19.20.21: ಹೊಸ ಕನ್ನಡ ಸಿನಿಮಾಕ್ಕೆ ಸಿಕ್ತು ಸೆಲೆಬ್ರಿಟಿಗಳ ಭರಪೂರ ಬೆಂಬಲ, ಪ್ರಶಂಸೆಯ ಸುರಿಮಳೆ
ಇತ್ತಿಚೆಗೆ ಬಿಡುಗಡೆ ಆದ ಕನ್ನಡದ ಹೊಸ ಸಿನಿಮಾ 19.20.21 ಅನ್ನು ಕೆಲವು ಸೆಲೆಬ್ರಿಟಿಗಳು ವೀಕ್ಷಿಸಿದ್ದು ಬಹುವಾಗಿ ಪ್ರಶಂಸಿಸಿದ್ದಾರೆ.
ಕನ್ನಡದಲ್ಲಿ ಸದಭಿರುಚಿಯ ಸಿನಿಮಾಗಳು, ಭಿನ್ನ ಕತೆಯುಳ್ಳ, ನೈಜತೆಗೆ ಹತ್ತಿರವಾದ ಸಿನಿಮಾಗಳು ಬರುವುದಿಲ್ಲವೆಂಬ ಒಣ ದೂರಿನ ನಡುವೆ ಈ ಎಲ್ಲ ಅಂಶಗಳು ಒಳಗೊಂಡಿರುವ ಜೊತೆಗೆ ಸಂವಿಧಾನದ ಶಕ್ತಿ, ಘನತೆ ಸಾರುವ ಹೋರಾಟದ ಕತೆಯುಳ್ಳ ಸಿನಿಮಾ ಕನ್ನಡದಲ್ಲಿ ಕಳೆದ ಶುಕ್ರವಾರ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಮಾತ್ರವೇ ಅಲ್ಲದೆ ಸಿನಿಮಾ ಸೆಲೆಬ್ರಿಟಿಗಳಿಂದಲೂ ಬಹು ಪ್ರಶಂಸೆಗೆ ಪಾತ್ರವಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ (Mansore) ನಿರ್ದೇಶಿಸಿರುವ ‘19.20.21’ ಹೆಸರಿನ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಸಾಮಾಜಿಕ ಹೋರಾಟಗಾರರು, ಕೆಲವು ಸಾಹಿತಗಳ ಜೊತೆಗೆ ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಹ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದಾರೆ.
ಸಿನಿಮಾದ ಬಗ್ಗೆ ವ್ಯಕ್ತವಾಗಿರುವ ಸಕಾರಾತ್ಮಕ ವಿಮರ್ಶೆಗಳನ್ನು ಗಮನಿಸಿ ನಟ ಡಾಲಿ ಧನಂಜಯ್ (Daali Dhananjay) ಇಂದು (ಮಾರ್ಚ್ 06) ಸಿನಿಮಾ ವೀಕ್ಷಿಸುತ್ತಿದ್ದಾರೆ. ಇನ್ನು ಬಹುಭಾಷಾ ನಟ ಪ್ರಕಾಶ್ ರೈ, ಸಿನಿಮಾ ತಂಡಕ್ಕೆ ಶುಭ ಹಾರೈಕೆ ತಿಳಿಸಿರುವ ಜೊತೆಗೆ ”ನಾನು ಪ್ರಯಾಣದಲ್ಲಿದ್ದೀನಿ ಆದಷ್ಟು ಬೇಗ ಸಿನಿಮಾ ನೋಡಿ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ” ಎಂದಿದ್ದಾರೆ.
ಕನ್ನಡತಿ ಧಾರಾವಾಹಿ ನಟಿ ರಂಜನಿ ರಾಘವನ್ ಸಹ ಸಿನಿಮಾ ವೀಕ್ಷಿಸಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ”19.20.21 ಒಂದು ಅದ್ಭುತವಾದ ಸಿನಿಮಾ. ಇಂಥಹದ್ದೊಂದು ಕಂಟೆಂಟ್ ಕನ್ನಡದಲ್ಲಿ ಬಂದಿರುವುದು ನನಗೆ ವೈಯಕ್ತಿಕವಾಗಿ ಬಹಳ ಹೆಮ್ಮೆಯಾಗುತ್ತಿದೆ. ಇದೊಂದು ಆದಿವಾಸಿ ಹುಡುಗನೊಬ್ಬನ ಕತೆ. ಆದಿವಾಸಿಗಳ ಬದುಕು, ಅಲ್ಲಿನ ಜನರ ಸಮಸ್ಯೆಗಳ ಬಗೆಗಿನ ಸಿನಿಮಾ. ನಮ್ಮ ಸಂವಿಧಾನದ ಬಗ್ಗೆ ಸಾಕಷ್ಟು ಉಪಯುಕ್ತ ಮಾಹಿತಿ ಸಿನಿಮಾದಲ್ಲಿದೆ. ಈ ಸಿನಿಮಾದ ನಿರ್ದೇಶಕ ಮಂಸೋರೆ, ಈ ಹಿಂದೆ ಸಹ ‘ಆಕ್ಟ್ 1978’, ‘ನಾತಿಚರಾಮಿ’ ಅಂಥಹಾ ಸಿನಿಮಾಗಳ ಮೂಲಕ ತಮ್ಮ ಪ್ರತಿಭೆ ಸಾಬೀತುಪಡಿಸಿಕೊಂಡಿದ್ದಾರೆ. ಇಂಥಹಾ ಸಿನಿಮಾಗಳನ್ನು ಬೆಂಬಲಿಸಿದರೆ ಇನ್ನಷ್ಟು ಈ ರೀತಿಯ ಸಿನಿಮಾಗಳು ಬರಲು ಸಾಧ್ಯ” ಎಂದಿದ್ದಾರೆ.
ಇನ್ನು ನಟಿ ಪೂಜಾ ಗಾಂಧಿ ಸಹ ಸಿನಿಮಾವನ್ನು ಹೊಗಳಿ ಪೋಸ್ಟ್ ಮಾಡಿದ್ದು, ”ನಕ್ಸಲರ ಮತ್ತು ಪೋಲಿಸರ ಹೋರಾಟದಲ್ಲಿ ಸಿಲುಕಿ ಜೀವನದ ಅರ್ಥ ಕಳೆದುಕೊಳ್ಳುವ ಆದಿವಾಸಿಗಳು , ಅಧಿಕಾರ, ದರ್ಪ, ರಾಜಕೀಯ, ಕಾಡು, ಕೋರ್ಟು, ಕಾನೂನುಗಳ ಮಧ್ಯೆ, ಸಂಸತ್ತು ಮತ್ತು ಸಂವಿಧಾನವನ್ನು ಮೀರಿದ ಮಾನವತೆ ಮತ್ತು ಕಾರುಣ್ಯದ ಕಥೆ” ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ನಿರ್ದೇಶಕ ಬಿ.ಎಂ.ಗಿರಿರಾಜ್ ಸಹ ಸಿನಿಮಾವನ್ನು ಮೆಚ್ಚಿ ಪೋಸ್ಟ್ ಹಾಕಿದ್ದಾರೆ. ಆ ದಿನಗಳು ನಿರ್ದೇಶಕ ಚೈತನ್ಯ ಸಹ ಸಿನಿಮಾವನ್ನು ಮೆಚ್ಚಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘19.20.21’ ಸಿನಿಮಾವು ದಶಕದ ಹಿಂದೆ ಕರ್ನಾಟಕದಲ್ಲಿಯೇ ನಡೆದ ನೈಜ ಘಟನೆಯನ್ನು ಆಧರಿಸಿದೆ. ಯುವವಿದ್ಯಾರ್ಥಿ ಹಾಗೂ ಅವರ ತಂದೆಯನ್ನು ನಕ್ಸಲ್ ನಿಗ್ರಹ ದಳವು ಬಂಧಿಸಿ ಅವರ ಮೇಲೆ ಯುಎಪಿಎ ಅಡಿ ಕೇಸು ದಾಖಲಿಸಿ ಹಿಂಸೆ ನೀಡುತ್ತಾರೆ. ನ್ಯಾಯಕ್ಕಾಗಿ ಆ ತಂದೆ-ಮಗ ನಡೆಸುವ ಹೋರಾಟದ ಕತೆಯೇ ಈ ಸಿನಿಮಾ.
ಮಂಸೋರೆ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಶೃಂಗ ಹಾಗೂ ಮಹದೇವ ಹಡಪದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಎಂಡಿ ಪಲ್ಲವಿ, ರಾಜೇಶ್ ನಟರಂಗ, ಬಾಲಾಜಿ ಮನೋಹರ್, ಅವಿನಾಶ್ ಇನ್ನಿತರರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ದೇವರಾಜ್ ಆರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:15 pm, Mon, 6 March 23