ಗ್ರ್ಯಾಮಿ ವಿಜೇತ ಸಂಗೀತಗಾರ ರಿಕ್ಕಿ ಕೇಜ್​ಗೆ ದೆಹಲಿ ಏರ್​ಪೋರ್ಟ್​ನಲ್ಲಿ ಬೆದರಿಕೆ

|

Updated on: Jun 02, 2023 | 8:58 PM

Ricky Kej: ಮೂರು ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವ ಬೆಂಗಳೂರಿಗ ರಿಕ್ಕಿ ಕೇಜ್​ ಜೊತೆ ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ.

ಗ್ರ್ಯಾಮಿ ವಿಜೇತ ಸಂಗೀತಗಾರ ರಿಕ್ಕಿ ಕೇಜ್​ಗೆ ದೆಹಲಿ ಏರ್​ಪೋರ್ಟ್​ನಲ್ಲಿ ಬೆದರಿಕೆ
ರಿಕ್ಕಿ ಕೇಜ್
Follow us on

ಮೂರು ಗ್ರ್ಯಾಮಿ ಪ್ರಶಸ್ತಿ (Grammy Award) ವಿಜೇತ ಬೆಂಗಳೂರಿನ ಹೆಮ್ಮೆಯ ಸಂಗೀತಗಾರ ರಿಕ್ಕಿ ಕೇಜ್​ಗೆ (Ricky Kej) ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ಕಹಿ ಅನುಭವವಾಗಿದೆ. ವಿಮಾನಯಾನ ಸಂಸ್ಥೆಯೊಂದರ ಸಿಬ್ಬಂದಿ ಮತ್ತು ಮ್ಯಾನೇಜರ್ ರಿಕ್ಕಿ ಕೇಜ್​ ಜೊತೆಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಬೆದರಿಕೆ ಸಹ ಹಾಕಿದ್ದಾರೆ. ಈ ಬಗ್ಗೆ ರಿಕ್ಕಿ ಕೇಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಬಳಿಕ ವಿಮಾನಯಾನ ಸಂಸ್ಥೆಯು ರಿಕ್ಕಿ ಕೇಜ್​ ಬಳಿ ಕ್ಷಮೆ ಕೇಳಿದೆ.

ಆಗಿದ್ದಿಷ್ಟು, ದೆಹಲಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿಗೆ ಹೊರಟಿದ್ದ ರಿಕ್ಕಿ ಕೇಜ್, ಏರ್ ಇಂಡಿಯಾಗೆ ಸೇರಿದ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ ವಿಮಾನಯಾನ ಸಂಸ್ಥೆಯವರಿಗೆ ರಿಕ್ಕಿ ಕೇಜ್ ಅವರ ಟಿಕೆಟ್​ ಬಗ್ಗೆ ಗೊಂದಲ ಮೂಡಿದೆ. ರಿಕ್ಕಿ ಕೇಜ್ ಹಾಗೂ ಅವರೊಟ್ಟಿಗೆ ಮತ್ತೊಬ್ಬರನ್ನು ಸುಮಾರು 20 ನಿಮಿಷಗಳ ಕಾಲ ಕಾಯಿಸಿದ ಬಳಿಕ ರಿಕ್ಕಿ ಕೇಜ್ ಅವರ ಒಪ್ಪಿಗೆ ಸಹ ಪಡೆಯದೆ ಅವರಿಗೆ ಎಕಾನಮಿ ಕ್ಲಾಸ್ ಸೀಟು ನೀಡಲಾಗಿದೆ. ಈ ಬಗ್ಗೆ ರಿಕ್ಕಿ ಕೇಜ್ ಪ್ರಶ್ನಿಸಿದಾಗ ಸಿಬ್ಬಂದಿಗಳಿಂದ ಹಾರಿಕೆಯ, ಬೇಜವಾಬ್ದಾರಿ ಉತ್ತರ ದೊರೆತಿದೆ.

ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಲು ನೀಡಲಾಗಿದ್ದ ಹಣವನ್ನಾದರೂ ವಾಪಸ್ ಕೊಡಿ ಎಂದು ಕೇಳಿದಾಗ ಒಂದು ವಾರದ ಬಳಿಕ ಬರುತ್ತದೆಂದಿದ್ದಾರೆ, ಆ ಬಗ್ಗೆ ಲಿಖಿತ ಮಾಹಿತಿ ನೀಡಿ ಎಂದಾಗ ಸಿಬ್ಬಂದಿಯು ಜೋರು ದನಿಯಲ್ಲಿ ಹೀಗೆ ಪ್ರಶ್ನೆ ಮಾಡಿದರೆ ನಿಮ್ಮನ್ನು, ನಿಮ್ಮ ಲಗೇಜನ್ನು ವಿಮಾನದಿಂದ ಇಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ಕರ್ನಾಟಕದ ಹೆಮ್ಮೆಯ ಸಂಗೀತಗಾರನೊಟ್ಟಿಗೆ ಅನುಚಿತವಾಗಿ ವಿಮಾನ ಯಾನ ಸಿಬ್ಬಂದಿ ನಡೆದುಕೊಂಡಿದ್ದಾರೆ. ಈ ಬಗ್ಗೆ ರಿಕ್ಕಿ ಕೇಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರಿಕ್ಕಿ ಕೇಜ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ವಿಮಾನಯಾನ ಸಂಸ್ಥೆಯು ರಿಕ್ಕಿ ಕೇಜ್ ಬಳಿ ಕ್ಷಮೆ ಕೇಳಿದ್ದು ಅವರ ಟಿಕೆಟ್ ಹಣವನ್ನು ಶೀಘ್ರವೇ ಮರಳಿಸುವುದಾಗಿ ಸಹ ಹೇಳಿದೆ.

ಇದನ್ನೂ ಓದಿ:Ricky Kej: ಬೆಂಗಳೂರು ಮೂಲದ ರಿಕ್ಕಿ ಕೇಜ್​ಗೆ ಗ್ರ್ಯಾಮಿ ಅವಾರ್ಡ್​; 3 ಬಾರಿ ಪ್ರಶಸ್ತಿ ಗೆದ್ದ ಭಾರತೀಯ

ಕನ್ನಡದ ಕೆಲವು ಸಿನಿಮಾಗಳಿಗೆ ಸಂಗೀತ ನೀಡಿರುವ ಜೊತೆಗೆ ಹಲವು ಡಾಕ್ಯುಮೆಂಟರಿಗಳಿಗೆ ಸಂಗೀತವನ್ನು ರಿಕ್ಕಿ ಕೇಜ್ ನೀಡಿದ್ದಾರೆ. ಹಲವು ಸೋಲೊ ಆಲ್ಬಂಗಳು, ಸೋಲೊ ಹಾಡುಗಳಿಗೆ ರಿಕ್ಕಿ ಕೇಜ್ ನಿರ್ದೇಶಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಮಹತ್ವದ ಪ್ರಶಸ್ತಿ ಎನಿಸಿಕೊಂಡಿರುವ ಗ್ರ್ಯಾಮಿ ಪ್ರಶಸ್ತಿಯು ಮೂರು ಬಾರಿ ರಿಕ್ಕಿ ಕೇಜ್​ಗೆ ದೊರೆತಿರುವುದು ಅವರ ಪ್ರತಿಭೆಗೆ ಸಾಕ್ಷಿ. ರಿಕ್ಕಿ ಕೇಜ್ ಅವರನ್ನು ಸ್ವತಃ ಪ್ರಧಾನಿ ಮೋದಿ ಎರಡು ಬಾರಿ ಅಭಿನಂದಿಸಿದ್ದಾರೆ.

ಭಾರತವೇ ಹೆಮ್ಮೆ ಪಡಬೇಕಾದ ಸಂಗೀತಗಾರನೊಟ್ಟಿಗೆ ವಿಮಾನಯಾನ ಸಿಬ್ಬಂದಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ವಿಮಾನಯಾನ ಸಂಸ್ಥೆ ಕ್ಷಮೆ ಕೇಳಿದೆಯಾದರೂ ಹಲವರು ವಿಮಾನಯಾನ ಸಂಸ್ಥೆ ಸಿಬ್ಬಂದಿಯ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ