ಮೆಚ್ಚುಗೆ ಪಡೆದ ಕನ್ನಡದ 19.20.21. ಚಿತ್ರಕ್ಕಿಲ್ಲ ಶೋ; ಪಿವಿಆರ್ ವಿರುದ್ಧ ಮಂಸೋರೆ ಅಸಮಾಧಾನ
Director Mansore: ಬೆಂಗಳೂರಲ್ಲಿ ಪರ ಭಾಷೆಯ ಸಿನಿಮಾಗಳಿಗೆ ಮಣೆ ಹಾಕುವ ಸಂಸ್ಕೃತಿ ಹೆಚ್ಚಾಗಿದೆ. ಕನ್ನಡ ಚಿತ್ರಗಳನ್ನು ಗೌರವಿಸದೆ, ಪರಭಾಷೆಯ ಸಿನಿಮಾಗಳ ಮೆರವಣಿಗೆ ಮಾಡಿದರೆ ಕೋಪ ಬರೋದು ಸಹಜ.
ಮಂಸೋರೆ (Mansore) ಅವರ ನಿರ್ದೇಶನದಲ್ಲಿ ಮೂಡಿಬಂದ ‘19.20.21.’ ಚಿತ್ರ ಜನ ಮನ್ನಣೆ ಪಡೆದುಕೊಂಡಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಖ್ಯಾತ ನಾಮರು ಈ ಚಿತ್ರವನ್ನು ಹೊಗಳಿದ್ದಾರೆ. ಇತ್ತೀಚೆಗಷ್ಟೇ ಡಾಲಿ ಧನಂಜಯ್ (Dhananjay) ಅವರು ಈ ಚಿತ್ರವನ್ನು ನೋಡಿ ಮನಸ್ಫೂರ್ತಿಯಾಗಿ ಮೆಚ್ಚುಗೆ ಸೂಚಿಸಿದ್ದರು. ಇಷ್ಟೆಲ್ಲ ಪ್ರಶಂಸೆ ಸಿಕ್ಕರೂ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾಗೆ ಶೋ ಸಿಗುತ್ತಿಲ್ಲ. ಕನ್ನಡ ಚಿತ್ರಗಳ ವಿಚಾರದಲ್ಲಿ ಮಲ್ಟಿಪ್ಲೆಕ್ಸ್ನವರು ಈ ರೀತಿ ಮಾಡೋದು ಏಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಮಂಸೋರೆ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಲ್ಲಿ ಪರ ಭಾಷೆಯ ಸಿನಿಮಾಗಳಿಗೆ ಮಣೆ ಹಾಕುವ ಸಂಸ್ಕೃತಿ ಹೆಚ್ಚಾಗಿದೆ. ಕನ್ನಡ ಚಿತ್ರಗಳನ್ನು ಗೌರವಿಸದೆ, ಪರಭಾಷೆಯ ಸಿನಿಮಾಗಳ ಮೆರವಣಿಗೆ ಮಾಡಿದರೆ ಕೋಪ ಬರೋದು ಸಹಜ. ಈಗ ಆಗಿರುವುದೂ ಅದೇ. ‘19.20.21.’ ಚಿತ್ರ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದ ಹೊರತಾಗಿಯೂ ಮಲ್ಟಿಪ್ಲೆಕ್ಸ್ನಲ್ಲಿ ಈ ಚಿತ್ರಕ್ಕೆ ಒಂದೇ ಒಂದು ಶೋ ಸಿಕ್ಕಿಲ್ಲ. ಈ ಬಗ್ಗೆ ಪಿವಿಆರ್ ಜೊತೆ ಹಂಚಿಕೆದಾರರು ಮಾತನಾಡೋಣ ಎಂದು ಕಾಲ್ ಮಾಡಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಮಂಸೋರೆ ಟ್ವೀಟ್ ಮಾಡಿದ್ದಾರೆ.
‘ಪಿವಿಆರ್ನವರೇ ದಯವಿಟ್ಟು ನಿಮ್ಮ ಬೆಂಗಳೂರಿನ ಮುಖ್ಯಸ್ಥರಿಗೆ ಕರೆ ಸ್ವೀಕರಿಸಲು ಹೇಳಿ. ಅವರು ವಿತರಕರ ಕರೆಗೆ ಪ್ರತಿಕ್ರಿಯಿಸುತ್ತಿಲ್ಲ. ಕನ್ನಡ ಸಿನಿಮಾಗಳ ಬಗ್ಗೆ ಯಾಕೆ ಈ ನಿರ್ಲಕ್ಷ್ಯ? ಒಳ್ಳೆಯ ವಿಮರ್ಶೆ ಪಡೆದ ನಮ್ಮ ‘19.20.21’ ಚಿತ್ರಕ್ಕೆ ಒಂದೇ ಒಂದು ಥೀಯೇಟರ್ ನೀಡುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ ಅವರು.
ಇದನ್ನೂ ಓದಿ: 19.20.21: ‘ನಾನು ಈ ವರ್ಷ ನೋಡಿದ ಬೆಸ್ಟ್ ಸಿನಿಮಾ 19.20.21’: ಮನಸಾರೆ ಹೊಗಳಿದ ಡಾಲಿ ಧನಂಜಯ್
‘19.20.21’ ಸಿನಿಮಾ ಕಾಡು ಮಕ್ಕಳ ಕಥೆ. ಸದ್ಯ ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ಜೆಪಿ ನಗರದ ಸಿದ್ದೇಶ್ವರದಲ್ಲಿ ಎರಡು ಶೋ ಹಾಗೂ ವೀರೇಶ್ ಸಿನಿಮಾಸ್ನಲ್ಲಿ ಒಂದು ಶೋ ನೀಡಲಾಗಿದೆ. ಉಳಿದಂತೆ ಯಾವುದೇ ಮಲ್ಟಿಪ್ಲೆಕ್ಸ್ನಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿಲ್ಲ. ಈ ಬಗ್ಗೆ ಸಿನಿಪ್ರಿಯರ ವಲಯದಿಂದಲೂ ವಿರೋಧ ವ್ಯಕ್ತವಾಗಿದೆ.
.. _ @PicturesPVR please tell your Bangalore head to pick the call, they are not responding to distributer calls. Why this negligence about Kannada movies. After receiving wide positive reviews, you are not giving a single show to our movie 19.20.21.
— ಮಂಸೋರೆ/ManSoRe (@mansore25) March 9, 2023
‘19.20.21’ ಚಿತ್ರದ ಬಗ್ಗೆ ಈಗಾಗಲೇ ಒಳ್ಳೆಯ ಟಾಕ್ ಶುರುವಾಗಿದೆ. ಇಂಥ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್ನಲ್ಲಿ ಶೋ ಸಿಕ್ಕರೆ ಹೆಚ್ಚು ಜನರು ಬಂದು ಸಿನಿಮಾ ನೋಡುತ್ತಾರೆ. ವೀಕೆಂಡ್ ಸಂದರ್ಭದಲ್ಲಿ ಶೋಗಳು ಹೌಸ್ಫುಲ್ ಆಗುವ ಸಾಧ್ಯತೆ ಇರುತ್ತದೆ. ಒಳ್ಳೆಯ ವಿಮರ್ಶೆ ಪಡೆದ ಸಿನಿಮಾ ಒಂದೇ ವಾರಕ್ಕೆ ಚಿತ್ರಮಂದಿರದಿಂದ ಕಾಲ್ಕೀಳುವ ಪರಿಸ್ಥಿತಿ ಬಂದರೆ ಕನ್ನಡ ಚಿತ್ರಗಳು ಹೇಗೆ ಗೆಲುವು ಕಾಣಬೇಕು ಎಂಬುದು ಜನಸಾಮಾನ್ಯರ ಪ್ರಶ್ನೆ.
ಸದ್ಯ ಮಂಸೋರೆ ಮಾಡಿದ ಟ್ವೀಟ್ಗೆ ಪಿವಿಆರ್ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಶನಿವಾರ (ಮಾರ್ಚ್ 11) ಹಾಗೂ ಭಾನುವಾರ (ಮಾರ್ಚ್ 12) ವೀಕೆಂಡ್. ಈ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್ನಲ್ಲಿ ಶೋ ಸಿಕ್ಕರೆ ಸಿನಿಮಾ ಹೆಚ್ಚು ಜನರನ್ನು ತಲುಪಲು ಸಹಕಾರಿ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:21 am, Fri, 10 March 23