ಆಫರ್ ಬಂದಿತ್ತು ಆದರೆ, ನಾನು ಇರುವವರೆಗೆ ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಬರಲ್ಲ: ಸುಮಲತಾ
ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶಿಸುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಅವರ ತಾಯಿ, ಸಂಸದೆ ಸುಮಲತಾ ಅಂಬರೀಶ್.
ನಟಿ, ಸಂಸದೆ ಸುಮಲತಾ ಅಂಬರೀಶ್ (Sumaltha Ambareesh) ಇಂದು ಅಧಿಕೃತವಾಗಿ ತಮ್ಮ ಬೆಂಬಲವನ್ನು ಬಿಜೆಪಿಗೆ ಘೋಷಿಸಿದ್ದು, ಈಗಲೇ ಬಿಜೆಪಿ ಸೇರುವುದಕ್ಕೆ ಕೆಲವು ಕಾನೂನು ತೊಡಕುಗಳಿದ್ದು ಅವುಗಳು ನಿವಾರಣೆಯಾದ ಬಳಿಕ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯೂ ಆಗಲಿರುವುದಾಗಿ ತಿಳಿಸಿದ್ದಾರೆ. ಈ ನಡುವೆ ಅವರ ಪುತ್ರ ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಬರುವ ಸುದ್ದಿಗಳು ಹರಿದಾಡಿದ್ದವು ಆ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ ಸುಮಲತಾ.
ಇಂದು (ಮಾರ್ಚ್ 10) ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸುಮಲತಾ, ”ಅಭಿಷೇಕ್ಗೆ ಟಿಕೆಟ್ ಕೊಡಿ ಎಂದು ನಾನು ಯಾರ ಬಳಿಯೂ ಕೇಳಿಲ್ಲ” ಎಂದು ಚಾಮುಂಡಿ ತಾಯಿಯ ಮೇಲೆ ಪ್ರಮಾಣ ಮಾಡಿದ್ದಾರೆ. ”ಯಾರ ಹತ್ತಿರವೂ ಹೋಗಿ ಅಭಿಷೇಕ್ ಅಂಬರೀಶ್‌ಗೆ ಟಿಕೆಟ್ ಕೊಡಿ ಅನ್ನೋ ಮಾತನ್ನು ಕೇಳಿಲ್ಲ ಇದು ತಾಯಿ ಚಾಮುಂಡೆ ಮೇಲೆ ಆಣೆ ಒಂದೊಮ್ಮೆ ನಾನು ಕೇಳಿದ್ದೇ ಆದರೆ ಆ ತಾಯಿಯೇ ಉತ್ತರ ಕೊಡುತ್ತಾಳೆ. ಯಾರ ಹತ್ತಿರವಾದರೂ ಹೋಗಿ ನಾನು, ಅಭಿಷೇಕ್ ಅಂಬರೀಶ್ ಭವಿಷ್ಯಕ್ಕೆ ಏನು ಮಾಡಿಕೊಡುತ್ತೀರಾ ಅನ್ನೋ ಮಾತುಗಳನ್ನು ಆಡಿದ್ದರೆ, ನಾನು ಅಂಬರೀಶ್ ಪತ್ನಿಯಾಗಿ ಇರುವುದಕ್ಕೆ ಲಾಯಕ್ಕೇ ಅಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ ಸುಮಲತಾ.
”ಮಂಡ್ಯದ ಅಭಿಮಾನಿಗಳು ಅವನನ್ನು ಕರೆಯುತ್ತಿರುತ್ತಾರೆ ಹಾಗಾಗಿ ಮದ್ದೂರು ಅಲ್ಲಿ ಇಲ್ಲಿ ಕಾರ್ಯಕ್ರಮಕ್ಕೆ ಹಾಜರಾಗುತ್ತಾನೆ, ಇಲ್ಲವಾದರೆ ನಾನು ಹೋಗುತ್ತೇನೆ. ಆದರೆ ಒಂದು ವಿಷಯವಂತೂ ಸ್ಪಷ್ಟ ನಾನು ರಾಜಕೀಯದಲ್ಲಿ ಇರುವವರೆಗೆ ನನ್ನ ಮಗ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ” ಎಂದಿದ್ದಾರೆ ನಟಿ ಸುಮಲತಾ.
ಇದೇ ವೇಳೆ ಮತ್ತೊಂದು ಪ್ರಮುಖ ವಿಷಯ ಬಹಿರಂಗಗೊಳಿಸಿದ ಸುಮಲತಾ, ”ನನ್ನ ಮಗನಿಗೆ ಎರಡು ಪಕ್ಷಗಳು ಆಫರ್ ನೀಡಿದವು. ಅಭಿಷೇಕ್ ಅನ್ನು ಕರೆತರುವಂತೆ ಎರಡು ರಾಜಕೀಯ ಪಕ್ಷಗಳು ಕೇಳಿದವು. ಅಭಿಷೇಕ್ ಒಪ್ಪುವುದಾದರೆ ಮಂಡ್ಯ ಅಥವಾ ಮದ್ದೂರಿನಿಂದ ಟಿಕೆಟ್ ನೀಡುವುದಾಗಿಯೂ ಹೇಳಿದವು. ಸ್ವತಃ ಅಭಿಷೇಕ್ಗೂ ಆಫರ್ ನೀಡಲಾಗಿತ್ತು, ಆದರೆ ಅವನು, ನನ್ನ ತಾಯಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಒಂದೊಮ್ಮೆ ನಾನು ರಾಜಕೀಯ ಪ್ರವೇಶಿಸಬೇಕೆಂದರೆ ಯಾವುದಾದರೂ ಪಕ್ಷದಲ್ಲಿ ಮೊದಲು ಕಾರ್ಯಕರ್ತನಾಗಿ ಕೆಲಸ ಮಾಡಿ ಆ ನಂತರ ಚುನಾವಣೆ ಬಗ್ಗೆ ಯೋಚಿಸುತ್ತೇನೆ ಎಂದು ಉತ್ತರ ನೀಡಿದ್ದಾನೆ” ಎಂದಿದ್ದಾರೆ.
ನಟ ಅಭಿಷೇಕ್ ಅಂಬರೀಶ್ ಬಿಜೆಪಿ ಸೇರಲಿದ್ದಾರೆ ಎಂಬ ಬಗ್ಗೆ ಜೋರಾದ ಚರ್ಚೆ ಎದ್ದಿತ್ತು, ಕೆಲವು ದಿನಗಳ ಹಿಂದೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಅಭಿಷೇಕ್ ಅವರೊಟ್ಟಿಗೆ ಮಾತುಕತೆ ಮಾಡಿದ್ದೇವೆ, ಅವರು ಬಿಜೆಪಿ ಸೇರಲಿದ್ದಾರೆ, ಸಿಹಿ ಸುದ್ದಿ ನೀಡಲಿದ್ದಾರೆ ಎಂದಿದ್ದರು. ಆದರೆ ಈಗ ಸ್ವತಃ ಅಭಿಷೇಕ್ರ ತಾಯಿ ಸುಮಲತಾ, ಅಭಿಷೇಕ್ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಭಿಷೇಕ್ ಪ್ರಸ್ತುತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮುಗಿಸಿದ್ದಾರೆ. ಕಾಳಿ ಹಾಗೂ ಮಹೇಶ್ ಕುಮಾರ್ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Fri, 10 March 23