅಲ್ಲಿಂದ ಇಲ್ಲಿಯವರೆಗೆ ಬಂದು ಬೆಂಬಲಿಸುತ್ತಿರುವುದು ಪುಣ್ಯ. 17 ರಂದು ಸಿನಿಮಾ ಬಿಡುಗಡೆ ಆದ ಮೇಲೆ ನಾನು ಮಾತನಾಡುತ್ತೀನಿ. ಕಬ್ಜ ಸಿನಿಮಾ ನಾನೊಬ್ಬನೆ ಮಾಡಿದ್ದಲ್ಲ. ಇದೊಂದು ಟೀಂ ವರ್ಕ್. ನಟರು, ತಂತ್ರಜ್ಞರು ಸೇರಿ ಮಾಡಿದ ಸಿನಿಮಾ ಎಂದು ವಿನಮ್ರತೆಯಿಂದ ಹೇಳಿದರು.

ಚಂದ್ರು ಮಾತುಮುಗಿಸಿದ ಕೂಡಲೇ ಪಕ್ಕದಲ್ಲಿಯೇ ಇದ್ದ ಸುದೀಪ್, ಇವರ ಮಾತನ್ನು ನಾನು ತರ್ಜುಮೆ ಮಾಡುತ್ತೇನೆ ಎಂದು ಹೇಳಿ, ಇವರು ಬಹಳ ವಿಶಾಲ ಅರ್ಥದಲ್ಲಿ ಹೇಳಿದ್ದೇನೆಂದರೆ ಬೇಗ ಕನ್ನಡ ಕಲಿಯಿರಿ ಎಂದು ಪಂಚ್ ಹೊಡೆದರು. ಸುದೀಪ್​ರ ಮಾತು ಕೇಳಿ ವೇದಿಕೆ ಮೇಲಿದ್ದವರು ಜೋರು ಚಪ್ಪಾಳೆ ಹೊಡೆದರೆ ಕೆಳಗಿದ್ದವರು ಪೆಚ್ಚಾದರು.

ಅಜಯ್ ದೇವಗನ್ ಜೊತೆಗಿನ ಸುದೀಪ್​ರ ಟ್ವೀಟ್ ಜಗಳದಲ್ಲಿ ಸುದೀಪ್​ರ ವಾದ ಇದೇ ಆಗಿತ್ತು. ”ನನಗೆ ಹಿಂದಿ ಬರುತ್ತದೆ ಎಂದು ನೀವೇ ನಿಶ್ಚಯಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿದಿರಿ, ನಿಮಗೆ ಹಾಗೆ ಅನ್ನಿಸಲು ಕಾರಣವಾದರೂ ಏನು? ನಿಮ್ಮ ಭಾಷೆ ಸುಪೀರಿಯರ್ ಎಂದೇ, ಅದೇ ಒಂದೊಮ್ಮೆ ನಿಮ್ಮ ಹಿಂದಿ ಟ್ವೀಟ್​ಗೆ ನಾನು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತಿತ್ತು? ನನಗೆ ಹಿಂದಿ ಬರುವಂತೆ ನಿಮಗೆ ಕನ್ನಡ ಏಕೆ ಬರುವುದಿಲ್ಲ? ನಾವೂ ಭಾರತೀಯರೆ, ನಮ್ಮದೂ ಭಾರತದ ಭಾಷೆಯೇ ಅಲ್ಲವೆ ಎಂಬುದು ಸುದೀಪ್ ಪ್ರಶ್ನೆಯ ತಾತ್ಪರ್ಯವಾಗಿತ್ತು.

ಸುದೀಪ್ ಅವರು ಉತ್ತರ ಭಾರತದಲ್ಲಿ ಸೇರಿದಂತೆ ನೆರೆ-ಹೊರೆಯ ರಾಜ್ಯಗಳಲ್ಲಿ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ಆಯಾ ರಾಜ್ಯಗಳ ಭಾಷೆಗೆ ಗೌರವ ನೀಡುತ್ತಲೇ ಕನ್ನಡದ ಬಗ್ಗೆ ಹೆಮ್ಮೆಯ ನುಡಿಗಳನ್ನಾಡುತ್ತಲೇ ಬಂದಿದ್ದಾರೆ. ಮುಂಬೈ ವೇದಿಕೆ ಮೇಲೆ ನಿಂತು ಹಿಂದಿವಾಲಾಗಳಿಗೆ ಕನ್ನಡ ಕಲಿಯಿರಿ ಎಂದು ಸುದೀಪ್ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Fri, 10 March 23