ಕೊವಿಡ್ ಸಂಕಷ್ಟದಲ್ಲಿದ್ದವರಿಗೆ ಊಟ ಹಂಚಲು ಸ್ವಂತ ಪಾರ್ಟಿ ಹಾಲ್ಅನ್ನು ಕಿಚನ್ ಆಗಿ ಬದಲಾಯಿಸಿದ ನಟಿ ರಾಗಿಣಿ
Ragini Dwivedi: ಕೊರೊನಾ ಮೊದಲನೇ ಅಲೆ ಕಾಣಿಸಿಕೊಂಡಾಗ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ರಾಗಿಣಿ ಟೊಂಕ ಕಟ್ಟಿ ನಿಂತಿದ್ದರು. ಎರಡನೇ ಅಲೆ ಸಂದರ್ಭದಲ್ಲೂ ರಾಗಿಣಿ ಸುಮ್ಮನೆ ಕೂತಿಲ್ಲ.
ಕೊವಿಡ್ ಸಂಕಷ್ಟದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಮುಂದೆ ಬಂದು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕೆಲವರು ಆರ್ಥಿಕವಾಗಿ ಸಹಾಯ ಮಾಡಿದರೆ, ಇನ್ನೂ ಕೆಲವರು ತಾವೇ ಮನೆಯಿಂದ ಹೊರಬಂದು ಜನಸಾಮಾನ್ಯರ ಸಂಕಷ್ಟಕ್ಕೆ ಕಿವಿಯಾಗಿದ್ದಾರೆ. ಇದಕ್ಕೆ ನಟಿ ರಾಗಿಣಿ ದ್ವಿವೇದಿ ಕೂಡ ಹೊರತಾಗಿಲ್ಲ. ಕೊವಿಡ್ ಸಂಕಷ್ಟದಲ್ಲಿರುವವರಿಗೆ ಅವರು ನಿರಂತರವಾಗಿ ಸಹಾಯ ಮಾಡುತ್ತಿದ್ದಾರೆ. ವಿಶೇಷ ಎಂದರೆ ತಮ್ಮ ಪಾರ್ಟಿ ಹಾಲ್ಅನ್ನು ಊಟ ತಯಾರಿಸಿ ಹಂಚಲು ರಾಗಿಣಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಕೊರೊನಾ ಮೊದಲನೇ ಅಲೆ ಕಾಣಿಸಿಕೊಂಡಾಗ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ರಾಗಿಣಿ ಟೊಂಕ ಕಟ್ಟಿ ನಿಂತಿದ್ದರು. ಎರಡನೇ ಅಲೆ ಸಂದರ್ಭದಲ್ಲೂ ರಾಗಿಣಿ ಸುಮ್ಮನೆ ಕೂತಿಲ್ಲ. ಬೆಂಗಳೂರಿನಲ್ಲಿ ಅಗತ್ಯವಿರುವವರಿಗೆ ಊಟ ಹಾಗೂ ದಿನಸಿ ಹಂಚುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ತಮ್ಮ ಪಾರ್ಟಿ ಹಾಲ್ನಲ್ಲಿ ರಾಗಿಣಿ ಅಡುಗೆ ಸಿದ್ಧಪಡಿಸುತ್ತಿದ್ದಾರೆ. ನಂತರ ಊಟವನ್ನು ಅಗತ್ಯವಿರುವವರಿಗೆ ಸ್ವತಃ ತಾವೇ ತೆರಳಿ ಹಂಚುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಗಿಣಿ ‘ನನಗೆ ಈ ರೀತಿಯ ಒಳ್ಳೆಯ ಕೆಲಸ ಮಾಡಲು ಖಷಿಯಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಮಾತ್ರವಲ್ಲ, ಕೊರೊನಾ ನಂತರವೂ ನಾನು ಒಳ್ಳೆಯ ಕೆಲಸವನ್ನು ಮಾಡುತ್ತೇನೆ. ಈ ರೀತಿಯ ಕೆಲಸದಿಂದ ಮುಂದಿನ ಪೀಳಿಗೆಯವರಿಗೂ ಸ್ಫೂರ್ತಿ ಸಿಗಲಿದೆ’ ಎಂದು ಹೇಳಿಕೊಂಡಿದ್ದಾರೆ.
ಕೊರೊನಾ ವೈರಸ್ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಹಬ್ಬಿದೆ. ಇದರಿಂದ ಸಾವಿನ ಸಂಖ್ಯೆ ಕೂಡ ಹೆಚ್ಚಿದೆ. ಹೀಗಾಗಿ, ಚಿತಾಗಾರದಲ್ಲಿ ಕೆಲಸ ಮಾಡುವವರು ದಿನವಿಡೀ ಶ್ರಮಿಸುತ್ತಿದ್ದಾರೆ. ಇದು ರಾಗಿಣಿ ಗಮನಕ್ಕೆ ಬಂದಿದೆ. ಇತ್ತೀಚೆಗೆ ಬೆಂಗಳೂರಿನ ಚಿತಾಗಾರವೊಂದಕ್ಕೆ ತೆರಳಿ ಊಟ ಹಂಚುವ ಕೆಲಸ ಮಾಡಿದ್ದರು. ರಾಗಿಣಿ ಕೆಲ ದಿನಗಳ ಹಿಂದೆ ಪೊಲೀಸ್ ಸಿಬ್ಬಂದಿಗೆ ಊಟ ಹಂಚಿದ್ದರು.
ರಾಗಿಣಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಗಿಣಿ ಕೆಲಸವನ್ನು ನೋಡಿ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲೂ ರಾಗಿಣಿ ತಮ್ಮ ಕಾರ್ಯವನ್ನು ಮುಂದುವರಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Ragini Dwivedi: ಚಿತಾಗಾರದ ಸಿಬ್ಬಂದಿಗೆ ಆಸರೆಯಾದ ರಾಗಿಣಿ ದ್ವಿವೇದಿ; ನಟಿ ಕೆಲಸಕ್ಕೆ ಮೆಚ್ಚುಗೆ
ಯುಗಾದಿ ಹಬ್ಬದಲ್ಲೂ ರಾಗಿಣಿ, ಸಂಜನಾಗೆ ತಪ್ಪಲಿಲ್ಲ ಕಣ್ಣೀರು! ಕಿರುತೆರೆಗೆ ಬಂದ ನಟಿಯರು