ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಅದಿತಿ ಪ್ರಭುದೇವ (Aditi Prabhudeva) ಕೂಡ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿರುವ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಯಶಸ್ವಿ (ಯಶಸ್) ಎಂಬುವವರ ಜೊತೆ ಅವರು ಹಸೆಮಣೆ ಏರುತ್ತಿದ್ದಾರೆ. ಅವರಿಬ್ಬರ ಮದುವೆ (Aditi Prabhudeva Marriage) ದಿನಾಂಕ ನಿಗದಿ ಆಗಿದೆ. ನವೆಂಬರ್ 27ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಎಂಟ್ರಿ ನೀಡಲಿದೆ. ಅದಿತಿ ಪ್ರಭುದೇವ-ಯಶಸ್ವಿ ವಿವಾಹದ ಆಮಂತ್ರಣ ಪತ್ರಿಕೆಯ ಫೋಟೋ ಕೂಡ ಲಭ್ಯವಾಗಿದೆ. ಈ ಜೋಡಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟವರು ಅದಿತಿ ಪ್ರಭುದೇವ. 2017ರಲ್ಲಿ ಅವರ ಮೊದಲ ಸಿನಿಮಾ ‘ಧೈರ್ಯಂ’ ಬಿಡುಗಡೆ ಆಯಿತು. ಆ ಚಿತ್ರದಲ್ಲಿ ಅವರು ಅಜಯ್ ರಾವ್ ಜೊತೆ ನಟಿಸಿದ್ದರು. ಬಳಿಕ ‘ಬಜಾರ್’, ‘ಸಿಂಗ’, ‘ರಂಗನಾಯಕಿ’, ‘ಒಂಬತ್ತನೇ ದಿಕ್ಕು’, ‘ಓಲ್ಡ್ ಮಾಂಕ್’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಅದಿತಿ ಪ್ರಭುದೇವ ಮತ್ತು ಚಿರಂಜೀವಿ ಸರ್ಜಾ ಜೋಡಿಯಾಗಿ ನಟಿಸಿದ್ದ ‘ಸಿಂಗ’ ಚಿತ್ರದ ‘ಶಾನೆ ಟಾಪ್ ಆಗವ್ಳೆ..’ ಹಾಡು ಸಿಕ್ಕಾಪಟ್ಟೆ ವೈರಲ್ ಆಯಿತು. ನಂತರ ಅವರಿಗೆ ಹತ್ತು ಹಲವು ಅವಕಾಶಗಳು ಹರಿದುಬರಲು ಆರಂಭಿಸಿದವು.
ಅನೇಕ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿರುವಾಗಲೇ ಅದಿತಿ ಪ್ರಭುದೇವ ಅವರ ನಿಶ್ಚಿತಾರ್ಥದ ಸುದ್ದಿ ಹೊರಬಿತ್ತು. ಅದು ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿದ್ದಂತೂ ನಿಜ. ಚಿತ್ರರಂಗದಲ್ಲಿ ಈಗತಾನೇ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿರುವ ಅವರು ಏಕಾಏಕಿ ಮದುವೆ ನಿರ್ಧಾರ ಮಾಡಿದ್ದರಿಂದ ಒಂದು ವರ್ಗದ ಫ್ಯಾನ್ಸ್ ಬೇಸರ ಮಾಡಿಕೊಂಡರು. ಅದೇನೇ ಇರಲಿ, ಮದುವೆ ಎಂಬುದು ಅದಿತಿ ಅವರ ವೈಯಕ್ತಿಕ ನಿರ್ಧಾರ. ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಜತೆ ಅದಿತಿ ಪ್ರಭುದೇವ ಅವರು ಮದುವೆ ಆಗಲಿದ್ದಾರೆ. ಅದಿತಿ ಅವರನ್ನು ಮೊದಲು ಇಷ್ಟಪಟ್ಟವರು ಯಶಸ್ವಿ. ನಂತರ ಕುಟುಂಬದ ಹಿರಿಯರ ಮೂಲಕ ಅದಿತಿಗೆ ಈ ವಿಷಯ ತಿಳಿಯಿತು. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ನಡೆಯಿತು. ಈಗ ಮದುವೆ ದಿನಾಂಕ ಕೂಡ ನಿಗದಿ ಆಗಿದೆ.
ನಟನೆ ಮತ್ತು ಗ್ಲಾಮರ್ ಮೂಲಕ ಅದಿತಿ ಪ್ರಭುದೇವ ಅವರು ಬಣ್ಣದ ಲೋಕದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ‘ಅಂದೊಂದಿತ್ತು ಕಾಲ’, ‘ಮಾಫಿಯಾ’, ‘5ಡಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದೇ ತಿಂಗಳು ಮದುವೆ ಇರುವುದರಿಂದ ಅವರು ಒಂದಷ್ಟು ದಿನಗಳ ಕಾಲ ನಟನೆಯಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:28 pm, Thu, 3 November 22