ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ದರ್ಶನ್ (Darshan Thoogudeepa) ಬಂಧನವಾಗಿ ವಾರವಾಗಿದೆ. ಈಗ ನಿಧಾನಕ್ಕೆ ಚಿತ್ರರಂಗದ ಗಣ್ಯರು ಒಬ್ಬೊಬ್ಬರಾಗಿ ಕೊಲೆ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ದರ್ಶನ್ರ ಆಪ್ತರು ಸಹ ಕೊನೆಗೂ ಪ್ರತಿಕ್ರಿಯಿಸಲು ಆರಂಭಿಸಿದಂತಿದೆ. ದರ್ಶನ್ರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ, ದರ್ಶನ್ ರನ್ನು ಗಾಡ್ಫಾದರ್, ಗುರು ಎಂದೇ ಭಾವಿಸಿದ್ದ, ಈ ಹಿಂದೆ ಕೆಲವು ವಿವಾದಗಳಾದ ದರ್ಶನ್ ಪರವಹಿಸಿದ್ದ ನಟಿ ರಚಿತಾ ರಾಮ್ ಇದೀಗ ಮೊದಲ ಬಾರಿಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣ ವಿಷಯವಾಗಿ ತುಟಿ ಬಿಚ್ಚಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರೇಣುಕಾ ಸ್ವಾಮಿ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯವನ್ನು ನಟಿ ರಚಿತಾ ರಾಮ್ ಹಂಚಿಕೊಂಡಿದ್ದಾರೆ, ‘ಈ ನೋಟ್ ಅನ್ನು ನಾನು ನಟಿಯಾಗಿ ಅಲ್ಲ ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದಾನೆ. ಇತ್ತಿಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು, ಮೊದಲಿಗೆ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನಿಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನನಗಿದೆ’ ಎಂದಿದ್ದಾರೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆ ಕೇಸ್‌ನ ಆರೋಪಿ ದರ್ಶನ್ ಬಗ್ಗೆ ಸುದೀಪ್ ಮೊದಲ ಮಾತು
ದರ್ಶನ್ ವಿಷಯವಾಗಿ ಮಾತನಾಡಿರುವ ರಚಿತಾ ರಾಮ್, ‘ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ಸರ್. ದರ್ಶನ್ ನನಗೆ ಗುರು ಸಮಾನರು, ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ. ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ.
ಏನಿದ್ದರೂ ಸತ್ಯ ಪೊಲೀಸ್ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೆ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತಿರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತಿರಿ ಎಂದು ಆಶಿಸುತ್ತೇನೆ’ ಎಂದು ರಚಿತಾ ರಾಮ್ ಹೇಳಿದ್ದಾರೆ.
ಈ ಹಿಂದೆ ಯೂಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಮಾತನಾಡಿದ್ದ ರಚಿತಾ ರಾಮ್, ದರ್ಶನ್, ಮಾಧ್ಯಮದವರ ಬಗ್ಗೆ ಆಡಿದ್ದಾರೆ ಎನ್ನಲಾದ ಅತ್ಯಂತ ತುಚ್ಛ ಹೇಳಿಕೆಗಳನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ‘ದರ್ಶನ್ ಅಂಥಹಾ ಮಾತುಗಳನ್ನು ಆಡಿದ್ದಾರೆ ಎಂದಾದರೆ, ಅವರನ್ನು ಎಷ್ಟು ಕೋಪಗೊಳಿಸಿರಬೇಡ. ಈಗ ದರ್ಶನ್ ಅವರ ಆಡಿಯೋ ಅಷ್ಟೆ ವೈರಲ್ ಆಗಿದೆ. ಆದರೆ ದರ್ಶನ್ ಏಕೆ ಹಾಗೆ ಮಾತನಾಡಿದರು, ಅದಕ್ಕೆ ಕಾರಣ ಏನು? ಎಂಬುದು ಸಹ ತಿಳಿದುಕೊಳ್ಳಬೇಕು. ಅಲ್ಲದೆ ದರ್ಶನ್ ಧ್ವನಿಯನ್ನು ಯಾರಾದರೂ ಮಿಮಿಕ್ರಿ ಮಾಡಿರುವ ಸಾಧ್ಯತೆಯೂ ಇದೆ’ ಎಂದಿದ್ದರು.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದಾರೆ. ಅವರೊಟ್ಟಿಗೆ ನಟಿ ಪವಿತ್ರಾ ಗೌಡ ಹಾಗೂ ಇನ್ನೂ 19 ಮಂದಿ ಆರೋಪಿಗಳಿದ್ದಾರೆ. ಜೂನ್ 20 ರವರೆಗೆ ದರ್ಶನ್ ಪೊಲೀಸರ ಕಸ್ಟಡಿಯಲ್ಲಿರಲಿದ್ದು, ಅದಾದ ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ